ಕಬ್ಬಿಗರ ಧರಣಿ ಅಂತ್ಯ
ಬಿಜಾಪುರ: ಪ್ರತಿ ಟನ್‌ಗೆ ಮುಂಗಡ 2,000 ನೀಡಬೇಕು, ಕಬ್ಬು ಪೂರೈಸಿದ 14 ದಿನಗಳೊಳಗಾಗಿ ಬಿಲ್ ಪಾವತಿಸಬೇಕು ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 15 ದಿನಗಳಿಂದ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸೋಮವಾರ ಅಂತ್ಯಗೊಂಡಿದೆ. ಸಂಜೆ ಜಿಲ್ಲಾಡಳಿತ ಇಂಡಿ ತಾಲೂಕಿನ ಮೂರು ಹಾಗೂ ಸಿಂದಗಿ ತಾಲೂಕಿನ ಎರಡು ಖಾಸಗಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ಎಫ್‌ಐಆರ್ ಪ್ರತಿ ಪ್ರದರ್ಶನ ಮಾಡಿದ ನಂತರ ರೈತರು ಸತ್ಯಾಗ್ರಹ ಹಿಂತೆಗೆದುಕೊಂಡರು. ಇದಕ್ಕೂ ಮೊದಲು ಸಕ್ಕರೆ ಕಾರ್ಖಾನೆಗಳ ವಿರುದ್ಧ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿಗೆ ದಿಗ್ಬಂಧನ ಹಾಕಿ ಪ್ರತಿಭಟಿಸಿದ್ದರು. ಜಿಲ್ಲಾ ರೈತ ಒಕ್ಕೂಟದ ಅಧ್ಯಕ್ಷ ಪಂಚಪ್ಪ ಕಲ್ಬುರ್ಗಿ, ಶ್ರೀಮಂತ ದುದ್ದಗಿ, ಅಶೋಕ ಒಡೆಯರ್, ಎಸ್.ವಿ. ಪಾಟೀಲ ಮತ್ತಿತರರು ಇದ್ದರು.