ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಲಾಪದ ಗುಣಮಟ್ಟ ಕುಸಿಯುತ್ತಿದೆ, ನಾಣಯ್ಯ ಸಹ ನಿವೃತ್ತರಾಗುತ್ತಿದ್ದಾರೆ...

ವಿಧಾನ ಪರಿಷತ್‌ನಲ್ಲಿ ನಡೆಯುತ್ತಿರುವ ಚರ್ಚೆಗಳ...

Mainashree
Updated On : 1 Jul 2014, 1:10 am

ವಿಧಾನ ಪರಿಷತ್‌ನಲ್ಲಿ ನಡೆಯುತ್ತಿರುವ ಚರ್ಚೆಗಳ ಗುಣಮಟ್ಟ ಕುಸಿಯುತ್ತಿದೆ ಎಂಬ ಕಾಲಘಟ್ಟದಲ್ಲಿಯೇ ನಾಣಯ್ಯ ಅವರು ಕೂಡ ನಿವೃತ್ತಿಯಾಗುತ್ತಿರುವುದು ಕಾಕತಾಳೀಯ. ಅವರು ಪ್ರತಿನಿಧಿಸುತ್ತಿರುವ ಪಕ್ಷ ಅಧಃಪತನಕ್ಕೆ ಹೋಗುತ್ತಿದ್ದಾಗ, ಅವರಂತಹ ಪ್ರಾಮಾಣಿಕ, ನಿಷ್ಠುರ ವ್ಯಕ್ತಿಗೆ ಮತ್ತೆ ಅವಕಾಶ ಸಿಗದಿರುವುದು ಕೂಡ ವಿಪರ್ಯಾಸ.


ಅವರು ಸದನದಲ್ಲಿ ಎದ್ದು ನಿಂತರೆ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಕೂರುತ್ತಾರೆ. ಎದುರು ನಿಂತು ಮಾತನಾಡುವ ಸದಸ್ಯರನ್ನು ತೊಡೆ ತಟ್ಟದೇ ತಮ್ಮ ಹರಿತ ಮಾತಿನ ಮೂಲಕವೇ ಮೂರ್ಖರನ್ನಾಗಿಸುತ್ತಾರೆ. ಸದನದ ಗೌರವಕ್ಕೆ ಚ್ಯುತಿ ಬಂದಾಗ ಪಕ್ಷಾತೀತವಾಗಿ ವರ್ತಿಸುತ್ತಾರೆ. ನಿಮ್ಮನ್ನ ಸದನದಲ್ಲಿ ಮಿಸ್ ಮಾಡ್ಕೊತೀವಿ ಸಾರ್ ಅಂತ ಎಲ್ಲ ಪಕ್ಷದವರೂ ಹೇಳುತ್ತಾರೆ. ಅಕ್ರಮಗಳ ವಿಚಾರ ಬಂದಾಗ ಆರೋಪಿ ಸ್ಥಾನದಲ್ಲಿ ಯಾರೇ ಇದ್ದರೂ ಧೈರ್ಯವಾಗಿ ವಿರೋಧಿಸುತ್ತಾರೆ. ಯಾವ ಮುಲಾಜಿಲ್ಲದೇ ಯಾರನ್ನಾದರೂ ಪ್ರಶ್ನಿಸುತ್ತಾರೆ. ಇದೇ ನಿಷ್ಠುರ ನಿಲುವು ಅವರಿಗೆ ವಿಧಾನಪರಿಷತ್ ಸದಸ್ಯತ್ವ ಮುಂದುವರಿಯಲು ತೊಡಕಾಗಿರಲೂಬಹುದು.
ಇಂತಹ ಒಬ್ಬ ವಿಶಿಷ್ಟ ಸಂಸದೀಯ ಪಟು ಮೇರಿಯಂಡ ಚಂಗಪ್ಪ ನಾಣಯ್ಯ. ಸುಮಾರು 3 ದಶಕಗಳ ನಾಣಯ್ಯನವರ ಸದನದ ಜೀವನಕ್ಕೆ ಬ್ರೇಕ್ ಬಿದ್ದಿದೆ. ವಿಧಾನಮಂಡಲದ ಹಿರಿಯರ ಸದನದಿಂದ ಸೋಮವಾರ ಅವರು ನಿವೃತ್ತಿಯಾಗಿದ್ದಾರೆ.
ವಿಧಾನ ಪರಿಷತ್‌ನಲ್ಲಿ ನಡೆಯುತ್ತಿರುವ ಚರ್ಚೆಗಳ ಗುಣಮಟ್ಟ ಕುಸಿಯುತ್ತಿದೆ ಎಂಬ ಕಾಲಘಟ್ಟದಲ್ಲಿಯೇ ನಾಣಯ್ಯ ಅವರು ಕೂಡ ನಿವೃತ್ತಿಯಾಗುತ್ತಿರುವುದು ಕಾಕತಾಳೀಯ. ಅವರು ಪ್ರತಿನಿಧಿಸುತ್ತಿರುವ ಪಕ್ಷ ಅಧಃಪತನಕ್ಕೆ ಹೋಗುತ್ತಿದ್ದಾಗ, ಅವರಂತಹ ಪ್ರಾಮಾಣಿಕ, ನಿಷ್ಠುರ ವ್ಯಕ್ತಿಗೆ ಮತ್ತೆ ಅವಕಾಶ ಸಿಗದಿರುವುದು ಕೂಡ ವಿಪರ್ಯಾಸ. ಆದರೆ ಇದನ್ನು ತಮ್ಮದೇ ಶೈಲಿಯಲ್ಲಿ ವಿವರಿಸುವ ನಾಣಯ್ಯ, 'ಹೊಸಬರಿಗೆ ಅವಕಾಶ ನೀಡುವಾಗ ಇದೆಲ್ಲ ಸಂಭವಿಸುತ್ತದೆ' ಎಂದು ಜನತಾ ಪರಿವಾರದ ಮೇಲಿನ ನಿಷ್ಠೆ ತೋರಿಸುತ್ತಾರೆ.
ನಾಣಯ್ಯ ಕುರಿತಂತೆ ಯಾವುದೇ ಮಾತುಗಳು ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ವಿಧಾನಪರಿಷತ್‌ನಲ್ಲಿ ಸೋಮವಾರ ನಡೆದ ವಿದಾಯದ ಭಾಷಣಗಳಲ್ಲಿ ಪ್ರತಿಯೊಬ್ಬ ಸದಸ್ಯರೂ ನಾಣಯ್ಯ ಅವರನ್ನು ಇದೇ ದಾಟಿಯಲ್ಲಿ ಕೊಂಡಾಡಿದರು. 'ನಾವು ನಿಯಮ ತಪ್ಪಿದಾಗ ಪ್ರತಿ ಕ್ಷಣದಲ್ಲೂ ಎಚ್ಚರಿಸುತ್ತಿದ್ದ ನಾಣಯ್ಯ ಇಲ್ಲದ ಸದನದಲ್ಲಿ ನಾವಿನ್ನು ಇರಬೇಕು' ಎಂದು ಅಭಿಪ್ರಾಯಪಡುತ್ತಾರೆ. ವಿಧಾನ ಪರಿಷತ್‌ನ ಲಾಂಜ್‌ನಲ್ಲಿ ಪ್ರತಿಯೊಬ್ಬರ ಮಾತಿಗೂ ನಾಣಯ್ಯ ನಿವೃತ್ತಿಯೇ ವಿಷಯವಾಗಿತ್ತು. 'ವಿ ರೀಯಲಿ ಮಿಸ್ ಯೂ ಸರ್‌' ಎನ್ನುವುದು ಪಕ್ಷಾತೀತ ಮಾತಾಗಿತ್ತು.
ತೋರಿಕೆಯ ವ್ಯಕ್ತಿಯಲ್ಲ
ಕಡತದಲ್ಲಿ ಬರಬೇಕು ಎಂದು ಗಂಟೆಗಟ್ಟಲೇ ಮಾತನಾಡುವವರಿದ್ದಾರೆ. ತಾವು ಕಾನೂನು ಪಂಡಿತರೆಂದು ಪ್ರದರ್ಶಿಸಲು 'ಪಾಯಿಂಟ್ ಆಫ್ ಆರ್ಡರ್‌' ಎಂದು ಹೇಳುವವರಿದ್ದಾರೆ. ಅಥವಾ ತಮ್ಮವರಿಗಾಗಿ ವಿಷಯ ಪ್ರಸ್ತಾಪಿಸುವ ಜನಪ್ರತಿನಿಧಿಗಳೂ ಇದ್ದಾರೆ. ಇವರೆಲ್ಲರ ಮಧ್ಯೆ ನಾಣಯ್ಯ ವಿಶಿಷ್ಟವಾಗಿ ಕಾಣುತ್ತಾರೆ. ಕಡತಕ್ಕಾಗಿ ಅವರು ಎಂದೂ ಮಾತನಾಡಲಿಲ್ಲ. ಇವರು ಅತಿಯಾಗಿ ಮಾತನಾಡುತ್ತಿದ್ದಾರೆ, ವಿಷಯ ಮೀರಿ ಯಾವದೋ ವ್ಯಕ್ತಿ ಪರ ವಕಾಲತು ವಹಿಸುತ್ತಿದ್ದಾರೆ ಎಂದು ಒಂದು ಕ್ಷಣವೂ ವಿಧಾನಮಂಡಲ ವರದಿ ಮಾಡುವ ಪತ್ರಕರ್ತರಿಗೆ ಅನಿಸುತ್ತಿರಲಿಲ್ಲ. ಇದೇ ಕಾರಣಕ್ಕೆ ನಾಣಯ್ಯ ಅವರನ್ನು ಪ್ರತಿಯೊಬ್ಬರೂ 'ಮಿಸ್‌' ಮಾಡಿಕೊಳ್ಳುವುದು.

