ಕುಲಪತಿ ನೇಮಕ ವಿವಾದ ನ್ಯಾಯಾಲಯಕ್ಕೆ?
ಬಾಗಲಕೋಟೆ: ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ನೇಮಕಕ್ಕೆ ಸಂಬಂಧಿಸಿದ ಪ್ರಕ್ರಿಯೆ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ನಿಚ್ಚಳವಾಗಿದೆ. ಡಾ.ಡಿ.ಎಲ್.ಮಹೇಶ್ವರ್ ಕುಲಪತಿಯಾಗಿ ನೇಮಕಗೊಂಡಿರುವುದಕ್ಕೆ ಕೃಷಿ ಮತ್ತು ತೋಟಕಾರಿಕೆ ವಿವಿಗಳ ಪ್ರಾಧ್ಯಾಪಕರ ಒಕ್ಕೂಟದ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಒಕ್ಕೂಟ ಸ್ಪಷ್ಟಪಡಿಸಿದೆ.
ಮಹೇಶ್ವರ್ ನೇಮಕ ಯುಜಿಸಿ ನಿಯಮಾವಳಿಗಳ ಪ್ರಕಾರ ನಡೆದಿಲ್ಲ. ರಾಜಕೀಯ ಪ್ರಭಾವ ಬಳಸಿ ರಾಜ್ಯಪಾಲರ ಅನುಮೋದನೆ ಪಡೆಯಲಾಗಿದೆ. ಯುಜಿಸಿ ನಿಯಮಾವಳಿ ಉಲ್ಲಂಘಿಸಿ ಮಧುರೈ ಕಾಮರಾಜ ವಿವಿಗೆ ಅನರ್ಹರನ್ನು ಕುಲಪತಿಗಳನ್ನಾಗಿ ಅಲ್ಲಿನ ರಾಜ್ಯಪಾಲರು ನೇಮಿಸಿದ್ದರು. ನಂತರ ನೇಮಕಾತಿ ಕ್ರಮ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಮೊರೆ ಹೋದಾಗ ಕುಲಪತಿ ನೇಮಕ ಅಕ್ರಮವೆಂದು ವಜಾ ಮಾಡಲಾಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಸಂಘಟನೆ ತಿಳಿಸಿದೆ.
ಯುಜಿಸಿ ನಿಯಮಾವಳಿ ಪ್ರಕಾರ ಕುಲಪತಿ ಹುದ್ದೆಗೆ ನೇಮಕಾತಿ ಆಗಬೇಕಾದರೆ ಮಾನ್ಯತೆ ಪಡೆದಿರುವ ಖಾಸಗಿ ಅಥವಾ ಸರ್ಕಾರಿ ವಿಶ್ವವಿದ್ಯಾಲಯ, ಇಲ್ಲವೇ ಪದವಿ ಕಾಲೇಜುಗಳಲ್ಲಿ ಕನಿಷ್ಠ 10 ವರ್ಷ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿರಬೇಕು. ಐವರು ಸಂಶೋಧನಾ ವಿದ್ಯಾರ್ಥಿಗಿಳಿಗೆ ಪಿಎಚ್.ಡಿ ಪ್ರಬಂಧ ಮಂಡಿಸಲು ಮಾರ್ಗದರ್ಶಕರಾಗಿರಬೇಕು. 10ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ನಿಯತಕಾಲಿಕೆಯಲ್ಲಿ ಪ್ರಕಟವಾಗಿರಬೇಕು ಎಂಬ ನಿಯಮಗಳಿವೆ. ಆದರೆ, ಡಾ.ಡಿ.ಎಲ್.ಮಹೇಶ್ವರ್ ಅವರಿಗೆ ಈ ಯಾವ ಅರ್ಹತೆಗಳು ಇಲ್ಲವೆಂಬ ವಾದ ಪ್ರಾಧ್ಯಾಪಕರ ಒಕ್ಕೂಟದ್ದು.