ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರೈಲು ಪ್ರಯಾಣ ದರ ಏರಿಕೆ ಅನಿವಾರ್ಯ: ಡೀವಿ

Mainashree
Updated On : 1 Jul 2014, 1:12 am

ಕ.ಪ್ರ. ವಾರ್ತೆ| ಬೆಂಗಳೂರು | ಜೂ. 30
ರೇಲ್ವೆ ಇಲಾಖೆ ಉಳಿವಿಗೆ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ರೇಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಆದರೆ ಪ್ರಸಕ್ತ ಬಜೆಟ್‌ನಲ್ಲಿ ರೇಲ್ವೆ ಸುಧಾರಣೆಗೆ ನೂತನ ಅಂಶಗಳನ್ನು ಸೇರಿಸಲಾಗುವುದು. ಇಲಾಖೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುವುದು. ಈ ಮೂಲಕ ಬೆಲೆ ಏರಿಕೆಯ ಬಿಸಿಯನ್ನು ಕೇಂದ್ರ ಸರ್ಕಾರ ತಣಿಸಲಿದೆ ಎಂದು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಅವರು ತಿಳಿಸಿದರು. ಹೈಸ್ಪೀಡ್ ರೈಲು ಸೇರಿದಂತೆ ಹೊಸ ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಕಾಣಬಹುದಾಗಿದೆ. ಇದರ ಜತೆಗೆ ಇಲಾಖೆಗೆ ಹೈಟೆಕ್ ಸ್ಪರ್ಶ ನೀಡುವತ್ತ ಚಿಂತನೆ ನಡೆದಿದೆ. ಇದರಿಂದ ಇಲಾಖೆ ನಿರ್ವಹಣೆ ಸುಲಭ ಮಾಡಬಹುದು. ರಾಜ್ಯಕ್ಕೂ ವಿಶೇಷ ಕೊಡುಗೆ ಸಿಗಲಿದೆ ಎಂದು ಅವರು ಹೇಳಿದರು.
ಬಂದರು ಸಂಪರ್ಕ, ಐಟಿ ವಲಯಗಳಿಗೆ ಸಂಪರ್ಕ ಹಾಗೂ ಹಳೆಯ ರೇಲ್ವೆ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಒತ್ತು ನೀಡಲಾಗುವುದು. ಇದರ ಜತೆಗೆ ಇ-ಟಿಕೆಟಿಂಗ್ ವ್ಯವಸ್ಥೆ ಹೊಸ ಸ್ವರೂಪದಲ್ಲಿ ಬರಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ದರ ಏರಿಕೆ ಮಾಡಿದಾಗ ಸಾಕಷ್ಟು ಟೀಕೆಗಳು ಬಂದವು. ಆದರೆ ದೇಶ ಹಾಗೂ ಇಲಾಖೆಯ ಒಳಿತಿಗಾಗಿ ಎಲ್ಲವನ್ನು ನಗುವಿನಿಂದಲೇ ಸ್ವೀಕರಿಸಿದ್ದೇನೆ. ಇದೆಲ್ಲದರ ಪರಿಣಾಮ ಭವಿಷ್ಯದಲ್ಲಿ ಕಾಣಲಿದೆ ಎಂದು ಅವರು ಹೇಳಿದರು.
ರೇಲ್ವೆ ಪ್ರಯಾಣ ದರ ಏರಿಕೆ ಮಾಡಿರುವ ಸದಾನಂದ ಗೌಡರ ನಿರ್ಧಾರದ ಪರವಾಗಿ ಪಕ್ಷದ ಯಾವೊಬ್ಬ ನಾಯಕರು ಸಮರ್ಥನೆ ನೀಡಲಿಲ್ಲ. ದರ ಏರಿಕೆಯ ಅನಿವಾರ್ಯವನ್ನು ಜನತೆಗೆ ತಿಳಿಸಲು ಪಕ್ಷ ವಿಫಲವಾಗಿದೆ ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ದರ ಏರಿಕೆ ಮಾಡದಿದ್ದರೆ ಇಲಾಖೆಯ ಉಳಿಯಲು ಸಾಧ್ಯವಿಲ್ಲ. ಆದರೆ ಮುಂದಿನ 5 ವರ್ಷಗಳಲ್ಲಿ ಪ್ರತಿ ವರ್ಷ ಶೇ.5ರಷ್ಟು ದರ ಏರಿಕೆ ಮಾಡಿ ರೇಲ್ವೆ ಸಂಪರ್ಕದ ಅಭಿವೃದ್ಧಿಗೆ ಸಚಿವರು ಮುಂದಾಗಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಸ್‌ನಲ್ಲಿ ಪ್ರಯಾಣಿಸಿದರೆ 400 ಬೇಕಾಗುತ್ತದೆ. ಆದರೆ ರೇಲ್ವೆಯಲ್ಲಿ ಕೇವಲ 40 ಸಾಕಾಗುತ್ತದೆ. ಇದಕ್ಕೆ ಮತ್ತೆ ಐದಾರು ರುಪಾಯಿ ಹೆಚ್ಚಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎನ್ನುವುದನ್ನು ಪಕ್ಷದ ಮುಖಂಡರು ಜನರಿಗೆ ತಿಳಿಸಬೇಕು ಎಂದು ಶಂಕರಮೂರ್ತಿ ಅಭಿಪ್ರಾಯಪಟ್ಟರು.
ಲೋಕಸಭೆ ಸ್ಪರ್ಧೆ ಬೇಡ ಎಂದಿದ್ದೆ
ವಿಧಾನಪರಿಷತ್‌ನಲ್ಲಿ ಸದಾನಂದಗೌಡರ ಕಾರ್ಯವೈಖರಿ ನೋಡಿ ಅವರು ಲೋಕಸಭೆಗೆ ಹೋಗುವುದು ನನಗೆ ಇಷ್ಟವಿರಲಿಲ್ಲ. ಅವರಂತಹ ಪ್ರತಿಪಕ್ಷ ನಾಯಕನನ್ನು ನಾನು ನೋಡಿರಲಿಲ್ಲ. ಲೋಕಸಭೆಗೆ ಸ್ಪರ್ಧಿಸುವುದು ಬೇಡ ಎಂದು ಸದಾನಂದಗೌಡರಿಗೆ ಮನವಿ ಮಾಡಿದ್ದೆ. ಆದರೆ ಅವರು ಸ್ಪರ್ಧಿಸಿ ಇಂದು ಉತ್ತಮ ಖಾತೆ ಪಡೆದಿದ್ದಾರೆ. ಕೇಂದ್ರ ಸರ್ಕಾರದಲ್ಲಿನ ಅವರ ಯಾತ್ರೆ ಯಶಸ್ವಿಯಾಗಲಿ ಎಂದು ಶಂಕರಮೂರ್ತಿ ಹಾರೈಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement