ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿಜ್ಞಾನಿ ಮಿತ್ರರೇ, ಸಾರ್ಕ್ ಉಪಗ್ರಹ ಅಭಿವೃದ್ಧಿಪಡಿಸಿ

ನಮ್ಮ ಬುದ್ಧಿವಂತ ಬಾಹ್ಯಾಕಾಶ...

Mainashree
Updated On : 1 Jul 2014, 10:21 am

ನಮ್ಮ ಬುದ್ಧಿವಂತ ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ವಿಭಾಗಕ್ಕೆ ನನ್ನ ಅಭಿನಂದನೆಗಳು; ಮತ್ತೊಮ್ಮೆ ಧ್ರುವೀಯ ಉಪಗ್ರಹ ಉಡಾವಣಾ ವಾಹನ(ಪಿಎಸ್‌ಎಲ್‌ವಿ)ದ ಯಶಸ್ವಿ ಉಡಾವಣೆ ನಡೆದಿದೆ. ಎಲ್ಲ 5 ಉಪಗ್ರಹಗಳನ್ನೂ ನಾವು ಭೂಮಿಯಿಂದ 660 ಕಿ.ಮೀ. ದೂರದ ಕಕ್ಷೆಗಳಿಗೆ ಸೇರಿಸಿದ್ದೇವೆ.
ಈ ಕ್ಷಣವು ಪ್ರತಿಯೊಬ್ಬ ಭಾರತೀಯನ ಹೃದಯವೂ ಹೆಮ್ಮೆಯಿಂದ ತುಂಬಿ ಬರುವಂತೆ ಮಾಡಿದೆ. ಆ ಖುಷಿ ಮತ್ತು ಸಂತೃಪ್ತಿಯು ನಿಮ್ಮೆಲ್ಲರ ಮುಖಗಳಲ್ಲೂ ಪ್ರತಿಬಿಂಬಿಸುತ್ತಿರುವುದು ನನಗೆ ಕಾಣಿಸುತ್ತಿದೆ.
ಬಾಹ್ಯಾಕಾಶ ತಂತ್ರಜ್ಞಾನದಿಂದ ಪುಳಕಿತಗೊಂಡಿರುವ ನನಗೆ ಈ ಕ್ಷಣವನ್ನು ಸಾಕ್ಷೀಕರಿಸುತ್ತಿರುವುದಕ್ಕೆ ಇನ್ನಷ್ಟು ಹೆಮ್ಮೆ ಎನಿಸುತ್ತಿದೆ. ನಮ್ಮ ಸುಧಾರಿತ ಬಾಹ್ಯಾಕಾಶ ಯೋಜನೆಯು ಭಾರತವನ್ನು ಇಂದು 5-6 ರಾಷ್ಟ್ರಗಳ ಎಲೈಟ್ ಕ್ಲಬ್‌ಗೆ ಸೇರಿಸಿದೆ. ಈ ಕಾರ್ಯಕ್ಷೇತ್ರದಲ್ಲಿ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನಕ್ಕೇರಿದ್ದೇವೆ. ಇಲ್ಲಿ ನಾವು ನಡುತರವನ್ನೂ ಮೀರಿ ಅತ್ಯುತ್ಕೃಷ್ಟತೆಯನ್ನು ಸಾಧಿಸಿದ್ದೇವೆ.
ನಾವಿಂದು ಅಭಿವೃದ್ಧಿಹೊಂದಿದ ರಾಷ್ಟ್ರಗಳ ಉಪಗ್ರಹಗಳನ್ನು ಉಡಾಯಿಸಿದ್ದೇವೆ. ಪಿಎಸ್‌ಎಲ್‌ವಿ ಈವರೆಗೆ ಒಟ್ಟು 67 ಉಪಗ್ರಹಗಳನ್ನು ಉಡಾವಣೆ ಮಾಡಿದೆ; ಅವುಗಳಲ್ಲಿ 40 ವಿದೇಶಿ ಉಪಗ್ರಹಗಳು (19 ರಾಷ್ಟ್ರಗಳಿಗೆ ಸೇರಿದ್ದು). ಇಂದು ಕಕ್ಷೆಗೆ ಸೇರಿಸಿದ ಉಪಗ್ರಹಗಳೂ ಅಷ್ಟೆ. ಫ್ರಾನ್ಸ್, ಕೆನಡಾ, ಜರ್ಮನಿ ಮತ್ತು ಸಿಂಗಾಪುರದಂತಹ ಅಭಿವೃದ್ಧಿಹೊಂದಿದ ರಾಷ್ಟ್ರಗಳದ್ದು. ನಿಜಕ್ಕೂ ಇದು ಭಾರತದ ಬಾಹ್ಯಾಕಾಶ ಸಾಮರ್ಥ್ಯಕ್ಕೆ ಜಾಗತಿಕವಾಗಿ ಷರಾ ಬರೆದಂತೆ.
ಅಟಲ್‌ಜೀ ದೂರದೃಷ್ಟಿಯಿಂದ ಪ್ರೇರೇಪಿತರಾದ ನಾವು ಈಗಾಗಲೇ ಚಂದ್ರನವರೆಗೂ ತಲುಪಿದ್ದೇವೆ. ಮತ್ತೊಂದು ಮಿಷನ್ ಮಂಗಳನ ಅಂಗಳ ತಲುಪುವುದರಲ್ಲಿದೆ. ನಾನು ಇದನ್ನು ವೈಯಕ್ತಿಕವಾಗಿ ತುಂಬಾ ಕುತೂಹಲದಿಂದ ಫಾಲೋ ಮಾಡುತ್ತಿದ್ದೇನೆ. ನಾವು ನಮ್ಮದೇ ಆದ ಉಪಗ್ರಹ ಆಧರಿತ ದಿಶಾದರ್ಶನ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಿದ್ದೇವೆ. 2015ರ ವೇಳೆಗೆ ಇದನ್ನು ಪೂರ್ಣಪ್ರಮಾಣದಲ್ಲಿ ಅಳವಡಿಸಲಾಗುತ್ತದೆ.
ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಬಾಹ್ಯಾಕಾಶ ಯೋಜನೆಯು ಸ್ವದೇಶಿ ನಿರ್ಮಿತ ಎನ್ನುವುದೇ ಹೆಮ್ಮೆಯ ಸಂಗತಿ. ಅಂತಾರಾಷ್ಟ್ರೀಯ ಅಡಚಣೆಗಳ ನಡುವೆಯೂ ನಾವಿದನ್ನು ಅಭಿವೃದ್ಧಿಪಡಿಸಿದ್ದೇವೆ. ಬಾಹ್ಯಾಕಾಶ ವಿಜ್ಞಾನಿಗಳ ಹಲವು ತಲೆಮಾರುಗಳು ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಬೇಕು ಎಂಬ ಉದ್ದೇಶದಿಂದ  ಕಾರ್ಯನಿರ್ವಹಿಸಿವೆ. ಅವರಿಗೆಲ್ಲ ಧನ್ಯವಾದ ಹೇಳಲೇಬೇಕು. ಬಾಹ್ಯಾಕಾಶದತ್ತ ನಮ್ಮ ಪಯಣವು ತುಂಬಾ ದೀನ ಮಟ್ಟದಿಂದ ಬಂದಿರುವಂಥದ್ದು. ಅಲ್ಲಿ ನಮಗೆ ಹಲವಾರು ಅಡ್ಡಿಗಳು, ಸಂಪನ್ಮೂಲಗಳು ಕೊರತೆ ಎದುರಾಗಿದ್ದವು. ರಾಕೆಟ್ ಕೋನ್‌ಗಳನ್ನು ಸೈಕಲ್‌ಗಳ ಮೂಲಕ ಸಾಗಣೆ ಮಾಡಲಾಗುತ್ತಿತ್ತು. ಅವುಗಳ ಫೋಟೋಗಳನ್ನೂ ನಾನು ನೋಡಿದ್ದೇನೆ. ನಮ್ಮ ಮೊದಲ ಉಪಗ್ರಹವಾದ ಆರ್ಯಭಟವನ್ನು ಬೆಂಗಳೂರಿನ ಕೈಗಾರಿಕಾ ಶೆಡ್‌ವೊಂದರಲ್ಲಿ ನಿರ್ಮಿಸಲಾಗಿತ್ತು.  ಇಂದಿಗೂ ನಮ್ಮ ಯೋಜನೆಗಳು ವಿಶ್ವದಲ್ಲೇ ಅತ್ಯಂತ ಅಗ್ಗದಲ್ಲಿ ಆಗುವಂಥದ್ದು. ನಮ್ಮ ಮಂಗಳ ಯೋಜನೆಗೆ ತಗುಲಿದ ವೆಚ್ಚ ಇತ್ತೀಚೆಗಷ್ಟೇ ಬಿಡುಗಡೆಯಾದ ಹಾಲಿವುಡ್ ಸಿನಿಮಾ 'ಗ್ರ್ಯಾವಿಟಿ'ಗಾದ ವೆಚ್ಚಕ್ಕಿಂತಲೂ ಕಡಿಮೆ. ಮಿತವ್ಯಯದ ಎಂಜಿನಿಯರಿಂಗ್, ಕಲ್ಪನೆಯ ಶಕ್ತಿಯನ್ನು ನಮ್ಮ ವಿಜ್ಞಾನಿಗಳು ಇಡೀ ವಿಶ್ವಕ್ಕೇ ತೋರಿಸಿಕೊಟ್ಟಿದ್ದಾರೆ. ಗೆಳೆಯರೇ, ನಮ್ಮ ಈ ಯಶಸ್ಸಿನ ಬೇರು ಇತಿಹಾಸದ ತುಂಬಾ ಆಳದಲ್ಲಿದೆ.
ಬಾಹ್ಯಾಕಾಶ ಕ್ಷೇತ್ರ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತವು ಶ್ರೀಮಂತ ಪರಂಪರೆಯನ್ನು ಹೊಂದಿದೆ. ಬ್ರಹ್ಮಾಂಡದ ಕಲ್ಪನೆ, ಬದುಕು ಮತ್ತು ವಿಜ್ಞಾನದೊಡನೆ ಅದರ ಸಂಬಂಧ ಇವೆಲ್ಲವೂ ನಮ್ಮ ಪ್ರಾಚೀನ ಚಿಂತನೆಗಳು ಹಾಗೂ ಜ್ಞಾನದ ಆಳಕ್ಕೆ ಬೇರೂರಿದೆ. 'ಶೂನ್ಯ' ಮತ್ತು 'ಹಾರುವ ತಟ್ಟೆ'ಗಳ ಕಲ್ಪನೆಗಳನ್ನು ಎಲ್ಲರಿಗಿಂತ ಮೊದಲು ಮುಂದಿಟ್ಟಿದ್ದೇ ನಮ್ಮ ಪೂರ್ವಜರು. ಭಾಸ್ಕರಾಚಾರ್ಯ, ಆರ್ಯಭಟರು ಇಂದಿಗೂ ನಮ್ಮ ವಿಜ್ಞಾನಿಗಳಿಗೆ ಸ್ಫೂರ್ತಿ.
ಬಾಹ್ಯಾಕಾಶ ತಂತ್ರಜ್ಞಾನವು ಗಣ್ಯರಿಗೆ ಮಾತ್ರ ಸಂಬಂಧಿಸಿದ್ದು, ಶ್ರೀಸಾಮಾನ್ಯನಿಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಹೆಚ್ಚಿನವರು ತಪ್ಪು ತಿಳಿದುಕೊಂಡಿದ್ದಾರೆ. ಆದರೆ ನನ್ನ ಪ್ರಕಾರ, ಇಂತಹ ತಂತ್ರಜ್ಞಾನಗಳು ಮೂಲಭೂತವಾಗಿ ಶ್ರೀಸಾಮಾನ್ಯನ ಜತೆ ಸಂಬಂಧ ಹೊಂದಿರುತ್ತದೆ. ಬದಲಾವಣೆಯ ಏಜೆಂಟನಾಗಿ, ಅದು ಜನಸಾಮಾನ್ಯನ ಸಬಲೀಕರಣಕ್ಕೆ, ಆತನ ಬದುಕನ್ನು ಬದಲಾಯಿಸುವುದಕ್ಕೆ ಕಾರಣವಾಗುತ್ತದೆ. ತಂತ್ರಜ್ಞಾನವು ಅಭಿವೃದ್ಧಿಯ ಹೊಸ ಹೊಸ ಅವಕಾಶಗಳನ್ನು ನಮ್ಮ ಮುಂದಿಡುತ್ತದೆ ಮತ್ತು ನಮ್ಮ ಸವಾಲುಗಳನ್ನು ಎದುರಿಸುವ ಹಾದಿಯನ್ನೂ ಸೂಚಿಸುತ್ತದೆ. ಬಾಹ್ಯಾಕಾಶವು ನೋಡಲು ತುಂಬಾ ದೂರದಲ್ಲಿದೆ ಎಂದೆನಿಸಿದರೂ ಅದು ನಮ್ಮ ದೈನಂದಿನ ಬದುಕಿನ ಒಂದು ಭಾಗವಾಗಿಬಿಟ್ಟಿದೆ. ಆಧುನಿಕ ಸಂವಹನ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಅದು ಸಹಾಯಮಾಡುತ್ತದೆ. ಗ್ರಾಮೀಣ ಕುಟುಂಬವನ್ನೂ ಮುಖ್ಯವಾಹಿನಿಗೆ ತರುವಲ್ಲಿ ನೆರವಾಗುತ್ತದೆ. ಯಾವುದೋ ಮೂಲೆಯ ಗ್ರಾಮದಲ್ಲಿರುವ ಮಗುವಿಗೆ ದೂರಶಿಕ್ಷಣದ ಮೂಲಕ ಗುಣಮಟ್ಟದ ಶಿಕ್ಷಣವನ್ನೂ ಒದಗಿಸುತ್ತದೆ. ಟೆಲಿ-ಮೆಡಿಸಿನ್ ಮೂಲಕ ಎಲ್ಲೋ ಇರುವ ವ್ಯಕ್ತಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತದೆ. ಸಣ್ಣ ಪಟ್ಟಣದಲ್ಲಿರುವ ಯುವಕನಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸುತ್ತದೆ. ಒಟ್ಟಾರೆ ಉಪಗ್ರಹ ತಂತ್ರಜ್ಞಾನದ ಮುಂದೆ ಅಂತರವೆಂಬುದು ಇಲ್ಲವೇ ಇಲ್ಲ. ಯಾರನ್ನು ತಲುಪಲಾಗದು ಎಂದುಕೊಂಡಿದ್ದೆವೋ ಅವರನ್ನು ತಲುಪಲು ಸಾಧ್ಯವಾಗಿಸಿದೆ.
ಸ್ನೇಹಿತರೇ, ಭಾರತವು 'ವಸುದೈವ ಕುಟುಂಬಕಂ' ಎಂಬ ಮೌಲ್ಯವನ್ನೇ ಸಾರುತ್ತಾ ಬಂದಿದೆ. ಇಡೀ ವಿಶ್ವವೇ ಒಂದು ಕುಟುಂಬ ಎಂದು ನಾವು ನಂಬಿದ್ದೇವೆ. ಭಾರತದ ಬಾಹ್ಯಾಕಾಶ ಯೋಜನೆಯೂ ಮಾನವೀಯ ಸೇವೆಯ ದೃಷ್ಟಿಕೋನ ಇಟ್ಟುಕೊಂಡಿದೆಯೇ ವಿನಾ ಅಧಿಕಾರದ ಆಸೆ ಹೊಂದಿಲ್ಲ. ನಮಗೆ ಇದು ಮಾನವ ಅಭಿವೃದ್ಧಿಯ ಪ್ರಮುಖ ಸಾಧನವಿದ್ದಂತೆ.
ಹಾಗಾಗಿ ನಾವೆಲ್ಲರೂ ನಮ್ಮ ತಾಂತ್ರಿಕ ಸುಧಾರಣೆಯ ಫಲವನ್ನು ಅಂತಹ ಸೌಲಭ್ಯವಂಚಿತರೊಂದಿಗೆ ಹಂಚಿಕೊಳ್ಳಬೇಕು. ಅಂದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಮತ್ತು ನಮ್ಮ ನೆರೆರಾಷ್ಟ್ರಗಳೊಂದಿಗೆ. ನಾವು ಈಗಾಗಲೇ ವಿಪತ್ತು ನಿರ್ವಹಣಾ ಡಾಟಾವನ್ನು 30 ದೇಶಗಳೊಂದಿಗೆ ಹಂಚಿಕೊಂಡಿದ್ದೇವೆ. ಟೆಲಿ-ಮೆಡಿಸಿನ್‌ನ ಅನುಕೂಲತೆಯನ್ನು ಅಫ್ಘಾನಿಸ್ತಾನ ಮತ್ತು ಆಫ್ರಿಕಾ ರಾಷ್ಟ್ರಗಳಿಗೂ ನೀಡಿದ್ದೇವೆ. ಆದರೆ ನಾವು ಮಾಡಬೇಕಾದ್ದು ಇನ್ನೂ ಸಾಕಷ್ಟಿದೆ!
ಇಂದು, ನಾನು ನಮ್ಮ ಬಾಹ್ಯಾಕಾಶ ಸಮುದಾಯದೊಂದಿಗೆ ಕೇಳಿಕೊಳ್ಳುವುದಿಷ್ಟೆ. ಸಾರ್ಕ್ ಉಪಗ್ರಹವೊಂದನ್ನು ಅಭಿವೃದ್ಧಿಪಡಿಸುವ ಸವಾಲನ್ನು ತೆಗೆದುಕೊಳ್ಳಿ. ಅದನ್ನು ನಾವು ನಮ್ಮ ನೆರೆರಾಷ್ಟ್ರಗಳಿಗೆ ಉಡುಗೊರೆಯಾಗಿ ನೀಡೋಣ. ಎಲ್ಲ ರೀತಿಯ ಅಪ್ಲಿಕೇಷನ್‌ಗಳು ಮತ್ತು ಸೇವೆಗಳನ್ನು ಒದಗಿಸುವ ಉಪಗ್ರಹ ಅದಾಗಿರಲಿ. ನನ್ನ ಮತ್ತೊಂದು ವಿನಂತಿಯೇನೆಂದರೆ, ನಮ್ಮ ಉಪಗ್ರಹ-ಆಧರಿತ ದಿಶಾದರ್ಶನ ವ್ಯವಸ್ಥೆಯನ್ನು ಇಡೀ ದಕ್ಷಿಣ ಏಷ್ಯಾಗೆ ವಿಸ್ತರಿಸುವಂತೆ ಮಾಡಿ.
ಗೆಳೆಯರೇ, ಬಾಹ್ಯಾಕಾಶದಲ್ಲಿನ ಅಭಿವೃದ್ಧಿ ಮುಂದುವರಿಯುತ್ತಾ ಇರಬೇಕು, ಅದು ನಮ್ಮ ರಾಷ್ಟ್ರೀಯ ಧ್ಯೇಯವೂ ಆಗಬೇಕು. ನಮ್ಮ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಇನ್ನಷ್ಟು ವೃದ್ಧಿಸುವತ್ತ ಗಮನ ಕೊಡಬೇಕು. ವಿಶ್ವದ ಉಡಾವಣಾ ಸೇವಾದಾರನಾಗುವ ಸಾಮರ್ಥ್ಯ ಭಾರತಕ್ಕಿದೆ. ಈ ಗುರಿಯನ್ನಿಟ್ಟುಕೊಂಡು ನಾವು ಕೆಲಸ ಮಾಡಬೇಕು.  ಇಲ್ಲಿ ಯುವ ವಿಜ್ಞಾನಿಗಳನ್ನು ಕಾಣುವಾಗ ನನಗೆ ತುಂಬಾ ಸಂತೋಷವಾಗುತ್ತಿದೆ. ಅವರ ಕೆಲಸ, ಸಾಧನೆಯನ್ನು ಶ್ಲಾಘಿಸುತ್ತೇನೆ. ನಾವು ಇನ್ನೂ ಹೆಚ್ಚು ವಿಶ್ವವಿದ್ಯಾಲಯಗಳು, ಕಾಲೇಜುಗಳೊಂದಿಗೆ ಸಂಪರ್ಕ ಹೊಂದೋಣ, ಭವಿಷ್ಯದ ನಾಯಕರನ್ನು ಸಿದ್ಧಪಡಿಸೋಣ. ನಮ್ಮ ಯುವಜನರೊಂದಿಗೆ ಇನ್ನಷ್ಟು ಸಂಪರ್ಕ ಹೊಂದಲು ಸಾಮಾಜಿಕ ತಾಣವನ್ನು ಬಳಸೋಣ. ಉಪಗ್ರಹಗಳ ಉಡಾವಣೆ ವೀಕ್ಷಿಸಲು ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳನ್ನು ಆಹ್ವಾನಿಸೋಣ. ಅದರ ಜತೆಗೆ, ಅತ್ಯಾಧುನಿಕ, ಡಿಜಿಟಲ್ ಬಾಹ್ಯಾಕಾಶ ಮ್ಯೂಸಿಯಂ ಅಭಿವೃದ್ಧಿಪಡಿಸುವ ಬಗ್ಗೆಯೂ ಚಿಂತಿಸೋಣ ಅಲ್ಲವೇ?
ಕೊನೆಯದಾಗಿ, ತಂತ್ರಜ್ಞಾನವು ಹೇಗೆ ಅಭಿವೃದ್ಧಿಯ ಕೇಂದ್ರ ಎಂಬುದನ್ನು ನಾನು ತಿಳಿಸಬಯಸುತ್ತೇನೆ. ಅದು ಎಲ್ಲರನ್ನೂ ಒಳಗೊಳ್ಳುವಂತೆ ಮಾಡುತ್ತದೆ ಹಾಗೂ ಅದು ರಾಷ್ಟ್ರೀಯ ಪ್ರಗತಿಯ ಪ್ರಮುಖ ಅಂಶವೂ ಹೌದು.
ಪ್ರಮಾಣ, ವೇಗ ಮತ್ತು ಕೌಶಲ ಎಂಬ ನನ್ನ ಧ್ಯೇಯಕ್ಕೆ ಸ್ಪಷ್ಟ ಉದಾಹರಣೆಯೇ ಭಾರತದ ಬಾಹ್ಯಾಕಾಶ ಯೋಜನೆ. ಆಧುನಿಕ ತಂತ್ರಜ್ಞಾನದ ಕ್ಲಿಷ್ಟ ಕ್ಷೇತ್ರದಲ್ಲಿ ನಮ್ಮನ್ನು ಜಾಗತಿಕ ನಾಯಕರನ್ನಾಗಿಸಿದ ಕೀರ್ತಿ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಲ್ಲುತ್ತದೆ. ಇದು ನಾವು 'ದಿ ಬೆಸ್ಟ್‌' ಆಗಬಲ್ಲೆವು ಎಂಬುದನ್ನು ತೋರಿಸುತ್ತದೆ. ನಾವು ನಮ್ಮನ್ನು ತೊಡಗಿಸಿಕೊಂಡರೆ, ಜನರ ಆಶೋತ್ತರಗಳನ್ನು ಪೂರೈಸಲು ನಮ್ಮಿಂದ ಸಾಧ್ಯ.
ಇಂದಿನ ಯೋಜನೆಯಿಂದಲೇ ನಾವು ಸ್ಫೂರ್ತಿ ಪಡೆಯೋಣ. ದೇಶದ ಅಭಿವೃದ್ಧಿಯ ವೇಗ ಹೆಚ್ಚಿಸಲು ಬದ್ಧರಾಗೋಣ. ನಮ್ಮಿಂದ ಇದು ಸಾಧ್ಯವಿದೆ! ನನಗೆ ಆ ವಿಶ್ವಾಸವಿದೆ!
ಇಂದಿನ ಉಪಗ್ರಹ ಉಡಾವಣೆಯನ್ನು ಸಾಕ್ಷೀಕರಿಸುವ ಅವಕಾಶ ನೀಡಿದ್ದಕ್ಕಾಗಿ ನಾನು ಬಾಹ್ಯಾಕಾಶ ಇಲಾಖೆಗೆ ಧನ್ಯವಾದ ಹೇಳುತ್ತೇನೆ. ಡಾ. ಕೆ. ರಾಧಾಕೃಷ್ಣನ್‌ರ ನಾಯಕತ್ವವನ್ನು ಶ್ಲಾಘಿಸುತ್ತೇನೆ. ಕೆಲವೇ ತಿಂಗಳಲ್ಲಿ ಮಾರ್ಸ್ ಆರ್ಬಿಟ್ ಅನ್ನು ಮಂಗಳನ ಅಂಗಳಕ್ಕೆ ತಲುಪಿಸಲಿರುವ ನಿಮಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಹೊಸ ಹೊಸ ತಂತ್ರಜ್ಞಾನಗಳಲ್ಲಿ ಪರಿಣತಿ ಗಳಿಸಲು ನೀವು ಮಾಡುವ ಎಲ್ಲ ಪ್ರಯತ್ನಗಳಿಗೂ ಯಶಸ್ಸು ಸಿಗಲಿ!
ಧನ್ಯವಾದಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement