ಸೋಲಿನ ಅವಲೋಕನಕ್ಕೆ ಕೈ ಪಾದಯಾತ್ರೆ
ಸೋಲಿನ ಅವಲೋಕನದ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ರಾಜ್ಯದಲ್ಲಿ...
ಬೆಂಗಳೂರು: ಸೋಲಿನ ಅವಲೋಕನದ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ರಾಜ್ಯದಲ್ಲಿ ಪಾದಯಾತ್ರೆ ಮಾಡಲು ನಿರ್ಧರಿಸಿದೆ. 224 ವಿಧಾನಸಭೆ ಕ್ಷೇತ್ರದಲ್ಲೂ ಪಾದಯಾತ್ರೆ ನಡೆಸಲಿದೆ.
ಪಕ್ಷ ಸಂಘಟನೆಗಾಗಿ ಜುಲೈ ತಿಂಗಳಿನಿಂದ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ, ಸಾಂಸ್ಥಿಕ ಚುನಾವಣೆ, ಪಾದಯಾತ್ರೆ, ವಿವಿಧ ಘಟಕಗಳ ಸಮಾವೇಶದ ಜೊತೆಗೆ ಎಐಸಿಸಿ ಮಾದರಿಯಲ್ಲಿಯೇ ಕೆಪಿಸಿಸಿ ಕಾರ್ಯಕಾರಿಣಿಯನ್ನು ಬೆಂಗಳೂರಿನಲ್ಲಿಯೇ ನಡೆಸಲು ನಿರ್ಧರಿಸಿದೆ. ನಗರದ ಅರಮನೆ ಆವರಣದಲ್ಲಿ ಜೂನ್ 28 ಮತ್ತು 29 ರಂದು ಎರಡು ದಿನಗಳ ಕಾಲ ನಡೆದ ಕಾಂಗ್ರೆಸ್ ಪ್ರತಿನಿಧಿಗಳ ಸಭೆಯಲ್ಲಿ ಗಣ್ಯರು ಮತ್ತು ಪಕ್ಷದ ಮುಖಂಡರು ವ್ಯಕ್ತಪಡಿಸಿದ ಅಭಿಪ್ರಾಯ, ವಿರೋಧ,ಅನಿಸಿಕೆಗಳ ಹಿನ್ನೆಲೆಯಲ್ಲಿ ಪಕ್ಷ ಬಲಪಡಿಸಲು ತೆಗೆದುಕೊಂಡ ನಿರ್ಧಾರಗಳನ್ನು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದರು.
ಪಾದಯಾತ್ರೆ: ಜುಲೈ ತಿಂಗಳಿನಿಂದ ಸದಸ್ಯತ್ವ ಅಭಿಯಾನ ಶುರುವಾಗಲಿದೆ. ಇದು ಡಿಸೆಂಬರ್ ತಿಂಗಳಿಗೆ ಮುಕ್ತಾಯವಾಗಲಿದ್ದು, ಈ ನಡುವೆಯೇ ಆಗಸ್ಟ್ನಲ್ಲಿ ರಾಜ್ಯ ಮಟ್ಟದ ಯುವ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಸೆಪ್ಟೆಂಬರ್ನಲ್ಲಿ ವಿವಿಧ ಘಟಕಗಳ ರಾಜ್ಯ ಮಟ್ಟದ ಸಮಾವೇಶ, ಅಕ್ಟೋಬರ್ 2ರಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಬೃಹತ್ ಮಟ್ಟದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಎಐಸಿಸಿ ಮಾದರಿಯಲ್ಲಿಯೇ ಕೆಪಿಸಿಸಿ ಕಾರ್ಯಕಾರಣಿಯನ್ನು ಬೆಂಗಳೂರಿನಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ. ಇದು ದೇಶದಲ್ಲಿಯೆ ಮೊದಲ ಬಾರಿಗೆ ನಡೆಯಲಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷರಾದ ರಾಹುಲ್ ಗಾಂಧಿ ಸೇರಿದಂತೆ ಹಲವು ಮಂದಿ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ.ಅಭಿಯಾನ ಮತ್ತು ಸಮಾವೇಶದ ಜೊತೆಗೆ ಬ್ಲಾಕ್, ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಾಂಸ್ಥಿಕ ಚುನಾವಣೆಗಳನ್ನು ನಡೆಸಲಾಗುತ್ತದೆ.
ಸಮನ್ವಯತೆಯಲ್ಲಿ ವ್ಯತ್ಯಾಸ ಆಗಿಲ್ಲ: ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯದ ಕೊರತೆ ಆಗಿಲ್ಲ. ಹಿಂದೆ ಈ ರೀತಿಯ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿಯೇ ಸಮನ್ವಯ ಸಮಿತಿ ರಚಿಸಲಾಗಿತ್ತು. ಅನಂತರ ಸರಿಪಡಿಸುವ ಕೆಲಸಗಳಾದವು. ಈಗ ಎಲ್ಲವೂ ಸರಿಹೋಗಿದೆ. ಪಕ್ಷ ಮತ್ತು ಸರ್ಕಾರದ ಮಧ್ಯೆ ಸಾಕಷ್ಟು ಸಮನ್ವತೆ ಇದೆ. ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನೆಲ್ಲ ಒಂದು ವರ್ಷದ ಅವಧಿಯಲ್ಲಿಯೇ ಈಡೇರಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಸಭೆಯಲ್ಲಿ ಮತ್ತೆ ಡಿಸಿಎಂ ಹುದ್ದೆ ಪ್ರಸ್ತಾಪ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನೀಡುವ ವಿಚಾರ ಕಾಂಗ್ರೆಸ್ ಪ್ರತಿನಿಧಿಗಳ ಸಮಾವೇಶದ ಎರಡನೇ ದಿನ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸಮಾವೇಶದಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಎಂ.ವಿ.ರಾಜಶೇಖರನ್, ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನೀಡುವ ವಿಚಾರ ಪ್ರಸ್ತಾಪಿಸಿದರು. ಪಕ್ಷ ಸಂಘಟನೆಗೆ ಪರಮೇಶ್ವರ್ ಅವರು ತನ್ನದೆಯಾದ ಕೊಡುಗೆ ನೀಡಿದ್ದಾರೆ. ಅವರಿಗೆ ಸೂಕ್ತ ಸ್ಥಾನ-ಮಾನ ನೀಡುವ ಅಗತ್ಯವಿದೆ ಎಂದರು. ಸಭೆಯಲ್ಲಿದ್ದ ಸಿಎಂ ಸಿದ್ದರಾಮಯ್ಯನವರ ಕಡೆಯವರೆನ್ನಲಾದ ಕೆಲವರು ರಾಜಶೇಖರನ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಮತ್ತೆ ಕೆಲವರು ಆಕ್ಷೇಪಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡತೊಡಗಿದರು. ಪರಸ್ಪರ ಪರ-ವಿರೋಧದ ಹೇಳಿಕೆಗಳಿಂದ ಸಭೆಯಲ್ಲಿ ಗೊಂದಲ ಉಂಟಾಯಿತು. ಈ ಮಧ್ಯೆಯೇ ತಮ್ಮ ಮಾತುಗಳನ್ನು ಮುಂದುವರೆಸಿದ ರಾಜಶೇಖರನ್, ಸರ್ಕಾರ ಈ ತನಕ ಸರಿಯಾದ ದಿಕ್ಕಿನಲ್ಲಿಯೇ ಸಾಗಿದೆ. ಕೆಲವು ಸಂದರ್ಭದಲ್ಲಿ ಮಾತ್ರ ರಾಂಗ್ಸಿಗ್ನಲ್ನಲ್ಲಿ ನಿಂತು ಬಿಡುತ್ತದೆ ಎಂದು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.