ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಡವರ ಸಂಜೀವಿನಿ ಇಂದಿನಿಂದ ಬಂದ್

ರಾಜ್ಯ ಸರ್ಕಾರದ ಅಡಿಯಲ್ಲಿ ನಡೆಸಲಾಗುತ್ತಿದ್ದ ಗ್ರಾಮೀಣ ಸಂಚಾರಿ ಆರೋಗ್ಯ ಘಟಕವನ್ನು...

Mainashree
Updated On : 1 Jul 2014, 1:21 am

ಕನ್ನಡಪ್ರಭ ವಾರ್ತೆ, ಶಿರಸಿ, ಜೂ. 30
ರಾಜ್ಯ ಸರ್ಕಾರದ ಅಡಿಯಲ್ಲಿ ನಡೆಸಲಾಗುತ್ತಿದ್ದ ಗ್ರಾಮೀಣ ಸಂಚಾರಿ ಆರೋಗ್ಯ ಘಟಕವನ್ನು ಜು. 1ರಿಂದ ಸ್ಥಗಿತಗೊಳಿಸುವಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೋಮವಾರ ಸಂಜೆ ಆದೇಶ ನೀಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಆರೋಗ್ಯ ಸ್ಥಿತಿ ಏರುಪೇರಾಗಲಿದೆ.
ಗ್ರಾಮೀಣ ಸಂಚಾರಿ ಆರೋಗ್ಯ ಘಟಕ ಸೇವೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾಗಿತ್ತು. ಇದರಿಂದ ಕುಗ್ರಾಮಗಳ ಬಡತನ ರೇಖೆಗಿಂತ ಕೆಳಗಿರುವವರಿಗೂ ಉಚಿತ ಔಷಧೀಯ ನೆರವು ದೊರೆಯುವಂತಾಗಿತ್ತು. ಸಂಚಾರಿ ಆರೋಗ್ಯ ಘಟಕವನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದು, ಬಹುತೇಕ ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಆಗಾಗ ಸರ್ಕಾರ ಈ ಸೇವೆಯ ಕುರಿತಂತೆ ಕ್ಯಾತೆ ತೆಗೆಯುತ್ತಲೇ ಇತ್ತು.
ಷರತ್ತಿನೊಂದಿಗೆ ಗುತ್ತಿಗೆ: ಗುತ್ತಿಗೆ ಪಡೆದ ಸ್ವಯಂ ಸೇವಾ ಸಂಸ್ಥೆಗಳು ಸಂಚಾರಿ ಆರೋಗ್ಯ ಘಟಕದ ಸೇವೆ ನೀಡುವುದಕ್ಕಾಗಿ ತಾಲೂಕಿಗೊಂದರಂತೆ ಸುಸಜ್ಜಿತ ಆ್ಯಂಬುಲೆನ್ಸ್‌ಹೊಂದಿರಬೇಕು. ಇದರಲ್ಲಿ ಜೀವರಕ್ಷಕ ಔಷಧಿಗಳು, ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಎಲ್ಲ ರೀತಿಯ ಔಷಧಿ ಮತ್ತು ಪರಿಕರಗಳು, ಪ್ರಾಥಮಿಕ ಪರೀಕ್ಷೆಗೆ ಅಗತ್ಯವಿರುವ ಪ್ರಯೋಗಾಲಯ, ಒಬ್ಬರು ನುರಿತ ವೈದ್ಯರು, ಇಬ್ಬರು ಸ್ಟಾಫ್ ನರ್ಸ್‌ಗಳು, ಒಬ್ಬ ಔಷಧ ವಿತರಕರು, ಒಬ್ಬ ಪ್ರಯೋಗಾಲಯ ತಜ್ಞ ಹಾಗೂ ಆರೋಗ್ಯ ಸಹಾಯಕ ಇರಬೇಕು ಎನ್ನುವ ಷರತ್ತಿನೊಂದಿಗೆ ಯೋಜನೆ ಗುತ್ತಿಗೆ ನೀಡಲಾಗಿತ್ತು.