ಇದಾರೆ ಎಂಬ ಧೈರ್ಯ
ರಾಜ್ಯದಲ್ಲಿ ಯಾವುದೇ ಅಕ್ರಮ ನಡೆದಿದ್ದರೂ ಕೆಲವೊಮ್ಮೆ ಅದನ್ನು ಸದನದಲ್ಲಿ ಪ್ರಸ್ತಾಪಿಸುವ ಧೈರ್ಯ ಸಾಕಷ್ಟು ಜನಪ್ರತಿನಿಧಿಗಳಿಗೆ ಇರುವುದಿಲ್ಲ. ರಾಜಕೀಯ ಅಥವಾ ವೈಯಕ್ತಿಕ ಕಾರಣಕ್ಕೆ ಮೌನಕ್ಕೆ ಶರಣಾಗುತ್ತಾರೆ. ಆದರೆ ಅನ್ಯಾಯಕ್ಕೊಳಗಾದವರು ಆಗ ಸಂಪರ್ಕಿಸುತ್ತಿದ್ದಿದ್ದು ನಾಣಯ್ಯ ಅವರನ್ನು. ಕೆಪಿಎಸ್‌ಸಿ ಹಗರಣದ ಬಗ್ಗೆ ಉಭಯ ಸದನಗಳಲ್ಲಿ ಗಲಾಟೆಯಾಗುತ್ತಿತ್ತು. ಅವರದೇ ಪಕ್ಷದ ಮುಖಂಡ ಹಾಗೂ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಕೆಪಿಎಸ್‌ಸಿ ಕರ್ಮಕಾಂಡವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು. ಕೆಪಿಎಸ್‌ಸಿ ಹಗರಣದ ಬಗ್ಗೆ ನಾನಾ ಕಾರಣಗಳಿಂದ ಜೆಡಿಎಸ್ ಮೌನ ತಾಳಿತ್ತು. ಆದರೆ ಆ ವಿಚಾರವನ್ನು ವಿಧಾನ ಪರಿಷತ್‌ನಲ್ಲಿ ಪದೇಪದೆ ಪ್ರಸ್ತಾಪಿಸಿ ಪಕ್ಷದ ನಿಲುವಿಗೆ ವಿರುದ್ಧವಾಗಿ ನಾಣಯ್ಯ ನಿಂತಿದ್ದರು. ರಾಜ್ಯ ಸರ್ಕಾರವನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದ್ದರು. ವಿಚಿತ್ರವೆಂದರೆ ಆ ವಿಚಾರದಲ್ಲಿ ಬಸವರಾಜ್ ಹೊರಟ್ಟಿ ಹೊರತುಪಡಿಸಿ ವಿಧಾನ ಪರಿಷತ್‌ನಲ್ಲಿದ್ದ ಜೆಡಿಎಸ್ ಸದಸ್ಯರೇ ನಾಣಯ್ಯ ಬೆಂಬಲಕ್ಕೆ ನಿಂತಿರಲಿಲ್ಲ.

ನಿಯಮ ಮೀರದ ಕೊಡವ
ಹಿಂದಿನ ಅಧಿವೇಶನದ ಸಂದರ್ಭವದು. ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಎಂದಿನಂತೆ ಶಿಕ್ಷಣ ಸಂಸ್ಥೆಗಳ ಬಗ್ಗೆ ಪ್ರಶ್ನೆ ಕೇಳಲು ಮುಂದಾಗಿದ್ದರು. ದೀರ್ಘ ಚರ್ಚೆಗೆ ಸಭಾಪತಿ ಅವಕಾಶ ಕೊಡಲಿಲ್ಲ. ಸಭಾಪತಿ ಮಾತಿಗೆ ಬೆಲೆ ಕೊಡದೇ ಮರಿತಿಬ್ಬೇಗೌಡರು ಮಾತು ಮುಂದುವರಿಸಿದಾಗ ಸಭಾಪತಿ ಎದ್ದುನಿಂತು ಅವಕಾಶ ನಿರಾಕರಿಸಿ ಮೈಕ್‌ನ ಆಡಿಯೋ ಸಂಪರ್ಕ ಕಡಿತಗೊಳಿಸಿದರು. ಇದನ್ನು ವಿರೋಧಿಸಿ ಮರಿತಿಬ್ಬೇಗೌಡರು ಸದನದ ಬಾವಿಗೆ ಇಳಿದರು. ಆ ಸಂದರ್ಭದಲ್ಲಿ ಬಜೆಟ್ ಕುರಿತಂತೆ ನಾಣಯ್ಯ ಮಾತನಾಡಬೇಕಿತ್ತು. ಮಾತನಾಡಲು ಅವಕಾಶ ಸಿಕ್ಕಿತೆಂದು ಗಂಟೆಗಟ್ಟಲೇ ಭಾಷಣ ಮಾಡಬಹುದಿತ್ತು. ಆದರೆ ಮಾತನಾಡಲು ನಿರಾಕರಿಸಿ, 'ನನ್ನ ಪಕ್ಷದ ಸದಸ್ಯರೊಬ್ಬರು ಸದನದ ಬಾವಿಗೆ ಇಳಿದಾಗ ಪಕ್ಷದ ನಾಯಕನಾಗಿ ಮಾತನಾಡಲು ನನ್ನ ಮನಸ್ಸು ಒಪ್ಪುವುದಿಲ್ಲ. ಅದು ಸಭಾಪತಿ ಹುದ್ದೆಗೆ ಮಾಡುವ ಅವಮಾನವಾಗುತ್ತದೆ. ಅವರು ಧರಣಿ ಹಿಂತೆಗೆದುಕೊಂಡರೆ ಮಾತ್ರ ಮಾತನಾಡುತ್ತೇನೆ' ಎಂದು ಸುಮ್ಮನೇ ಕುಳಿತಿದ್ದರು. ನಿಯಮ ಹಾಗೂ ನೈತಿಕ ವಿಚಾರಗಳು ಬಂದಾಗ ಜಪ್ಪಯ್ಯ ಎಂದರೂ ನಾಣಯ್ಯ ಬದಲಾಗುತ್ತಿರಲಿಲ್ಲ.

ಏನೋ ಮಾತಾಡ್ತಾರಂತೆ!
ಸನದ ಕಲಾಪಗಳಲ್ಲಿ ಮುಖ್ಯಮಂತ್ರಿ, ಸಭಾನಾಯಕ ಹಾಗೂ ಪ್ರತಿಪಕ್ಷ ನಾಯಕರಿಗೆ ವಿಶೇಷ ಅಧಿಕಾರವಿರುತ್ತದೆ. ಯಾವುದೇ ವಿಚಾರಗಳಿಗೆ ಸಂಬಂಧಿಸಿ ಚರ್ಚೆ ನಡೆಯುತ್ತಿದ್ದರೇ ಮಧ್ಯ ಪ್ರವೇಶಿಸಬಹುದು. ಇಂತಹದೊಂದು ಸವಲತ್ತು ಮತ್ಯಾವ ಶಾಸಕರಿಗೂ ಇರುವುದಿಲ್ಲ. ಆದರೆ ನಾಣಯ್ಯನವರು ಎದ್ದುನಿಂತರೆ ಸಭಾಪತಿ, ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಅಥವಾ ಸದಸ್ಯರು ಅವರ ಮಾತು ಕೇಳಲು ಸುಮ್ಮನಾಗುತ್ತಿದ್ದರು.
'ನಾಣಯ್ಯ ಏನೋ ಮಾತಾಡ್ತಾರಂತೆ, ಕೇಳೋಣ. ಆಮೇಲೆ ನಿಮ್ಮ ಮಾತು ಮುಂದುವರಿಸಿ' ಎಂಬ ಆದೇಶವು ಸಭಾಪತಿ ಕುರ್ಚಿಯಿಂದಲೇ ಬರುತ್ತಿತ್ತು. ಮುಖ್ಯಮಂತ್ರಿ ಕೂಡ ಅವರ ಸಲಹೆ ಕೇಳಲು ಉತ್ಸುಕರಾಗುತ್ತಿದ್ದರು. ಅವರ ಮಾತನ್ನು ಯಾರೂ ಒಂದೇಟಿಗೆ ಅಲ್ಲಗಳೆಯುವ ಧೈರ್ಯ ಪ್ರದರ್ಶಿಸುತ್ತಲೂ ಇರಲಿಲ್ಲ. ನಾಣಯ್ಯ ಹೇಳಿದ್ದಾರೆ ಎಂದರೆ ಅದನ್ನು ಪರಿಶೀಲಿಸುತ್ತೇವೆ ಎಂಬ ಹೇಳಿಕೆಗಳು ಆಡಳಿತ ಪಕ್ಷದ ಸಚಿವರಿಂದ ಬರುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement