ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಕ್ರಮ ರೆಸಾರ್ಟ್‌ಗೆ ಕಾವೇರಿತು ವನ್ಯಜೀವಿಧಾಮ!

ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಇಂದಿಗೂ ಕಂಟಕ..

Vishwanath S
Updated On : 29 Jun 2014, 1:05 am

ಮೈಸೂರು: ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಇಂದಿಗೂ ಕಂಟಕಪ್ರಾಯವಾಗಿರುವ ಅಕ್ರಮ ರೆಸಾರ್ಟ್‌ಗಳ ಪಿಡುಗು ಈಗ ಹೊಸದಾಗಿ ವಿಸ್ತರಿಸಲ್ಪಟ್ಟ ಕಾವೇರಿ ವನ್ಯಜೀವಿಧಾಮಕ್ಕೂ ಹಬ್ಬಿದೆ.
ಸೋಲಿಗೆರೆ ಗ್ರಾಮದಲ್ಲಿ 3 ಎಕರೆಗೂ ಮೀರಿದ ಪ್ರದೇಶದಲ್ಲಿ ರೆಸಾರ್ಟ್ ಅಕ್ರಮವಾಗಿ ಪ್ರಾರಂಭವಾಗಿದೆ. ತೋಟದ ಮನೆ ನಿರ್ಮಾಣಕ್ಕೆಂದು ಪಡೆದಿರುವ ಕೃಷಿ ಭೂಮಿಯಲ್ಲಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಖಾಸಗಿ ರೆಸಾರ್ಟ್ ಪ್ರಾರಂಭಿಸಿದ್ದಾರೆ. ಇದು ಕರ್ನಾಟಕ ಭೂಕಂದಾಯ ಕಾಯಿದೆ 1964ರ ಸೆಕ್ಷನ್ 95 (2)ರ ಸಂಪೂರ್ಣ ಉಲ್ಲಂಘನೆಯಾಗಿದೆ. ಈ ರೆಸಾರ್ಟ್ ನಡೆಸುತ್ತಿರುವ ಸ್ಥಳ 2011ರಲ್ಲೇ ವನ್ಯಜೀವಿಧಾಮದ ಭಾಗವಾಗಿ ಘೋಷಿಸಲ್ಪಟ್ಟಿದೆ. ವ್ಯಾವಹಾರಿಕ ರೆಸಾರ್ಟ್ ನಡೆಸಲು ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಸೆಕ್ಷನ್ 28ರಂತೆ ಅನುಮತಿ ಪಡೆದಿಲ್ಲ.
ವನ್ಯಪ್ರಾಣಿಗಳ ಆವಾಸನೆಲೆ
ಈ ಚಟುವಟಿಕೆಗಳು ನಡೆಯುವ ಸ್ಥಳ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ವಿವಿಧ ಶೆಡ್ಯೂಲ್‌ಗಳಲ್ಲಿ ಪಟ್ಟಿಯಾಗಿರುವ ಹುಲಿ, ಚಿರತೆ, ಆನೆ, ಕೆನ್ನಾಯಿ, ಚುಕ್ಕಿಜಿಂಕೆ, ಕಡವೆ, ಕಾಡೆಮ್ಮೆ ಮತ್ತಿತರ ಅಳಿವಿನಂಚಿನ ಮತ್ತು ರಕ್ಷಿಸಲ್ಪಟ್ಟ ವನ್ಯಪ್ರಾಣಿಗಳ ಬಹುಮುಖ್ಯ ಆವಾಸನೆಲೆ. ಜೊತೆಗೆ ಕರ್ನಾಟಕದಲ್ಲಿ ತರಕರಡಿ ದಾಖಲೆಯಾಗಿರುವ ಏಕೈಕ ತಾಣ.
ಕಾಯ್ದೆಗಳ ಉಲ್ಲಂಘನೆ
ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದಿದ್ದೇವೆಂದು ರೆಸಾರ್ಟ್ ಮಾಲೀಕರು ಹೇಳುತ್ತಾರೆ. ಆದರೆ ಇಲಾಖೆ ಅನುಮತಿ ರೆಸಾರ್ಟ್‌ನಲ್ಲಿ ಒದಗಿಸಲ್ಪಡುವ ಸೌಲಭ್ಯಗಳ ಮಟ್ಟಕ್ಕೆ ಮಾತ್ರ ಸೀಮಿತ.  ರಕ್ಷಿತಾರಣ್ಯಗಳ ಒಳಗೆ ರೆಸಾರ್ಟ್ ನಡೆಸಲು ಅನುಮತಿ ನೀಡುವ ಅಧಿಕಾರ ಹೊಂದಿಲ್ಲ. ಇಲಾಖೆಯಿಂದ ರಚಿಸಲ್ಪಟ್ಟ ವನ್ಯ ಪ್ರವಾಸೋದ್ಯಮ ಕಾರ್ಯನೀತಿ, ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿಧಾಮಗಳ ಒಳಗೆ ಅಥವಾ ರಕ್ಷಿತ ಪ್ರದೇಶಗಳ ವ್ಯಾಪ್ತಿಯೊಳಗೆ ಖಾಸಗಿ ರೆಸಾರ್ಟ್ ಚಟುವಟಿಕೆಗಳಿಗೆ ಅನುಮತಿಯಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ. ಸೋಲಿಗೆರೆ ಗ್ರಾಮದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ನೀಡಲ್ಪಟ್ಟ ಈ ಅನುಮತಿ, ಅದರದೇ ಕಾರ್ಯನೀತಿ ಮತ್ತು ಕಾಯ್ದೆಗಳ ಉಲ್ಲಂಘನೆಯಾಗಿದೆ.
ನೆಲಸಮಕ್ಕೆ ನೋಟಿಸ್
ರೆಸಾರ್ಟ್ ಮಾಲೀಕರಿಗೆ ಅರಣ್ಯ ಇಲಾಖೆ ಈಗಾಗಲೇ 2 ಬಾರಿ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅಕ್ರಮವಾಗಿ ರೆಸಾರ್ಟ್ ನಿರ್ಮಿಸಲಾಗಿದೆ. ನಾವು ನೋಟಿಸ್ ಜಾರಿ ಮಾಡಿದ್ದೇವೆ. ಕಾವೇರಿ ವನ್ಯಧಾಮ ಪ್ರದೇಶವೂ ಚಾಮರಾಜನಗರ ಜಿಲ್ಲೆ ವ್ಯಾಪ್ತಿಗೆ ಬರುತ್ತದೆ. ಆದರೆ ರೆಸಾರ್ಟ್ ಇರುವ ಪ್ರದೇಶ ರಾಮನಗರ ಜಿಲ್ಲೆಗೆ ಒಳಪಡುತ್ತದೆ. ಹೀಗಾಗಿ ರಾಮನಗರ ಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಇದರ ವಿರುದ್ಧ ರೆಸಾರ್ಟ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಾವು ಅಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿದ್ದು, ಯಾವುದೇ ಚಟುವಟಿಕೆ ನಡೆಯದಂತೆ ಎಚ್ಚರವಹಿಸಿದ್ದೇವೆ. ಆದರೆ ರೆಸಾರ್ಟ್ ಮಾಲೀಕರು ಬಂದು ಹೋಗುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂಬುದು ಅವರ ಸ್ಪಷ್ಟನೆ.



-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement