ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆರಿದ ಆರಿದ್ರಾ ಕೃಷಿಗೆ ಕಾಲಿಟ್ಟ ದಾರಿದ್ರ್ಯ

ಮೃಗಶಿರಾ ಹೋಗಿ, ಆರಿದ್ರಾ ನಕ್ಷತ್ರ ಆರಂಭ. ಇನ್ನೇನು ಪುಷ್ಯ ಮಳೆಯೂ ಕಾಲಿಡುತ್ತಿದೆ. ಇಷ್ಟಾಗಿಯೂ ರಾಜ್ಯದಲ್ಲಿ...

Mainashree
Updated On : 29 Jun 2014, 10:25 am

ಬೆಂಗಳೂರು:  ಮೃಗಶಿರಾ ಹೋಗಿ, ಆರಿದ್ರಾ ನಕ್ಷತ್ರ ಆರಂಭ. ಇನ್ನೇನು ಪುಷ್ಯ ಮಳೆಯೂ ಕಾಲಿಡುತ್ತಿದೆ. ಇಷ್ಟಾಗಿಯೂ ರಾಜ್ಯದಲ್ಲಿ ಬಿತ್ತನೆ ಮುಗಿದಿಲ್ಲ. ಮುಗಿಯುವುದಿರಲಿ, ಬಹುತೇಕ ಕಡೆ ಶುರುವೇ ಆಗಿಲ್ಲ.
ಮುಂಗಾರು ಹಿನ್ನಡೆಯಿಂದ ರಾಜ್ಯದಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಬತ್ತ, ರಾಗಿ, ಜೋಳ ಸೇರಿ ಆಹಾರ ಧಾನ್ಯಗಳ ಬಿತ್ತನೆಯೂ ಕುಂಟಿತಗೊಂಡಿದೆ. ಕೆಲವೆಡೆ ಮುಂಗಾರಿನ ಬಿರುಸಿನಲ್ಲಿ ಬಿತ್ತನೆಯಾದ ಬೆಳೆಯೂ ಮಳೆ ಇಲ್ಲದೆ ಬಾಡುತ್ತಿದೆ. ಕೃಷಿಯನ್ನೇ ನಂಬಿರುವ ರೈತರು ಕಂಗಾಲಾಗಿದ್ದಾರೆ. ಕಾಣೆಯಾದ ಮಳೆರಾಯನ ಆಗಮನಕ್ಕೆ ರೈತರು ಪ್ರಾರ್ಥಿಸುವುದೊಂದೇ ದಾರಿ.  
ಈಗಾಗಲೇ ಬರದ ಆತಂಕದೊಂದಿಗೆ ಆಗಸದಲ್ಲಿ ತೇಲುವ ನೈಋತ್ಯ ಮಾರುತದ ಮೋಡಗಳತ್ತ ರೈತರು ಮುಖ ಮಾಡಿದ್ದರೆ, ಸರ್ಕಾರ ಮಾತ್ರ ಹವಾ ನಿಯಂತ್ರಿತ ಕೊಠಡಿಯಲ್ಲಿ ತಣ್ಣಗೆ ಕುಳಿತಿದೆ. ಇನ್ನು ವಾರ ಕಾದು ನೋಡುವ ಹೇಳಿಕೆ ನೀಡಿ, ಬಿಸಿಗೆ ತಣ್ಣೀರು ಎರಚಿದೆ. ವಾಸ್ತವ ಭೀಕರವಾಗಿದೆ.
ಮುಂಗಾರಿನತ್ತ
ವಾಡಿಕೆ ಪ್ರಕಾರ, ಜೂನ್ ಅಂತ್ಯಕ್ಕೆ ರಾಜ್ಯದಲ್ಲಿ ಸರಾಸರಿ 160.30ಮಿಲಿ ಮೀಟರ್ ಮಳೆ ಆಗಬೇಕು. ಆದರೆ ಈ ತನಕ 110.49 ಮಿಲಿ ಮೀಟರ್‌ನಷ್ಟು ಮಾತ್ರ ಮಳೆ ಸುರಿದಿದೆ.  ಕಳೆದ ವರ್ಷ ಮೇ ಅಂತ್ಯಕ್ಕೆ 71 ಮಿಲಿ ಮೀಟರ್ ಮಳೆ ಸುರಿದಿತ್ತು. ಈ ಬಾರಿ, ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯತಿರಿಕ್ತ ವಾತಾವರಣ. ವಾಡಿಕೆ ಪ್ರಕಾರ 50 ಮಿ.ಮಿನಷ್ಟು  ಕೊರತೆ ಉಂಟಾಗಿದೆ.
ನೈಋತ್ಯ ಮಾರುತದ ಆಗಮನದೊಂದಿಗೆ ರಾಜ್ಯದಲ್ಲಿ ಇದುವರೆಗೂ ಕೃಷಿ ಚಟುವಟಿಕೆಗೆ ಹದವಾಗುವಷ್ಟು ಮಳೆ ಎಲ್ಲಿಯೂ ಸುರಿದಿಲ್ಲ. ಕರಾವಳಿ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳು ಸೇರಿದಂತೆ ಅಲ್ಲಲ್ಲಿ ಆಕಾಲಿಕ ಮಳೆ ಎಂದೋ ಒಮ್ಮೆ ಧೋ ಎಂದಿದೆ. ನಂತರ ಕಾಲಿಟ್ಟಿಲ್ಲ.
ಉಳಿದಂತೆ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಭಾಗಗಳು ಸೇರಿದಂತೆ ಇನ್ನು ಕೆಲವೆಡೆ ಬಿರುಸು ಇಲ್ಲದೆ, ಜೋರಾಗಿಯೂ ಬಾರದೆ, ಹಗುರ ಮಳೆಯಾಗುತ್ತಿದ್ದರೂ ಕೃಷಿಗೆ ಉಪಯೋಗಕ್ಕೆ ಬಾರದಂತಾಗಿದೆ.  ಬೀದರ್, ಗುಲ್ಬರ್ಗ, ಬಿಜಾಪುರ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ.
ಬಿತ್ತನೆ ಕಾರ್ಯ
ಕಳೆದ ವರ್ಷಕ್ಕೆ ಹೋಲಿಸಿದರೆ, ಬಿತ್ತನೆ ಕಾರ್ಯದಲ್ಲೂ ಭಾರಿ ಹಿನ್ನೆಡೆ ಆಗಿದೆ. ಮೇ ನಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದರಿಂದ ರೈತರು ಅಲ್ಲಿಂದಲೇ ಬಿತ್ತನೆ ಕಾರ್ಯ ಶುರುಮಾಡಿದ್ದರು. ಜೂನ್ ತಿಂಗಳ ಮಧ್ಯ ಭಾಗದ ಅವಧಿಗೆ ಬಿತ್ತನೆ ಮುಗಿದಿತ್ತು. ಆದರೆ ಈ ಬಾರಿ ಜೂನ್ ಮುಕ್ತಾಯವಾಗುತ್ತಾ ಬಂದರೂ ಇನ್ನು ಬಿತ್ತನೆ  ಶುರುವಾಗಿಲ್ಲ.
ತೀವ್ರ ಮಳೆ ಕೊರತೆ ಕಾರಣದಿಂದ ಬೇಸಿಗೆಯಿಡಿ ಉಳುಮೆ ಮಾಡಿ ಬಿತ್ತನೆಗೆ ಹಸನುಗೊಳಿಸಿದ ಭೂಮಿ ಹದವೇ ಆಗಿಲ್ಲ. ಹದವಿಲ್ಲದ ಭೂಮಿಗೆ ಬಿತ್ತನೆ ಬೀಜ ಕಾಣುವ ಭಾಗ್ಯ ದೊರೆತಿಲ್ಲ. ಸಮಯಕ್ಕೆ  ಬಿತ್ತನೆ ಬೀಜ, ರಸಗೊಬ್ಬರ ಸಿಕ್ಕರೂ ಪ್ರಯೋಜನವಾಗಿಲ್ಲ. ಸದ್ಯ ರಾಜ್ಯದ ಉದ್ದಗಲಕ್ಕೂ ಕಾಣುವ ಚಿತ್ರಣವಿದು.  ಜೂನ್ ಆರಂಭಿಕ ದಿನಗಳಲ್ಲಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಅಲ್ಲಿ ಬತ್ತದ ನಾಟಿಗೆ ಸಿದ್ಧತೆ ನಡೆದಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಬತ್ತ, ರಾಗಿ, ಜೋಳ ಬಿತ್ತನೆ ಕಾರ್ಯವೂ ನಡೆದಿದೆ.  ಉಳಿದಂತೆ ಬೆಳಗಾವಿ, ಧಾರವಾಡ, ಬೀದರ್, ಗುಲ್ಬರ್ಗ, ಬಿಜಾಪುರ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ರಾಗಿ, ಜೋಳ, ಹತ್ತಿ ಬಿತ್ತನೆಗೆ ಭೂಮಿ ಅಗತ್ಯದಷ್ಟು ಹದವಾಗಿಲ್ಲ.

ಉತ್ತರದಲ್ಲಿ ಶೂನ್ಯ
ಬಿತ್ತನೆ ಪ್ರಗತಿಯಲ್ಲಿ ಈ ತನಕ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ದಕ್ಷಿಣ
ಕನ್ನಡ, ಉಡುಪಿ, ಬಿಜಾಪುರ, ಗುಲ್ಬರ್ಗ ಹಾಗೂ ಬೀದರ್‌ನಲ್ಲಿ ಶೇಕಡಾ 0 ಪ್ರಗತಿ ಸಾಧಿಸಲಾಗಿದೆ. ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು ಧಾರವಾಡ, ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಶೇ. 25ರಷ್ಟು ಬಿತ್ತನೆ ಕಾರ್ಯ ನಡೆದಿದೆ. ವಾರ್ಷಿಕ ವಾಡಿಕೆ ಪ್ರಕಾರ ಬಿತ್ತನೆ ಕಾರ್ಯದಲ್ಲಿ  ಸಾಕಷ್ಟು ಹಿನ್ನಡೆ ಆಗಿದೆ. ಈಗಲಾದರೂ ಮಳೆ ಬಂದರೆ ಮಾತ್ರ ಬೆಳೆ ಎನ್ನುವ ಪರಿಸ್ಥಿತಿ ಎಲ್ಲ ಕಡೆ ಕಾಣುತ್ತಿದೆ.

24 ಗಂಟೆಗಳಲ್ಲಿ ಸಾಧಾರಣ ಮಳೆ
ಬೆಂಗಳೂರು
: ರಾಜ್ಯದ ಹಲವೆಡೆ ಮಳೆಯಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ 2-3 ದಿನಗಳಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರು, ತುಮಕೂರು, ದೊಡ್ಡಬಳ್ಳಾಪುರ, ರಾಮನಗರ ಸೇರಿದಂತೆ ಭಾನುವಾರ ಸಂಜೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಸಾಧಾರಣ ರಾಜ್ಯಾದ್ಯಂತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ನೈಋತ್ಯ ಮಾರುತ ದುರ್ಬಲವಾಗಿದ್ದು, ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗಲಿದೆ. ಮುಂದಿನ ಮೂರ್ನಾಲ್ಕು ದಿನದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಅಭಾವ?
(ಜೂನ್ ತಿಂಗಳಲ್ಲಿ)
ದೇಶಾದ್ಯಂತ ಮಳೆ ಕೊರತೆ
42ರ್
ಕರ್ನಾಟಕದಲ್ಲಿ
35ರ್
ಕೊಂಕಣ, ಗೋವಾ
56ರ್
ಕೇರಳ
24ರ್
ಗುಜರಾತ್
88ರ್            ರಾಜಸ್ಥಾನ    
80ರ್
ಕಳೆದ 113 ವರ್ಷಗಳಲ್ಲಿ 'ಅಭಾವ' ಎಷ್ಟನೇ ಬಾರಿ?
12

42ರ್

ದೇಶಾದ್ಯಂತ ಮಳೆ ಅಭಾವ

ನವದೆಹಲಿ:
ಜೂನ್ ತಿಂಗಳು ಮುಗಿದರೂ ಇನ್ನೂ ವರುಣ ಕೃಪೆ ತೋರದಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಜೂನ್ ತಿಂಗಳಲ್ಲಿ ದೇಶಾದ್ಯಂತ ಸರಾಸರಿ ಶೇ.42ರಷ್ಟು ಮಳೆಯ ಅಭಾವ ಉಂಟಾಗಿದೆ. ಈ ಅವಧಿಯಲ್ಲಿ ಕರ್ನಾಟಕದಲ್ಲಿ ಉಂಟಾದ ಅಭಾವ ಶೇ.35. ಕಳೆದ 113 ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯ ಕೊರತೆ ಕಾಡಿರುವುದು ಇದು 12ನೇ ಬಾರಿ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement