ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಿಮಗೆ ಮಾತ್ರ ಅಧಿಕಾರ ಭಾಗ್ಯ, ನಮಗೇಕೆ ಇಂಥ ದೌರ್ಭಾಗ್ಯ, ನಿಗಮ-ಮಂಡಳಿ ಯಾರಪ್ಪನ ಸ್ವತ್ತೆಂದ ಕೈ ಕಾರ್ಯಕರ್ತರು

ನಿಗಮ-ಮಂಡಳಿ ನೇಮಕ ವಿಳಂಬ, ಕಾರ್ಯಕರ್ತರ..

Vishwanath S
Updated On : 29 Jun 2014, 3:16 am

ಬೆಂಗಳೂರು: ನಿಗಮ-ಮಂಡಳಿ ನೇಮಕ ವಿಳಂಬ, ಕಾರ್ಯಕರ್ತರ ನಿರ್ಲಕ್ಷ್ಯದ ಬಗ್ಗೆ ಕಾಂಗ್ರೆಸ್ ಪ್ರತಿನಿಧಿಗಳ ಸಭೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವೇದಿಕೆಯಲ್ಲಿದ್ದ ಮುಖಂಡರತ್ತ ಕೈ ತೋರಿದ ಮಾಗಡಿ ಕಮಲಮ್ಮ ' ನಿಗಮ-ಮಂಡಳಿ ಯಾರ ಅಪ್ಪನ ಮನೆ ಸ್ವತ್ತು' ಎಂದು ಪ್ರಶ್ನಿಸಿದ್ದಾರೆ.
ಕಮಲಮ್ಮನವರ ಈ ಪ್ರಶ್ನೆಗೆ ವೇದಿಕೆ ಮುಂಭಾಗದಲ್ಲಿದ್ದ ಕಾರ್ಯಕರ್ತ ಮುಖಂಡರು ಚಪ್ಪಾಳೆ ತಟ್ಟಿದರೆ, ವೇದಿಕೆಯಲ್ಲಿದ್ದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸುಮ್ಮನಾಗಿಸಿದ್ದಾರೆ. ಮುಂಬರುವ ನಗರ-ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷ ಬಲಪಡಿಸುವ ಉದ್ದೇಶದಿಂದ ಕರೆದಿದ್ದ ಪ್ರತಿನಿಧಿಗಳ ಸಭೆಯ ಮೊದಲನೇ ದಿನವೇ ಕಾರ್ಯಕರ್ತರ ಆಕ್ರೋಶ ಮುಗಿಲುಮುಟ್ಟಿದೆ.
ಆಗಿದ್ದೇನು?: ಸಭೆಯಲ್ಲಿ ಮಾತನಾಡಲು ಇಚ್ಛೆ ವ್ಯಕ್ತಪಡಿಸಿ ಚೀಟಿ ಕಳುಹಿಸಿದ್ದ ಕಾರ್ಯಕರ್ತ ಮುಖಂಡರಿಗೆ ಅವಕಾಶ ನೀಡಲಾಗಿತ್ತು. ಆಗ ನಿಗಮ-ಮಂಡಳಿ ನೇಮಕ ವಿಳಂಬ ಮತ್ತು ಕಾರ್ಯಕರ್ತರ ಕಡೆಗಣನೆ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ತಮ್ಮ ಸರದಿ ಬಂದಾಗ ಕಾಂಗ್ರೆಸ್‌ನ ಹಿರಿಯ ಮುಖಂಡೆ ಮಾಗಡಿ ಕಮಲಮ್ಮ ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೂ ಕಾರ್ಯಕರ್ತರ ಕಡೆಗಣನೆಯಾಗುತ್ತಿದೆ. ಮುಖ್ಯಮಂತ್ರಿಗಳ ಮನೆಗೆ ಹೋದರೆ ಅಧ್ಯಕ್ಷರ ಕಡೆಯವರು ಎಂದು ಕಪ್ಪು ಪಟ್ಟಿಗೆ ಸೇರಿಸುತ್ತಾರೆ. ಅಧ್ಯಕ್ಷರ ಮನೆಗೆ ಹೋದರೆ ಸಿಎಂ ಕಡೆಯವರು ಎಂದು ದೂರ ಕಳುಹಿಸುತ್ತಾರೆ. ಇಬ್ಬರ ಸಹವಾಸ ಸಾಕು ಎಂದು ದೆಹಲಿಗೆ ಹೋದರೆ ಕೇಂದ್ರದ ಮುಖಂಡರು ಇಷ್ಟು ದೂರ ಏಕೆ ಬಂದಿದ್ದೀರಿ? ಬೆಂಗಳೂರಿಗೆ ಹೋಗಿ ಎಂದು ವಾಪಸ್ ಕಳುಹಿಸುತ್ತಾರೆ. ಹಾಗಾದರೆ ಕಾರ್ಯಕರ್ತರು, ಮುಖಂಡರು ಎಲ್ಲಿ ಹೋಗಬೇಕು? ಯಾರ ಬಳಿ ನೋವು ತೋಡಿಕೊಳ್ಳಬೇಕು? ಎಂದು ಪ್ರಶ್ನಿಸಿದರು. ಎಂಎಲ್‌ಸಿ, ನಿಗಮ-ಮಂಡಳಿ, ಆಯೋಗದ ನೇಮಕಕ್ಕೆ ಜಾತಿ ನೋಡುತ್ತಾರೆ. ನಾವು ಜಾತಿ ನೋಡಿ ಮತ ಹಾಕಿದ್ದೇವೆಯೇ?                     
ನಿಗಮ-ಮಂಡಳಿ ನೇಮಕಕ್ಕೆ ಯಾಕೆ ವಿಳಂಬವಾಗುತ್ತಿದೆ? ನಿಗಮ-ಮಂಡಳಿ ಯಾರ ಅಪ್ಪನ ಮನೆ ಸ್ವತ್ತೆ? ಎಂದು ವೇದಿಕೆಯಲ್ಲಿ ಕುಳಿತಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರತ್ತ ಕೈ ತೋರಿ ಪ್ರಶ್ನಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ ಒಂದೂವರೆ ವರ್ಷವಾಗುತ್ತಾ ಬಂತು. ಮಂತ್ರಿಗಳಿಗೆ ಮಾತ್ರ ಐದು ವರ್ಷ ಅಧಿಕಾರ. ಕಾರ್ಯಕರ್ತರು ನೇಮಕಗೊಳ್ಳುವ ನಿಗಮ-ಮಂಡಳಿಗೆ ಕೇವಲ 10 ತಿಂಗಳು ಅಧಿಕಾರ ಕೊಡಬೇಕು ಎಂದುಕೊಂಡಿದ್ದೀರಾ? ಎಂದು ಪ್ರಶ್ನಿಸಿದಾಗ, ವೇದಿಕೆಯಲ್ಲಿದ್ದ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶಗೊಂಡು 'ಏನು ಮಾತನಾಡುತ್ತಿದ್ದೀರಿ ನೀವು' ಎಂದು ತಡೆಯಲು ಹೋದಾಗ, ಖುದ್ದು ದಿಗ್ವಿಜಯ್ ಸಿಂಗ್ ಅವರೇ ಸಚಿವರನ್ನು ಸುಮ್ಮನಾಗಿಸಿದರು.
ಆದರೂ ಶಾಂತರಾಗದ ಕಮಲಮ್ಮ 'ಹೀಗೆ ಮಾಡಿದರೆ ಸರ್ಕಾರ ಇನ್ನು ಆರು ತಿಂಗಳಲ್ಲಿ ಮನೆಗೆ ಹೋಗಬೇಕಾಗುತ್ತದೆ' ಎಂದಾಗ, ಸಿಎಂ ಬೆಂಬಲಿಗರಾದ ಎಚ್.ಎಂ.ರೇವಣ್ಣ ಹಾಗೂ ಮಳವಳ್ಳಿ ಶಿವಣ್ಣ ವಾಗ್ವಾದಕ್ಕಿಳಿದರು. ಇದರಿಂದ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಆಗ ಮತ್ತೆ ದಿಗ್ವಿಜಯ್ ಸಿಂಗ್ ಕೋಪಗೊಂಡವರನ್ನು ಸಮಾಧಾನಪಡಿಸಬೇಕಾಯಿತು.
ಮುಖಂಡರ ಮಾತು...
ಪಕ್ಷದ ಕಾರ್ಯಕ್ರಮವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಸಭೆ ನಡೆಯುತ್ತಿರುವ ಬಗ್ಗೆ ಎಲ್ಲರಿಗೂ ಪತ್ರ ಹೋಗಿದೆ. ಗೈರುಹಾಜರಾಗಿರುವುದು ತಪ್ಪು. ಪರಮೇಶ್ವರ್ ಅವರೇ, ಸಭೆಗೆ ಬಾರದ ಸಚಿವರು,ಶಾಸಕರಿಗೆ ನೋಟಿಸ್ ನೀಡಿ. ಪಕ್ಷ ನಿರ್ಲಕ್ಷ್ಯ ಸಹಿಸುವುದಿಲ್ಲ.
- ದಿಗ್ವಿಜಯ್ ಸಿಂಗ್
ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವುದಕ್ಕೆ ಕಾರ್ಯಕರ್ತರು ಹತಾಶರಾಗಬಾರದು. ನಗರ-ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಿ, ಮುಂದಿನ 10 ವರ್ಷಗಳವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ರೀತಿ ಪಕ್ಷ ಸಂಘಟಿಸಬೇಕು.
- ಡಾ.ಜಿ.ಪರಮೇಶ್ವರಕೆಪಿಸಿಸಿ ಅಧ್ಯಕ್ಷ
ಕಾರ್ಯಕರ್ತರಿಗಿಂತಲೂ ಮುಖಂಡರು ಹತಾಶರಾಗಿದ್ದಾರೆ. ಪಕ್ಷದ ಬಲವರ್ಧನೆ ಮುಖ್ಯ. ದೇಶದಲ್ಲಿ 40 ಸ್ಥಾನಗಳಲ್ಲಿ ಗೆದ್ದಿರಬಹುದು. ಇದು 400 ಆಗಬೇಕಿದ್ದರೆ, ಸೋನಿಯಾ ಗಾಂಧಿ  ವಹಿಸಿರುವ ಕೆಲಸದಲ್ಲಿ ನಿಷ್ಠೆ ಮತ್ತು ಬದ್ಧತೆ ಬೇಕು.
-  ಮಲ್ಲಿಕಾರ್ಜುನ ಖರ್ಗೆಲೋಕಸಭಾ ಕಾಂಗ್ರೆಸ್ ನಾಯಕ
ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಹೋದರೆ ಪರಮೇಶ್ವರ ಕಡೆಯವರು ಎಂದು ಕಪ್ಪುಪಟ್ಟಿಗೆ ಸೇರಿಸುತ್ತಾರೆ. ಪರಮೇಶ್ವರ ಅವರ ಮನೆಗೆ ಹೋದರೆ ಸಿದ್ದರಾಮಯ್ಯ ಕಡೆಯವರು ಎಂದು ದೂರ ತಳ್ಳುತ್ತಾರೆ. ಯಾರ ಸಹವಾಸವೂ ಬೇಡ ಎಂದು ದೆಹಲಿಗೆ ಹೋದರೆ, ಇಷ್ಟು ದೂರ ಏಕೆ ಬಂದಿರಿ ? ಬೆಂಗಳೂರಿಗೆ ಹೋಗಿ ಎಂದು ವಾಪಸ್ ಕಳುಹಿಸುತ್ತಾರೆ. ಹಾಗಾದರೆ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು?
- ಮಾಗಡಿ ಕಮಲಮ್ಮ

ಮೈಸೂರಿಗೆ ಹೊರಟಿದ್ದ ಸಿಎಂನ ವಾಪಸ್ ಕರೆಸಿಕೊಂಡ ದಿಗ್ವಿಜಯ್
ಪ್ರತಿನಿಧಿಗಳ ಸಭೆಗೆ ಬಾರದೇ ಮೈಸೂರು ಜಿಲ್ಲಾ ಪ್ರವಾಸಕ್ಕೆ ಹೊರಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 'ಪಕ್ಷದ ಕಾರ್ಯಕ್ರಮಕ್ಕೆ ಗೈರು ಹಾಜರಾಗದಿರುವಂತೆ' ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸೂಚಿಸಿದ್ದಾರೆ. ಸಭೆ ಇದ್ದರೂ ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿ ರಫ್ತು ಕೇಂದ್ರದ ಶಂಕು ಸ್ಥಾಪನೆ ನೆರವೇರಿಸಲು ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮ ನಿಗದಿಯಾಗಿತ್ತು. ಈ ವಿಷಯ ತಿಳಿದ ದಿಗ್ವಿಜಯ್ ಸಿಂಗ್, ಪಕ್ಷದ ಕಾರ್ಯಕ್ರಮಕ್ಕೆ ಗೈರಾಗಬಾರದು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳು ಬಂದಿದ್ದಾರೆ. ಹೀಗಾಗಿ ನಿಮ್ಮ ಉಪಸ್ಥಿತಿ ಅಗತ್ಯ ಎಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರು ಸಭೆಗೆ ಹಾಜರಾಗಿ ಬೆಳಗಿನಿಂದ ಸಂಜೆಯವರೆಗೆ ಕುಳಿತಿದ್ದರು.

ಪರಮ್‌ಗೆ ಡಿಸಿಎಂ ಪಟ್ಟ ಕೊಡಿ
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಕರಪತ್ರ ಹಂಚಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಿಗೂ ಈ ಪತ್ರ ನೀಡಲಾಗಿದ್ದು, ರಾಜ್ಯದಲ್ಲಿ ದಲಿತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕಿದ್ದರೆ ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಲಾಗಿದೆ. ಮಾತ್ರವಲ್ಲ ತಮ್ಮ ಭಾಷಣ ಸಂದರ್ಭದಲ್ಲಿ ಕೆಲ ಜಿಲ್ಲಾ ಮುಖಂಡರು ಪರಮೇಶ್ವರ್ ಪರ ವಾದ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement