ಎತ್ತಿನಹೊಳೆ ಯೋಜನೆಯಲ್ಲಿ ಮಾತೇ ಹೊಳೆ ಈವರೆಗೂ ಬರೀ ಭರವಸೆ ಕೊಡುತ್ತಾ ಬಂದಿದ್ದವರು ಈಗ ಚುನಾವಣೆ ನೆಪದಲ್ಲೇ ನೆನಪು ಮಾಡಿಕೊಂಡ್ರು
ಐದು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು. ನಾಲ್ಕು ಸಾವಿರ ಕೆರೆಗಳಿಗೆ ನೀರು. ಅಂತರ್ಜಲ ಮಟ್ಟ ವೃದ್ಧಿ. ಸರಿಸುಮಾರು 120 ಟಿಎಂಸಿ...
ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.1
ಐದು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು. ನಾಲ್ಕು ಸಾವಿರ ಕೆರೆಗಳಿಗೆ ನೀರು. ಅಂತರ್ಜಲ ಮಟ್ಟ ವೃದ್ಧಿ. ಸರಿಸುಮಾರು 120 ಟಿಎಂಸಿ ನೀರು. ಕೊನೆಗೆ 24 ಟಿಎಂಸಿ ನೀರಾದರೂ ಬರುತ್ತೆ. ಇದಕ್ಕೆಲ್ಲ ಬರೋಬ್ಬರಿ 8323.50 ಕೋಟಿ ವೆಚ್ಚ. ಅದೀಗ 12,950 ಕೋಟಿ ಆಗಿದೆ. ಅದಕ್ಕೆ ಶಂಕುಸ್ಥಾಪನೆಯೂ ಆಗಿಯೇಬಿಡುತ್ತೆ...
ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಮುಕ್ಕಾಲು ಕೋಟಿ ಜನರು ಕಳೆದ 13 ವರ್ಷಗಳಿಂದ ಕೇಳಿಕೊಂಡೇ ಬರುತ್ತಿರುವ ಮಾತುಗಳಿವು. ಯೋಜನೆ ಅನುಷ್ಠಾನದ ಬಗ್ಗೆ ಮಾತಿನ ಸುರಿಮಳೆಯಾಗಿದೆಯೇ ಹೊರತು ನೀರು ತಂದಿಲ್ಲ. ಉಹೂಂ... ತರುವುದಿರಲಿ, ಅದನ್ನು ಹೇಗೆ ತರಬೇಕು ಎಂಬ ಯೋಜನೆಯೇ ಇನ್ನೂ ಆಗಿಲ್ಲ. ಆದರೆ, ನೂರಕ್ಕೂ ಹೆಚ್ಚು ಟಿಎಂಸಿ ನೀರು ನಿಮ್ಮ ಜಿಲ್ಲೆಗಳಲ್ಲಿ ಹರಿದುಬರುತ್ತದೆ ಎಂಬ ಗಗನಕುಸುಮವನ್ನು ಮಾತ್ರ ಜನರ ಕಿವಿಗೆ ಇನ್ನೂ ಮುಡಿಸಲಾಗುತ್ತಿದೆ. ಈಗ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ 'ಶಂಕುಸ್ಥಾಪನೆ' ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರೆಯಲಿದೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯಿದು. ಸರ್ಕಾರದ ಸಚಿವ ಸಂಪುಟ ಟಿಪ್ಪಣಿ ಪ್ರಕಾರ, ನಿವೃತ್ತ ಎಂಜಿನಿಯರ್, ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ಅವರ ವರದಿಯೇ ಬೇರೆ, ಎತ್ತಿನಹೊಳೆ ಯೋಜನೆಯೇ ಬೇರೆ. ಎತ್ತಿನಹೊಳೆ ಯೋಜನೆ ಅಲ್ಲದೆ, ಜಿ.ಎಸ್. ಪರಮಶಿವಯ್ಯ ವರದಿಯನ್ನೂ ಜಾರಿ ತರಲಾಗುತ್ತದೆ. ಆದರೆ, ಈವರೆಗೆ ಯಾವ ಯೋಜನೆಗೂ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿಲ್ಲ!
ಜಿ.ಎಸ್. ಪರಮಶಿವಯ್ಯ ಅವರ ವರದಿಯಂತೆ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲು 2003ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅನುಮೋದನೆ ನೀಡಿದ್ದರು. ಅದರಂತೆ ಅಂದು ಸರ್ವೆ ಕಾರ್ಯ ನಡೆದಿದೆ. ಸಂಸ್ಥೆಯಿಂದ ಸಂಸ್ಥೆಗೆ ಆ ಜವಾಬ್ದಾರಿ ಬದಲಾಗುತ್ತಿದೆ. ಸಾಕಷ್ಟು ಕೋಟಿ ರುಪಾಯಿಗಳು ವೆಚ್ಚವಾಗುತ್ತಿದೆಯೇ ವಿನಹ ಸರ್ವೆ ಮುಗಿದಿಲ್ಲ, ಡಿಪಿಆರ್ ಸಿದ್ಧಗೊಂಡಿಲ್ಲ. ಹೀಗಿದ್ದರೂ, ಯೋಜನೆಗೊಂದು ಕಲ್ಲು ಹಾಕಬೇಕೆಂದು 2669.83 ಕೋಟಿ ವೆಚ್ಚದಲ್ಲಿ ಏತ ಕಾಮಗಾರಿಗಳಿಗೆ ಐದು ಪ್ಯಾಕೇಜ್ಗಳಲ್ಲಿ 2012ರ ನವೆಂಬರ್ 2ರಂದು ಟೆಂಡರ್ ಕೂಡ ಆಹ್ವಾನಿಸಲಾಗಿದೆ. ಮತ್ತೊಮ್ಮೆ ಮರುಟೆಂಡರ್ ಆಗಿ ಇದೀಗ ಟೆಂಡರ್ ಪೂರ್ಣಗೊಂಡಿದೆ. ಆದರೆ, ವೆಚ್ಚ ಮಾತ್ರ ಎರಡೇ ವರ್ಷಗಳಲ್ಲಿ ಸುಮಾರು 4 ಸಾವಿರ ಕೋಟಿ ಹೆಚ್ಚಿದೆ. ಅನುಷ್ಠಾನ ವೇಳೆಗೆ ಇನ್ನೆಷ್ಟು ಸಾವಿರ ಕೋಟಿ ಲೆಕ್ಕಕ್ಕೆ ಬೀಳುವುದೋ?
ಎಷ್ಟೆಷ್ಟು ದೂರ?
ಸಕಲೇಶಪುರದಿಂದ 24 ಕಿಮೀ ದೂರದಲ್ಲಿರುವ ಎತ್ತಿನಹೊಳೆ ಹಾಗೂ ಸುತ್ತಮುತ್ತಲಿನ ಹೊಳೆಗಳು ತುಮಕೂರಿನ ದೇವರಾಯನದುರ್ಗದಿಂದ 224 ಕಿಮೀ ದೂರದಲ್ಲಿವೆ. ದೇವರಾಯನದುರ್ಗದಿಂದ ಚಿಕ್ಕಬಳ್ಳಾಪುರ 86.6 ಕಿಮೀ, ಕೋಲಾರ 137 ಕಿಮೀ, ರಾಮನಗರ 91 ಕಿಮೀ ದೂರದಲ್ಲಿವೆ. ಅಂದರೆ, ಹೇಗೆ ಲೆಕ್ಕ ಮಾಡಿದರೂ ಯೋಜನೆಯ ತುತ್ತತುದಿ ಕೋಲಾರ. ಇಲ್ಲೇ ಅತಿಹೆಚ್ಚು ಕೆರೆಗಳಿರುವುದು. ಆದರೆ, ಕೆರೆ ತುಂಬುವ ಸಂಖ್ಯೆಗಳ ಕಲ್ಪನೆ ಮಾತ್ರ ಅತಿ ಅಲ್ಪ. 2011ರ ಜನಗಣತಿ ಪ್ರಕಾರ, ಕೋಲಾರ ಜಿಲ್ಲೆಯಲ್ಲಿ 15,36,401, ಚಿಕ್ಕಬಳ್ಳಾಪುರದಲ್ಲಿ 12,54,377, ತುಮಕೂರಿನಲ್ಲಿ 26,78,480, ರಾಮನಗರದಲ್ಲಿ 10,82,739 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 9,87,257 ಜನಸಂಖ್ಯೆ ಇದೆ.
ನಾಳೆ ಕರಾಳ ದಿನ
ಬೆಂಗಳೂರು: ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವುದನ್ನು ವಿರೋಧಿಸಿ ಚಿಕ್ಕಬಳ್ಳಾಪುರದಲ್ಲಿ ಮಾ.3ರ ಸೋಮವಾರ ಕರಾಳದಿನ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ವಿರುದ್ಧ ಕಪ್ಪುಬಟ್ಟೆ ಧರಿಸಿ ಪ್ರತಿಭಟಿಸಲಾಗುತ್ತದೆ.
ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರು ಪೂರೈಸಬೇಕೆಂದು ದಶಕಗಳಿಂದ ಹೋರಾಡುತ್ತಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ನಿರ್ಧರಿಸಿದೆ. ಹಾಗೆಂದು, ಎತ್ತಿನಹೊಳೆ ಯೋಜನೆಗೆ ಈ ಸಮಿತಿ ವಿರೋಧವಾಗಿದೆ ಎಂದೇನೂ ಅಲ್ಲ. ಬದಲಿಗೆ ಎತ್ತಿನಹೊಳೆ ಯೋಜನೆಯಿಂದ ಎಷ್ಟು ನೀರು ಬರುತ್ತದೆ, ಈ ಜಿಲ್ಲೆಗಳ ದಾಹವನ್ನು ಇದು ತಣಿಸುತ್ತದೆಯೇ ಎಂಬ ವಿವರಣೆ ಬಯಸುತ್ತಿದ್ದೇವೆ. ಇದನ್ನು ಯಾವ ರಾಜಕಾರಣಿ ಅಥವಾ ಅಧಿಕಾರಿಗಳೂ ನೀಡುತ್ತಿಲ್ಲ. ಅದಕ್ಕೇ ಈ ಪ್ರತಿಭಟನೆ. ಕೋಲಾರ- ಚಿಕ್ಕಬಳ್ಳಾಪುರದ ಎಲ್ಲ ನಾಗರಿಕರೂ ಭಾಗವಹಿಸಲಿದ್ದಾರೆ ಎನ್ನುತ್ತಾರೆ ಸಮಿತಿ ಸಂಚಾಲಕ ಆರ್. ಆಂಜನೇಯರೆಡ್ಡಿ. ಎತ್ತಿನಹೊಳೆ ಯೋಜನೆಯಿಂದ ಏನೇ ಕಷ್ಟಪಟ್ಟರೂ 8- 9 ಟಿಎಂಸಿ ನೀರು ಮಾತ್ರ ಲಭ್ಯವಾಗುತ್ತದೆ. ಐದು ಜಿಲ್ಲೆಗಳಿಗೆ ಇದು ಸಾಲುತ್ತದೆಯೇ ಎನ್ನುತ್ತಾರೆ ಆಂಜನೇಯ ರೆಡ್ಡಿ.
ಕೆರೆ ಮಂಜುನಾಥ್