ಕಡೇ ದಿನವೂ ವಿವಾದದ ಆದೇಶ
ಹುದ್ದೆಯಿಂದ ನಿರ್ಗಮಿಸುವ ಕೊನೆ ಗಳಿಗೆಯಲ್ಲೂ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು..
ಬೆಂಗಳೂರು: ಹುದ್ದೆಯಿಂದ ನಿರ್ಗಮಿಸುವ ಕೊನೆ ಗಳಿಗೆಯಲ್ಲೂ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ತಮ್ಮ ಅಧಿಕಾರ ಚಲಾವಣೆ ಹಕ್ಕು ಬಿಟ್ಟಿಲ್ಲ. ಇದು ಕುಲಪತಿ ನೇಮಕ ನಿಯಮಕ್ಕೆ ವಿರುದ್ಧವಾಗಿದೆ ಎನ್ನಲಾಗಿದೆ.
ನಿವೃತ್ತಿಯ ದಿನವೇ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಅವರು ಕುಲಪತಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಹುದ್ದೆಗೆ ನಡೆಯುತ್ತಿದ್ದ ಪ್ರಬಲ ಲಾಬಿಯನ್ನು ಹಿಂದಿಕ್ಕಿ ರಾಜ್ಯಪಾಲರ ಅಂಕಿತದೊಂದಿಗೆ ಡಾ. ಮಹೇಶ್ವರ್ ಅವರು ಕುಲಪತಿಯಾಗಿ ನೇಮಕಗೊಂಡಿದ್ದಾರೆ. ಇವರು ಈ ಹಿಂದೆ ತೋಟಗಾರಿಕಾ ಇಲಾಖೆ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಡಾ.ಮಹೇಶ್ವರ್ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಶಿಫಾರಸು ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಕೊನೆ ಗಳಿಗೆಯಲ್ಲಿ ಹಂಸರಾಜ್ ಭಾರದ್ವಾಜ್ ಈ ಆದೇಶಕ್ಕೆ ಸಹಿ ಹಾಕಿದ್ದಾರೆ.