ತೊಗರಿ ರೈತರಿಗೆ ಕೈ ಕೊಟ್ಟ ಸಿದ್ದು ಸರ್ಕಾರ
'ನಾವು ರೈತರ ಪರ' ಎಂದು ಅವಕಾಶ ಸಿಕ್ಕಾಗೆಲ್ಲಾ ಹೇಳುತ್ತಿರುವ...
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ. 30
'ನಾವು ರೈತರ ಪರ' ಎಂದು ಅವಕಾಶ ಸಿಕ್ಕಾಗೆಲ್ಲಾ ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೊಗರಿ ಕಣಜದ ರೈತರ ಪಾಲಿಗೆ ಲೆಕ್ಕಕ್ಕುಂಟು ನೆರವಿಗಿಲ್ಲ ಎಂಬಂತಾಗಿದೆ.
ಕ್ವಿಂಟಲ್ಗೆ 5 ಸಾವಿರ ಬೆಲೆ ಘೋಷಣೆ ಮಾಡಿ ಮಾರುಕಟ್ಟೆಗೆ ತಕ್ಕಡಿ ಹಿಡಿದು ಬಂದ ಸರ್ಕಾರ ಹೆಸರು ನೋಂದಾಯಿಸಿದ ರೈತರ ತೊಗರಿಯನ್ನು ಖರೀದಿಸಲಾಗದೆ ಅರ್ಧಕ್ಕೇ ಮಾರುಕಟ್ಟೆಯಿಂದ ಕಾಲ್ಕಿತ್ತಿದೆ.
ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ರೈತರು ಬೆಳೆದ ತೊಗರಿ ಖರೀದಿಗೆಂದು ಸರ್ಕಾರವೇ ಮಾರುಕಟ್ಟೆಗಿಳಿದಾಗ ರೈತರಲ್ಲಿ ಸಹಜವಾಗಿಯೇ ಸಂತಸ ಮೂಡಿತ್ತು. ಲಾಭದಾಯಕ ಬೆಲೆಗೆ ತೊಗರಿ ಮಾರಿ ಜೇಬು ಭರ್ತಿ ಮಾಡಿಕೊಳ್ಳುವ ಕನಸು ರೈತರದ್ದಾಗಿತ್ತು. ಆದರೆ ಖರೀದಿಯಲ್ಲಿ ಸರ್ಕಾರ ಅನುಸರಿಸಿದ ಎಡಬಿಡಂಗಿ ನೀತಿ ರೈತರ ನಿರೀಕ್ಷೆ ಬುಡಮೇಲು ಮಾಡಿದೆ. ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿದ ರೈತರ ತೊಗರಿಯನ್ನೂ ಖರೀದಿಸಲು ಸರ್ಕಾರಕ್ಕಾಗಲಿಲ್ಲ.
5 ಸಾವಿರಕ್ಕೆ ಖರೀದಿ: ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿದಾಗ ರೈತರೆಲ್ಲರೂ ಬೀದಿಗಿಳಿದರು. ಕ್ವಿಂಟಲ್ಗೆ 6 ಸಾವಿರದಂತೆ ತೊಗರಿ ಖರೀದಿಗೆ ಆಗ್ರಹಿಸಿದ್ದರು. ಈ ವೇಳೆ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪ ಸಮಿತಿ ಸಭೆ ಸೇರಿ ಕ್ವಿಂಟಲ್ ತೊಗರಿಗೆ 5 ಸಾವಿರ ಬೆಲೆ ನಿಗದಿಪಡಿಸಿ ಕಳೆದ ಮಾರ್ಚ್- ಏಪ್ರಿಲ್ನಲ್ಲೇ ಮಾರುಕಟ್ಟೆ ಪ್ರವೇಶಿಸಿತ್ತು.
ಗುಲ್ಬರ್ಗ, ಬೀದರ್, ಯಾದಗಿರಿ, ರಾಯಚೂರು ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರಿಂದ ತೊಗರಿ ಖರೀದಿ ಶುರುವಾಗಿತ್ತು. ಪ್ರತಿ ರೈತರಿಂದ ತಲಾ 20 ಕ್ವಿಂಟಲ್ನಂತೆ ತೊಗರಿ ಖರೀದಿಗೆ ಸರ್ಕಾರ ಮುಂದಾಗಿತ್ತು. ಇದರಂತೆ ರೈತರು ಮೊದಲು ಹೆಸರು ನೋಂದಣಿ ಮಾಡಿಕೊಂಡರು. ಆದರೆ, ಸರ್ಕಾರ ಹಣದ ಕೊರತೆಯಿಂದಾಗಿ ಖರೀದಿ ಪ್ರಕ್ರಿಯೆಯನ್ನು ಅರ್ಧಕ್ಕೇ ನಿಲ್ಲಿಸಿ ಮೌನವಾಯಿತು.
ಇದರಿಂದ ಕಂಗಾಲಾದ ರೈತರು ಕೊನೆಗೆ ಅನ್ಯ ದಾರಿ ಕಾಣದೆ ಸಿಕ್ಕಷ್ಟು ಹಣಕ್ಕೆ ಖಾಸಗಿ ಅಡತ್, ದಾಲ್ ಮಿಲ್ನವರಿಗೆ ಮಾರಿ (ಕ್ವಿಂಟಲ್ ತೊಗರಿಗೆ 4 ಸಾವಿರ) ನಷ್ಟ ಅನುಭವಿಸಿದ್ದಾರೆ.
20,388 ರೈತರ ತೊಗರಿ ಖರೀದಿ ಬಾಕಿ: ಸರ್ಕಾರ 2013- 14ನೇ ಸಾಲಿನ ವಾಣಿಜ್ಯ ರೀತಿಯಲ್ಲಿ ತೊಗರಿ ಖರೀದಿಗೆಂದು ಜಿಲ್ಲಾವಾರು ಆರಂಭಿಸಿದ್ದ ಪ್ರಕ್ರಿಯೆಯಲ್ಲಿ 5 ಜಿಲ್ಲೆಗಳಲ್ಲಿ 35,530 ರೈತರು ಹೆಸರು ನೋಂದಾಯಿಸಿದ್ದರು. ಈ ಪೈಕಿ 15,142 ರೈತರಿಂದ ತಲಾ 20 ಕ್ವಿಂಟಲ್ನಂತೆ ಸರ್ಕಾರ 2,51,012 ಕ್ವಿಂಟಲ್ ತೊಗರಿ ಖರೀದಿಸಿದೆ. ಹೆಸರು ನೋಂದಾಯಿಸಿದವರ ಒಟ್ಟು ರೈತರ ಪೈಕಿ ಇನ್ನೂ 20,388 ರೈತರ ತೊಗರಿ ಬಾಕಿ ಇದೆ.
ಪ್ರತಿ ರೈತರಿಂದ 20 ಕ್ವಿಂಟಲ್ ತೊಗರಿ ಖರೀದಿಸಲಾಗುತ್ತಿತ್ತು. ಇದೇ ಲೆಕ್ಕಾಚಾರದಲ್ಲಿ ನೋಂದಣಿಯಾದ 20,388 ರೈತರ ತೊಗರಿ ಖರೀದಿಗೆ ಸರ್ಕಾರ 223.24 ಕೋಟಿ ಬಿಡುಗಡೆ ಮಾಡಬೇಕಿತ್ತು. ಆದರೆ ಈ ಹಣ ಬಿಡುಗಡೆ ಮಾಡುವ ಗೋಜಿಗೇ ಹೋಗಿಲ್ಲ ಸರ್ಕಾರ.
ತೊಗರಿ ಖರೀದಿ ಸುತ್ತಮುತ್ತ
ಒಟ್ಟು ತೊಗರಿ ಖರೀದಿ ಪ್ರಮಾಣ
2,31,012 ಕ್ವಿಂಟಲ್
ಬೆಲೆ: (ಪ್ರತಿ ಕ್ವಿಂಟಲ್ಗೆ 5 ಸಾವಿರ) ಒಟ್ಟು
125.39 ಕೋಟಿ
ಇತರೆ ವೆಚ್ಚ:(ಪ್ರತಿ ಕ್ವಿಂಟಲ್ಗೆ 475)
11.32 ಕೋಟಿ
ಒಟ್ಟು ನೋಂದಾಯಿತ 35, 5300 ರೈತರಲ್ಲಿ 15,142 ರೈತರಿಂದ
2,51,012 ಕ್ವಿಂಟಲ್ ಖರೀದಿ
ನೋಂದಾಯಿತ ರೈತರಲ್ಲಿ ತೊಗರಿ ಖರೀದಿಯಾಗದೆ ಬಾಕಿ ಇರುವ ರೈತರು:
20,388
ಬಾಕಿ ಇರುವ ರೈತರ ತೊಗರಿ ಖರೀದಿಗೆ ಅಗತ್ಯವಿರುವ ಹಣ
223.24 ಕೋಟಿ
ಶೇಷಮೂರ್ತಿ ಅವಧಾನಿ