ಕುಗ್ರಾಮಗಳಲ್ಲೂ ಸೇವೆ: ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಲಭ್ಯವಿರದ ಔಷಧಗಳು ಸಂಚಾರಿ ಘಟಕದಲ್ಲಿ ಜನರಿಗೆ ನೀಡಲ್ಪಡುತ್ತವೆ. ನಾಗರಿಕ ಸೌಲಭ್ಯದಿಂದ ವಂಚಿತವಾಗಿರುವ ಕುಗ್ರಾಮಗಳಲ್ಲಿ, ಸಂಪರ್ಕ ಸೇತು ಇಲ್ಲದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ಅರಣ್ಯವಾಸಿಗಳ ಊರಿಗೆ ಭೇಟಿ ನೀಡಿ ಚಿಕಿತ್ಸೆ ನೀಡುವುದು ವ್ಯವಸ್ಥೆಯ ಉದ್ದೇಶಗಳಲ್ಲಿ ಪ್ರಮುಖವಾಗಿದೆ. ಗರ್ಭಿಣಿಯರ ಯೋಗಕ್ಷೇವು, ಬಾಣಂತಿಯರ ಆರೋಗ್ಯಕ್ಕೆ ಬೇಕಾದ ಔಷಧೋಪಚಾರ, ಮಗುವಿಗೆ ಅಗತ್ಯವಾದ ಲಸಿಕೆಗಳು, ಗುಣಪಡಿಸಲಾಗದ ರೋಗಗಳಾದ ಮಧುಮೇಹ, ಅಸ್ತಮಾ, ರಕ್ತದೊತ್ತಡ ಮುಂತಾದವುಗಳಿಗೆ ಕಾಲಕಾಲಕ್ಕೆ ಅಗತ್ಯ ಪರೀಕ್ಷೆ ಮತ್ತು ಔಷಧವನ್ನು ನೀಡಲಾಗುತ್ತದೆ.
ಪರದಾಡಲಿದ್ದಾರೆ ಅಸಂಖ್ಯಾತ ಜನ: ಗುಡ್ಡಗಾಡು, ಅರಣ್ಯ ಹಾಗೂ ಅತಿ ಹಿಂದುಳಿದ ಪ್ರದೇಶದ ಪರಿಶಿಷ್ಟ ಜಾತಿ, ಪಂಗಡದವರು, ಕೃಷಿ ಕೂಲಿ ಕಾರ್ಮಿಕರು, ವೃದ್ಧರು, ಅಂಗವಿಕಲರು, ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಆರಂಭಿಸಿದ್ದ ಸಂಚಾರಿ ಆರೋಗ್ಯ ಘಟಕ ಸ್ಥಗಿತಗೊಂಡಿದ್ದರಿಂದ ಈ ಸೇವೆಯನ್ನೇ ಅವಲಂಬಿಸಿದ್ದ ಹಾಗೂ ನಿರಂತರ ಔಷಧೋಪಚಾರ ಪಡೆಯುತ್ತಿರುವ ಅಸಂಖ್ಯಾತ ಜನರು ಆರೋಗ್ಯ ಸೇವೆಗಾಗಿ ಪರದಾಡುವ ಸಾಧ್ಯತೆಯಿದೆ.
ಈ ಯೋಜನೆಯ ಆವಶ್ಯಕತೆ ಹಾಗೂ ಬೇಡಿಕೆಯನ್ನಾಧರಿಸಿ ರಾಜ್ಯಾದ್ಯಂತ ಆರೋಗ್ಯ ಸೇವೆಗಳಿಲ್ಲದ ಗ್ರಾಮಗಳನ್ನೊಳಗೊಂಡ ತಾಲೂಕುಗಳನ್ನು ಗುರುತಿಸಿ 107 ಸಂಚಾರಿ ಆರೋಗ್ಯ ಘಟಕಗಳನ್ನು ಮಂಜೂರಿ ಮಾಡಿತ್ತು. ಆದರೆ ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಈ ಎಲ್ಲ 107 ಘಟಕಗಳನ್ನು ಏಕಾಏಕಿ ಸೋಮವಾರದಿಂದಲೇ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ಶಿವಮೊಗ್ಗ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮೀಣ, ಬೆಳಗಾವಿ, ಬೀದರ್, ಬಿಜಾಪುರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಕೊಪ್ಪಳ, ಉತ್ತರ ಕನ್ನಡ, ಚಾಮರಾಜ ನಗರ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ಆರೋಗ್ಯ ಘಟಕ ಸೇವೆ ಸ್ಥಗಿತಗೊಳಿಸಿ ಹೊರಡಿಸಿರುವ ಆದೇಶ ಸಾರ್ವಜನಿಕ ವಲಯದಲ್ಲಿ ಆಘಾತವನ್ನುಂಟು ಮಾಡಿದೆ. ಜನಪ್ರತಿನಿಧಿಗಳು ಅಧಿಕಾರಿಗಳ ಈ ಕ್ರಮದ ಕುರಿತಂತೆ ಧ್ವನಿ ಎತ್ತಬೇಕಾಗಿದೆ.


ವಿಶ್ವಾಮಿತ್ರ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement