ಸದಾ ವಿವಾದದಲ್ಲಿ ಮುಳುಗೆದ್ದ ಹಂಸ; ರಾಜಕೀಯ ಭಾರದ್ವಾಜ
ರಾಜಭವನ ಎಂದರೆ ಸಾಮಾನ್ಯ ಜನರಿಗೆ ಪ್ರವೇಶ ನಿಷಿದ್ಧ ಎಂಬ ನಂಬಿಕೆ ಹೋಗಲಾಡಿಸಿದ ಕೀರ್ತಿ...
- ಬಿಜೆಪಿ ಸರ್ಕಾರವನ್ನು ಎಡೆಬಿಡದೆ ಕಾಡಿದ ವ್ಯಕ್ತಿಯ ಹೆಸರೇನು?
- ತಮ್ಮ ಅಧಿಕಾರಾವಧಿಯಲ್ಲಿ ಅತ್ಯಂತ ಹೆಚ್ಚು ಸುದ್ದಿಯಲ್ಲಿದ್ದ ರಾಜ್ಯಪಾಲರು ಯಾರು?
- ಹೆಚ್ಚು ಮಾತನಾಡಿದ ರಾಜ್ಯಪಾಲರನ್ನು ಹೆಸರಿಸಿ.
- ರಾಜ್ಯದ ಅತ್ಯಂತ ವಿವಾದಿತ ರಾಜ್ಯಪಾಲರು ಯಾರು?
- ರಾಜಕೀಯ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದ ರಾಜ್ಯಪಾಲರ ಹೆಸರೇನು?
ಇವಿಷ್ಟೂ ಪ್ರಶ್ನೆಗಳಿಗೆ ಏಕೈಕ ಉತ್ತರ ಹಂಸರಾಜ ಭಾರದ್ವಾಜ್.
ಅವರಲ್ಲಿ ಕೇವಲ ಋಣಾತ್ಮಕ ಅಂಶಗಳೇ ಇವೆ ಅಂತಲ್ಲ. ರಾಜಭವನ ಎಂದರೆ ಸಾಮಾನ್ಯ ಜನರಿಗೆ ಪ್ರವೇಶ ನಿಷಿದ್ಧ ಎಂಬ ನಂಬಿಕೆ ಹೋಗಲಾಡಿಸಿದ ಕೀರ್ತಿ ಅವರಿಗೇ ಸಲ್ಲಬೇಕು. ರಾಜ್ಯಪಾಲರು ಎಂದರೆ ಕೇವಲ ಸರ್ಕಾರ ಹೇಳಿದಂತೆ ಕೇಳಿಕೊಂಡಿರುವ ಆಸಾಮಿ ಅಲ್ಲ ಎಂಬುದನ್ನೂ ಎಚ್.ಆರ್. ಭಾರದ್ವಾಜ್ ಸಾಬೀತು ಮಾಡಿದ್ದಾರೆ. ರಾಜ್ಯಪಾಲರು ಅಂದರೆ ಹೀಗೇ ಇರಬೇಕು ಎಂಬ ನಿಯಮಗಳನ್ನು ಮುರಿದಿದ್ದೂ ಅವರೇ. ಇದೇ ಸಾಕಷ್ಟು ವಿವಾದ ಸೃಷ್ಟಿಸಲು ಕಾರಣವೂ ಆಗಿರಬಹುದು. ಒಂದರ್ಥದಲ್ಲಿ ರಾಜ್ಯಪಾಲರಿದ್ದಾರೆ ಎಂದು ಅವರ ಅಸ್ತಿತ್ವ ತೋರಿಸಿಕೊಟ್ಟಿದ್ದೂ ಇವರೇ. ಅಂತಹ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ನಿವೃತ್ತರಾಗುತ್ತಿದ್ದಾರೆ.
ಯಾರಿಗೂ ಯಾವುದೇ ಲಾಭ- ನಷ್ಟ ಆಗದಿರಬಹುದು. ಆದರೆ ಪತ್ರಕರ್ತರಿಗೆ ಮಾತ್ರ ಖಂಡಿತ ನಷ್ಟವಾಗುತ್ತದೆ. ಯಾಕೆಂದರೆ ಎಚ್.ಆರ್. ಭಾರದ್ವಾಜ್ ಅವರು ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಪತ್ರಕರ್ತರಿಗೆ ಸಾಕಷ್ಟು ಕೆಲಸ ಒದಗಿಸಿದ್ದಾರೆ. ರಾಜ್ಯಪಾಲರ ಕಾರ್ಯಕ್ರಮ ಇದೆಯೆಂದರೆ ಸಾಕು, ಅವತ್ತೊಂದು ಮುಖಪುಟ ಸುದ್ದಿ ಗ್ಯಾರಂಟಿ. ಮತ್ತೊಂದೆರಡು ದಿನ ಅದರ ಫಾಲೋಅಪ್ ಎಂಬಷ್ಟರ ಮಟ್ಟಿಗೆ ಅವರ ಖ್ಯಾತಿಯಿದೆ. ಒಂದರ್ಥದಲ್ಲಿ ಅವರು ರಾಜಕೀಯದಲ್ಲಿ ವಿವಾದದ ಕೂಸು. ಆರಂಭದಿಂದಲೂ ಒಂದಿಲ್ಲೊಂದು, ವಿವಾದ, ಹೇಳಿಕೆಗಳಿಂದಲೇ ಜನಮನದಲ್ಲಿ ನೆಲೆಸಿದವರು.
ಅವುಗಳನ್ನೆಲ್ಲ ತಲೆಗೆ ಹಾಕಿಕೊಳ್ಳದೇ ಮತ್ತೆ ವಿವಾದ ಸೃಷ್ಟಿಸಿದವರು. ರಾಜ್ಯಪಾಲರಾಗಿದ್ದ ಅವಧಿಯಲ್ಲೂ ಹೆಚ್ಚಿನ ಪಾಲು ವಿವಾದಗಳೇ ಎಂಬುದೂ ಸುಳ್ಳಲ್ಲ.
ಎಚ್.ಆರ್. ಭಾರದ್ವಾಜ್ ಅವರನ್ನು ಕೇಂದ್ರ ಸರ್ಕಾರ ರಾಜ್ಯಪಾಲರನ್ನಾಗಿ ನೇಮಿಸಿದಾಗಲೇ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಕಿರಿಕ್ ಮಾಡಲೆಂದೇ ಅವರನ್ನು ನೇಮಿಸಲಾಗಿದೆ ಎಂಬುದು ಸ್ಪಷ್ಟವಾಗಿತ್ತು. ಅದಕ್ಕೆ ಸರಿಯಾಗಿ ರಾಜ್ಯಪಾಲರಾಗಿ ಬರುತ್ತಿದ್ದಂತೆ ಅವರು ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಟೀಕೆ ಆರಂಭಿಸಿದರು. ರಾಜ್ಯದಲ್ಲಿ ಯಾವುದೇ ಗಂಭೀರ ಗಲಾಟೆಗಳು ಇಲ್ಲದಿದ್ದರೂ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದರು. ಅದಾದ ನಂತರ ಅವರು ಹೆಚ್ಚು ಸುದ್ದಿಯಾಗಿದ್ದು ಗಣಿ ಗದ್ದಲದಲ್ಲಿ ಮತ್ತು ಬಿಜೆಪಿ ಸರ್ಕಾರದ ಸಚಿವರ ಬಂಧನದಲ್ಲಿ. ಮಾಜಿ ಮುಖ್ಯಮಂತ್ರಿಗಳಿಬ್ಬರ ತನಿಖೆಗೆ ಅನುಮತಿ ಕೇಳಿದಾಗ ಒಬ್ಬರ ವಿಚಾರಣೆಗೆ ಮಾತ್ರ ಅನುಮತಿ ಕೊಟ್ಟು, ತಮ್ಮ ಪಕ್ಷಕ್ಕೆ ಸೇರಿದ ಧರಂಸಿಂಗ್ ಬಗ್ಗೆ ಮೌನವಹಿಸಿದರು. ಅರ್ಜಿ ಬಂದ ಬಹುತೇಕ ಸಚಿವರ ವಿಚಾರಣೆಗೆ ಅನುಮತಿ ನೀಡುವ ಮೂಲಕ ಬಿಜೆಪಿ ಸರ್ಕಾರಕ್ಕೆ ಸಿಂಹಸ್ವಪ್ನರಾದರು.
ಅದಾದ ನಂತರ ದೊಡ್ಡ ಬಾಂಬ್ ಹಾಕಿದ್ದು ಬಿಜೆಪಿ ಸರ್ಕಾರ ವಿಧಾನಪರಿಷತ್ತಿಗೆ ಶಿಫಾರಸು ಮಾಡಿದ್ದ ಸದಸ್ಯರ ನೇಮಕ ಪಟ್ಟಿ ತಿರಸ್ಕರಿಸುವ ಮೂಲಕ. ಸರ್ಕಾರಕ್ಕೆ ತೀವ್ರ ಮುಜುಗರವಾದ ಘಟನೆ ಇದು. ಸೋಮಣ್ಣ ಅವರು ರಾಜಕೀಯ ವ್ಯಕ್ತಿ. ಅವರನ್ನು ಸಮಾಜಸೇವೆ ವಿಭಾಗದಲ್ಲಿ ಸೇರಿಸಲು ಸಾಧ್ಯವಿಲ್ಲ ಎಂದುಬಿಟ್ಟಿದ್ದರು ಭಾರದ್ವಾಜ್. ಅದೇ ರಾಜ್ಯಪಾಲರು ಕಾಂಗ್ರೆಸ್ ಸರ್ಕಾರ ಮೂರುದಿನದ ಹಿಂದಷ್ಟೇ ನೀಡಿದ ವಿಧಾನಪರಿಷತ್ ಸದಸ್ಯರ ನೇಮಕ ಪಟ್ಟಿಗೆ ತಕರಾರಿಲ್ಲದೇ ಸಮ್ಮತಿ ಸೂಚಿಸಿದ್ದಾರೆ. ಬಿಜೆಪಿ ಸರ್ಕಾರದ ಗೋ ಹತ್ಯಾ ನಿಷೇಧ ಕಾನೂನು, ವಿವಿಧ ವಿಶ್ವವಿದ್ಯಾಲಯಗಳ ನೇಮಕ ಸೇರಿದಂತೆ ಸಾಕಷ್ಟು ನಿರ್ಧಾರಗಳಿಗೆ ಅಡ್ಡಗಾಲಿಟ್ಟು ಮುಗ್ಗರಿಸಿಬೀಳುವಂತೆ ಮಾಡಿದ್ದೇ ರಾಜ್ಯಪಾಲರು.
ಆಗಾಗ ರಾಜ್ಯ ಸರ್ಕಾರದ ಕಾರ್ಯವೈಖರಿ ಟೀಕಿಸದಿದ್ದರೆ ರಾಜ್ಯಪಾಲರಿಗೆ ಸಮಾಧಾನವೇ ಆಗುತ್ತಿರಲಿಲ್ಲವೇನೋ ಎಂದು ಭಾವಿಸುವಷ್ಟು ಅವರು ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಅದರಲ್ಲಿ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಯಾವುದೇ ತಾರತಮ್ಯ ಮಾಡಿಲ್ಲ. ಯಾಕೆಂದರೆ ಕಾಂಗ್ರೆಸ್ ಸರ್ಕಾರವನ್ನೂ ಅವರು ಟೀಕಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಘೋಷಣೆಯಾಗುತ್ತಿದ್ದಂತೆ ಕೆಲವು ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದರ ವಿರುದ್ಧವೂ ರಾಜ್ಯಪಾಲರು ಟೀಕಾಸ್ತ್ರ ಪ್ರಯೋಗಿಸಿದ್ದರು. ಶಿಕ್ಷಣ ಸಚಿವರ ಜತೆಗಂತೂ ಜಟಾಪಟಿಗೇ ಇಳಿದಿದ್ದರು.
ಕೆಲವೊಮ್ಮೆ ಒಂದು ಸಂಗತಿಯನ್ನು ವಿರೋಧಿಸಿ, ನಂತರ ಸದ್ದಿಲ್ಲದೇ ಅದಕ್ಕೆ ಸಮ್ಮತಿ ನೀಡಿದ ಉದಾಹರಣೆಗಳೂ ಇವೆ. ಇನ್ನು ಕೆಲವೊಮ್ಮೆ ಒಂದೇ ರೀತಿಯ ಬೇರೆ ಬೇರೆ ಘಟನೆಗಳಿಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದೂ ಇದೆ. ಬಹಿರಂಗವಾಗಿ ಗೊತ್ತಾಗುವಷ್ಟು ದ್ವಂದ್ವ ನಿಲುವು ತಾಳಿದ್ದೂ ಇದೆ. ಯಾಕೆಂದರೆ ಅವರು ಟೀಕೆಗೆ ತಲೆಕೆಡಿಸಿಕೊಂಡವರಲ್ಲ. ಟೀಕಿಸಲು ಹಿಂಜರಿದವರಲ್ಲ.
ರಾಜಭವನವನ್ನು ಸಾರ್ವಜನಿಕರಿಗೆ ತೆರೆದಿದ್ದು ಎಚ್.ಆರ್. ಭಾರದ್ವಾಜ್ ಅವರ ಗುಣಾತ್ಮಕ ನಿರ್ಧಾರಗಳಲ್ಲೊಂದು. ಅವರ ಅವಧಿಯಲ್ಲಿ ಸಾಕಷ್ಟು ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮಗಳು ರಾಜಭವನದಲ್ಲೇ ನಡೆದವು. ರಮಾದೇವಿ ಅವರು ರಾಜ್ಯಪಾಲರಾಗಿದ್ದಾಗ ಸಾರ್ವಜನಿಕರಿಗಾಗಿ ತೆರೆದ ರಾಜಭವನದ ಬಾಗಿಲನ್ನು ಭಾರದ್ವಾಜ್ ಹೆಬ್ಬಾಗಿಲಾಗಿಸಿದರು. ಮೊದಲೆಲ್ಲ ರಾಜಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳೇ ಅಪರೂಪ. ರಾಜಭವನ ಅಂದರೆ ಅದು ಸಾರ್ವಜನಿಕರಿಂದ ದೂರ ಎಂದೇ ಭಾವಿಸುವಂತಿತ್ತು. ರಾಜ್ಯಪಾಲರು ಸರ್ಕಾರದ ಕೆಲವು ಕಾರ್ಯಕ್ರಮ ಮತ್ತು ವಿಶ್ವವಿದ್ಯಾಲಯ ಘಟಿಕೋತ್ಸವ ಬಿಟ್ಟು ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ ಎಚ್.ಆರ್. ಭಾರದ್ವಾಜ್ ಆ ನಂಬಿಕೆಯನ್ನೂ ಇಲ್ಲವಾಗಿಸಿದರು. ರಾಜ್ಯಪಾಲರನ್ನು ಸಾಮಾನ್ಯವಾಗಿ ಮಾಧ್ಯಮದವರು ಮಾತನಾಡಿಸುವ ಪರಿಪಾಠ ಇರಲಿಲ್ಲ. ಯಾಕೆಂದರೆ ಅವರು ಏನೂ ಹೇಳುತ್ತಿರಲಿಲ್ಲ. ಆದರೆ ಎಚ್.ಆರ್. ಭಾರದ್ವಾಜ್ ಮಾಧ್ಯಮ ಪ್ರತಿನಿಧಿಗಳನ್ನು ಕಂಡು ನಗುತ್ತ ತಾವಾಗೇ ಹತ್ತಿರ ಬಂದು ಮಾತನಾಡುತ್ತಿದ್ದರು. ಕೆಲವೊಮ್ಮೆ ಹೇಳಬೇಕೆನ್ನಿಸಿದರೆ ತಾವೇ ಮೈಕ್ ಹಿಡಿದುಕೊಂಡು ಹೇಳಿದ್ದೂ ಇದೆ. ಎಷ್ಟರ ಮಟ್ಟಿಗೆ ಅವರು ಮಾತನಾಡುತ್ತಿದ್ದರೆಂದರೆ, ಅವರ ಆಪ್ತ ಕಾರ್ಯದರ್ಶಿಗಳು ಮಾಧ್ಯಮ ಪ್ರತಿನಿಧಿಗಳಿಗೆ 'ದಯವಿಟ್ಟು ಎದುರಿಗೆ ಬರಬೇಡಿ, ಮಾತನಾಡಿಬಿಡುತ್ತಾರೆ, ನಂತರ ನಮಗೆ ಕಷ್ಟ' ಎಂದು ವಿನಂತಿಸುತ್ತಿದ್ದರು.
ವಿಚಿತ್ರ ವ್ಯಕ್ತಿತ್ವದ, ವಿಪರೀತ ರಾಜಕೀಯದ, ಅನೂಹ್ಯ ನಡೆಯ, ಅಸಾಂಪ್ರದಾಯಿಕ ನಿರ್ಧಾರಗಳ, ಪ್ರಚಾರಪ್ರಿಯ ಮನಸ್ಸಿನ, ವಿವಾದಗಳನ್ನು ಮೈಮೇಲೆಳೆದುಕೊಳ್ಳುವ ಭಾರದ್ವಾಜ್ ನಿವೃತ್ತಿ ಬೇರೆ ಯಾರಿಗೆ ಅಲ್ಲದಿದ್ದರೂ ಮಾಧ್ಯಮಗಳ ಪಾಲಿಗೆ ನಿಜವಾದ ಅರ್ಥದಲ್ಲಿ ತುಂಬಲಾರದ ನಷ್ಟ!
- ವಿನಾಯಕ ಭಟ್ಟ ಮೂರೂರು