ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗಣಿಗಾರಿಕೆಗೆ ನೂತನ ಪರವಾನಗಿಗೆ ಚಿಂತನೆ ಅಕ್ರಮಕ್ಕೆ ಅವಕಾಶವಿಲ್ಲ

Mainashree
Updated On : 27 Jun 2014, 11:39 am

ಬೆಂಗಳೂರು: ರಾಜ್ಯದಲ್ಲಿ ಮುಚ್ಚಿರುವ ಗಣಿಗಾರಿಕೆ ಕಂಪನಿಗಳ ಪರವಾನಗಿ ನವೀಕರಣ ಹಾಗೂ ಹೊಸ ಕಂಪನಿ ತೆರೆಯಲು ನೂತನ ಪರವಾನಗಿ ನೀಡಲು ಸರ್ಕಾರ ಚಿಂತಿಸಿದೆ. ಆದರೆ ಅಕ್ರಮ ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಡಕ್ ಆಗಿ ಹೇಳಿದ್ದಾರೆ.
ಎಫ್‌ಕೆಸಿಸಿಐ ವತಿಯಿಂದ ಶುಕ್ರವಾರ ನಗರದ ಹೊಟೇಲೊಂದರಲ್ಲಿ ಏರ್ಪಡಿಸಿದ್ದ 97ನೇ ಸರ್ವಸದಸ್ಯರ ಮಹಾಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ, ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಗಣಿಗಾರಿಕೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಆದರೆ, ಅಕ್ರಮ ಗಣಿಗಾರಿಕೆಗೆ ಎಂದಿಗೂ ಅವಕಾಶ ಕೊಡುವುದಿಲ್ಲ. ರಾಜ್ಯದಲ್ಲಿ ಈಗ ಮುಚ್ಚಿರುವ ಕಂಪನಿಗಳನ್ನು ಗುರುತಿಸಿ ಅವರಿಗೆ ಪರವಾನಗಿ ನವೀಕರಣ ಮಾಡಲಾಗುವುದು. ಅದೇ ರೀತಿ ಹೊಸದಾಗಿ ಅರ್ಜಿ ಸಲ್ಲಿಸಿರುವವರಿಗೂ ಪರವಾನಗಿ ನೀಡಲಾಗುತ್ತದೆ ಎಂದರು.
ಉತ್ತರ ಕರ್ನಾಟಕದ 67 ಸ್ಟೀಲ್ ಕಾರ್ಖಾನೆಗಳಲ್ಲಿ (ಸಣ್ಣ ಕೈಗಾರಿಕೆ) 40 ಕಾರ್ಖಾನೆಗಳನ್ನು ಮುಚ್ಚಲಾಗಿದೆ. ಇದರಿಂದ 1 ಲಕ್ಷ ಮಂದಿ ನೇರ ಉದ್ಯೋಗಿಗಳು ಹಾಗೂ 5 ಲಕ್ಷ ಮಂದಿ ಪರೋಕ್ಷ ಸಿಬ್ಬಂದಿಗಳು ಕೆಲಸ ಕಳೆದುಕೊಂಡಿದ್ದಾರೆ. ಹಾಗಾಗಿ ಅವರಿಗೆ ಕೆಲಸ ಒದಗಿಸುವ ದೃಷ್ಟಿಯಿಂದ ಮುಚ್ಚಿರುವ ಕಂಪನಿಗಳನ್ನು ತೆರೆಯುವ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನೂತನ ಕೈಗಾರಿಕಾ ನೀತಿ: ಕೈಗಾರಿಕೋದ್ಯಮದಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದು, ಗುಜರಾತ್ 2ನೇ ಸ್ಥಾನದಲ್ಲಿತ್ತು. ಆದರೆ ರಾಜ್ಯ ಈಗ ಗುಜರಾತ್ ಹಿಂದಿಕ್ಕಿ ಕೈಗಾರಿಕೋದ್ಯಮದಲ್ಲಿ ದೇಶದಲ್ಲೇ 2ನೇ ಸ್ಥಾನದತ್ತ ಮುನ್ನುಗ್ಗಿದೆ.  ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ವಿವಿಧ ರಾಜ್ಯಗಳಲ್ಲಿನ ಕೈಗಾರಿಕೋದ್ಯಮದ ಬಗ್ಗೆ ಅಧ್ಯಯನ ಮಾಡಿದ್ದು, ಕೈಗಾರಿಕೆ ಅಭಿವೃದ್ಧಿಗೆ ಪೂರಕವಾಗಿ ನೂತನ ಕೈಗಾರಿಕಾ ನೀತಿ ಜಾರಿಗೆ ತರಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಇದು ಸಮತೋಲನ ಅಭಿವೃದ್ಧಿ ಕಾಣಬೇಕು. ಅದಕ್ಕೆ ಅಗತ್ಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದರು.
 ಸಿಎಂ ಅವರು ಅಹಿಂದ ಪರ ಎಂಬ ಮಾತುಗಳು ಕೇಳಿಬರುತ್ತಿವೆ. ನಾವು ಸಾಮಾಜಿಕ ಕೆಲಸ ಮಾಡುತ್ತಿದ್ದು, ನ್ಯಾಯಕ್ಕೆ ಒತ್ತುಕೊಡುತ್ತೇವೆ. ಇದಕ್ಕಿಂತ ಮತ್ತಾವ ರೀತಿ ಕೆಲಸ ಮಾಡಬೇಕು ಎಂದು ಪ್ರಶ್ನಿಸಿದರು. ಎಫ್‌ಕೆಸಿಸಿಐ ಅಧ್ಯಕ್ಷ ಶಿವಕುಮಾರ್, ನಿಯೋಜಿತ ಅಧ್ಯಕ್ಷ ಸಂಪತ್‌ರಾಮನ್, ಸುಧಾಕರ ಶೆಟ್ಟಿ, ತಲ್ಲಂ ದ್ವಾರಕಾನಾಥ್, ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement