ಜಾತಿ ಹಾಲಾಹಲ
ಹಾಲಿನಲ್ಲೂ ಜಾತಿ ಹುಡುಕುತ್ತೀರಲ್ಲಾ? ಹಾಲಿನ ಪ್ರೋತ್ಸಾಹಧನದಲ್ಲಿ ...
ಸದನದಲ್ಲಿ ಕನ್ನಡಪ್ರಭ
ವಿಧಾನಸಭೆ: ಹಾಲಿನಲ್ಲೂ ಜಾತಿ ಹುಡುಕುತ್ತೀರಲ್ಲಾ? ಹಾಲಿನ ಪ್ರೋತ್ಸಾಹಧನದಲ್ಲಿ ವ್ಯತ್ಯಾಸ ಮಾಡಿ ಜಾತಿ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದ್ದೀರಿ. ಹಾಲಿನಲ್ಲಿ ಭೇದಭಾವ ಬೇಡ- ಇದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತು.
ಇದು ಪ್ರಸ್ತಾಪ ಅಷ್ಟೇ. ಇನ್ನೂ ಜಿಒ ಆಗಿಲ್ಲ. ನೀವೇ ಅಸಮಾನತೆಯಲ್ಲಿ ಪಳಗಿರುವವರು. ಮಾಡಬಾರದ್ದು ಮಾಡಿ ಲೂಟಿ ಮಾಡಿದ್ದಿರಿ. ನೀವೆಲ್ಲ ದಲಿತ ವಿರೋಧಿ- ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮಾತು.
ಅಷ್ಟೆ, ವಿಧಾನಸಭೆ ವಾಕ್ಸಮರದ ವೇದಿಕೆಯಾಯಿತು. ಪರಸ್ಪರ ಕೆಸರೆರಚಾಟ. ಕಾಂಗ್ರೆಸ್-ಬಿಜೆಪಿ ಶಾಸಕರೆಲ್ಲರೂ ಎದ್ದು ನಿಂತು ಆರೋಪ ಮಾಡಿದರು. ಸಿದ್ದರಾಮಯ್ಯ ಅತಿ ಹೆಚ್ಚಿನ ಮೂದಲಿಕೆಯಲ್ಲಿ ತೊಡಗಿದ್ದರಿಂದ, ಕಾಂಗ್ರೆಸ್ ಶಾಸಕರೂ ಎರ್ರಾಬಿರ್ರಿಯಾಗಿ ಬೈದರು. ಬಿಜೆಪಿ ಶಾಸಕರನ್ನು ಇದು ಕೆರಳಿಸಿ ಅವರೂ ವಾಗ್ಯುದ್ಧಕ್ಕೆ ಇಳಿದರು. ಸದನ ಸುಮಾರು 15 ನಿಮಿಷ ಗದ್ದಲ, ಗೊಂದಲ, ಆರೋಪಗಳ ಸುರಿಮಳೆಯಲ್ಲಿ ಮುಳುಗಿಹೋಯಿತು.
ಶೂನ್ಯವೇಳೆಯಲ್ಲಿ ಸೋಮವಾರ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪರಿಶಿಷ್ಟರಿಗೆ ಎರಡು ರುಪಾಯಿ ಹೆಚ್ಚಿನ ಪ್ರೋತ್ಸಾಹ ಹಣ ನೀಡುತ್ತಿರುವುದು ಸಂತೋಷ. ಆದರೆ, ಅದನ್ನು ಎಲ್ಲರಿಗೂ ವಿಸ್ತರಿಸಿ. ಕೆಲವೇ ಜಾತಿಗೆ ವಿಸ್ತರಿಸಿದರೆ ಜಾತಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಹಾಲಿನಲ್ಲಿ ಜಾತಿ ಹುಡುಕುವುದು ಬೇಡ ಎಂದರು.
ಇದಕ್ಕೆ ಉತ್ತರ ನೀಡಿದ ಪಶುಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ ಅವರು, ನಮ್ಮ ಇಲಾಖೆಯಲ್ಲಿ ಪರಿಶಿಷ್ಟರಿಗಾಗೇ ವೆಚ್ಚ ಮಾಡಲು 200 ಹಣ ಇದೆ. ಈಗ 93 ಕೋಟಿ ಮಾತ್ರ ವೆಚ್ಚವಾಗುತ್ತಿದೆ. ಹೀಗಾಗಿ, ಹಾಲಿನ ಪ್ರೋತ್ಸಾಹಧನ ಹೆಚ್ಚಳ, ಹಸುಗಳನ್ನು ನೀಡುವ ಪ್ರಸ್ತಾಪ ಚರ್ಚೆಯಲ್ಲೇ ಇದೆ. ಅದನ್ನು ಪರಿಶೀಲಿಸುತ್ತಿದ್ದೇವೆ. ಆದೇಶ ಆಗಿಲ್ಲ ಎಂದರು. ಆಗ, ಹೆಚ್ಚಿನ ಪ್ರೋತ್ಸಾಹಧನ ಎಲ್ಲರಿಗೂ ನೀಡಿ ಎಂದು ಶೆಟ್ಟರ್ ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಇದು ಪ್ರಸ್ತಾಪ ಅಷ್ಟೇ. ಅದಕ್ಕೇ ನೀವು ಆಕ್ಷೇಪ ಮಾಡುತ್ತಿದ್ದೀರಲ್ಲ. ಅಸಮಾನತೆಯಲ್ಲಿ ನೀವು ಪಳಗಿದ್ದೀರಿ. ದಲಿತರಿಗೆ ಮಾಡಿದರೆ ನಿಮಗೆ ಹೊಟ್ಟೆ ಉರಿ. ನೀವು ದಲಿತ ವಿರೋಧಿಗಳು ಎಂದು ದೂರಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶೆಟ್ಟರ್, ಹಾಲಿನಲ್ಲಿ ಭೇದಭಾವ ಮಾಡಬೇಡಿ. ಜನಗಳ ಮಧ್ಯೆ ಜಾತಿಯ ಬೆಂಕಿ ಹಚ್ಚುವ ಕೆಲಸ ನಿಮ್ಮದು. ಸಂಘರ್ಷ ಉಂಟು ಮಾಡುತ್ತಿದ್ದೀರಿ. ಕಾಂಗ್ರೆಸ್ ಇದರಲ್ಲಿ ಎಕ್ಸ್‌ಪರ್ಟ್. ನೀವೇ ಜಾತಿವಾದಿಗಳು, ಅದರಲ್ಲೇ ನಿಸ್ಸೀಮರು ಎಂದು ಮೂದಲಿಸಿದರು. ದಲಿತರ ವಿರೋಧಿಗಳು ನೀವೇ? ದಲಿತರಿಗೆ ನೀವು ಸಚಿವ ಸ್ಥಾನ ನೀಡಿಲ್ಲ. ಹಿರಿಯ ರಮೇಶ್ ಜಿಗಜಿಣಗಿ ಎಷ್ಟೋ ಬಾರಿ ಗೆದ್ದಿದ್ದರೂ ಅವರಿಗೆ ಮಂತ್ರಿ ಮಾಡಿಲ್ಲ ಎಂದು ಸಿದ್ದರಾಮಯ್ಯ ದೂರಿದರು.
ದಲಿತರ ಬಗ್ಗೆ ಅಷ್ಟೊಂದು ಪ್ರೀತಿ ತೋರಿಸುವ ನೀವು, ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿ ನೋಡೋಣ. ಅವರಿಗೆ ಅನ್ಯಾಯ ಮಾಡುತ್ತಿದ್ದಿರಿ. ಆದರೆ, ರಾಜಕೀಯಕ್ಕಾಗಿ ಇಂತಹ ಘೋಷಣೆ ಮಾಡುತ್ತಿದ್ದೀರಿ ಎಂದು ವಿಶ್ವೇಶ್ವರಹೆಗಡೆ ಕಾಗೇರಿ ತರಾಟೆಗೆ ತೆಗೆದುಕೊಂಡರು. ನಾವು ದಲಿತರ ಪರ. ಅದಕ್ಕೇ ನಮ್ಮ ಪಕ್ಷದ ಅಧ್ಯಕ್ಷರನ್ನಾಗೇ ಮಾಡಿದ್ದೇವೆ. ನೀವು ಮಾಡಿ ನೋಡೋಣ ಎಂದು ಸಿದ್ದರಾಮಯ್ಯ ನುಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ನಡುವೆ ವಾಗ್ಯುದ್ಧ ಆರಂಭವಾಯಿತು. ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯದಷ್ಟು ಗದ್ದಲ. ಶೆಟ್ಟರ್-ಸಿದ್ದರಾಮಯ್ಯ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆ ಮಧ್ಯ ಪ್ರವೇಶಿಸಿದಸ್ಪೀಕರ್, ಆದೇಶ ಆಗಿಲ್ಲ ಅಂದ್ರೆ ಬಿಡ್ರಿ. ಆಮೇಲೆ ನೋಡೋಣ. ಈಗ ಚರ್ಚೆ ಬೇಡ ಎಂದು ವಿವಾದಕ್ಕೆ ತೆರೆ ಎಳೆದರು.