ಗಿರಿಜನ ಬಾಲಕಿ ಮೇಲೆ ಅತ್ಯಾಚಾರ
ಹುಣಸೂರು: ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದಿದ್ದ ಯುವಕನೊಬ್ಬ ಗಿರಿಜನ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಶೆಟ್ಟಹಳ್ಳಿ ಗಿರಿಜನ ಹಾಡಿಯ ಜೈನ ಕುರುಬ ಸಮುದಾಯಕ್ಕೆ ಸೇರಿದ 13 ವರ್ಷದ ಬಾಲಕಿ ಮೇಲೆ ಅದೇ ಗ್ರಾಮದ ಕಪ್ಪಡಿ ಪುತ್ರ, ಖಾಸಗಿ ವಾಹಿನಿಯ 'ಹಳ್ಳಿಹೈದ ಪೇಟೆಗೆ ಬಂದ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸೋಮ ಅಲಿಯಾಸ್ ಸೋಮಶೇಖರ್ (25) ಅತ್ಯಾಚಾರ ನಡೆಸಿದ್ದಾನೆ. ಭಾನುವಾರ ಮನೆಯಲ್ಲೇ ಇದ್ದ ಬಾಲಕಿ ಮೇಲೆ ಮಧ್ಯಾಹ್ನ ಸೋಮ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ. ಭಾನುವಾರ ರಾತ್ರಿ ಕುಟುಂಬಕ್ಕೆ ವಿಷಯ ಗೊತ್ತಾಗಿದೆ. ಈ ಸಂಬಂಧ ಬಾಲಕಿ ಪೋಷಕರು ಸೋಮು ವಿರುದ್ಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.