ಒಡೆಯರ್ ಆಸ್ತಿ ಅಕ್ರಮ: ಹಂಸವೇಣಿ ಜಾಮೀನು ತಿರಸ್ಕೃತ
ಮೈಸೂರು: ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕುಟುಂಬಕ್ಕೆ ಸೇರಿದ 30 ಕೋಟಿ ಮೌಲ್ಯದ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಜಿಲ್ಲಾ ನೋಂದಣಾಧಿಕಾರಿ ಹಾಗೂ ಮುದ್ರಾಂಕಗಳ ಉಪ ಆಯುಕ್ತೆ ಎಲ್.ಜಿ. ಹಂಸವೇಣಿ ಅವರ ನಿರೀಕ್ಷಣಾ ಜಾಮೀನ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಹಂಸವೇಣಿ ಜೂ. 6ರಿಂದ ನಾಪತ್ತೆಯಾಗಿದ್ದು, ಇವರ ಬಂಧನಕ್ಕಾಗಿ ಲೋಕಾಯುಕ್ತ ಪೊಲೀಸರು ಶೋಧ ಮುಂದುವರೆಸಿದ್ದರು. ಈ ನಡುವೆ, ಹಂಸವೇಣಿ ಅವರು ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಯನ್ನು ಪುರಸ್ಕರಿಸಬಾರದೆಂದು ಲೋಕಾಯುಕ್ತ ವಿಶೇಷ ಅಭಿಯೋಜಕ ಬಿ.ಎನ್. ವೃಷಬೇಂದ್ರ ವಾದ ಮಂಡಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಸುರೇಶ್ ಎಸ್. ಕೋಗಿಲಗೇರಿ, ಹಂಸವೇಣಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.