ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದಿಕ್ಕು ತಪ್ಪಿಸುವ ಎತ್ತಿನಹೊಳೆ

Mainashree
Updated On : 1 Mar 2014, 11:39 am

ಮಂಗಳೂರು: ನೇತ್ರಾವತಿ ನದಿ ತಿರುಗಿಸಲು ಹೋಗಿ ಹಿನ್ನಡೆ ಅನುಭವಿಸಿದ್ದ ರಾಜ್ಯ ಸರ್ಕಾರ ಈಗ ಎತ್ತಿನಹೊಳೆ ಯೋಜನೆ ಹೆಸರಲ್ಲಿ ಅದನ್ನು ಅನುಷ್ಠಾನ ಮಾಡಲು ಹೊರಟಿದೆ. ಇದರಿಂದ ಕರಾವಳಿ ಜನರ ಬದುಕೇ ಬರಡಾಗುವ ಅಪಾಯ ಎದುರಾಗಿದೆ.
ಎತ್ತಿನಹೊಳೆ ಯೋಜನೆ ಅಂದರೆ ಬೇರೇನೂ ಅಲ್ಲ ನೇತ್ರಾವತಿ ನದಿ ಮೂಲ ಹರಿವನ್ನೇ ತಿರುಗಿಸುವುದು. ನೇತ್ರಾವತಿಯಲ್ಲಿ ಜನವರಿಯಿಂದ ಜೂನ್‌ವರೆಗೆ ನೀರು ಕಡಿಮೆಯಾಗುತ್ತದೆ. ಆಗ ಪ್ರತಿ ಬಾರಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಆದರೆ, ಇದಕ್ಕೆ ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಪರಿಹಾರ ಕಂಡುಕೊಂಡಿಲ್ಲ. ಬದಲಾಗಿ ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ನೇತ್ರಾವತಿ ನದಿ ಮೂಲ ಹರಿವನ್ನೇ ತಿರುಗಿಸಲು ಹೊರಟಿದೆ. ತನ್ನ ಹಳೆಯ ಯೋಜನೆಯನ್ನೇ ಹೊಸ ಹೆಸರಿನಲ್ಲಿ ಅನುಷ್ಠಾನ ಮಾಡಲು ಸಜ್ಜಾಗಿದೆ.
ನೇತ್ರಾವತಿ ನದಿ ಪ್ರದೇಶದಲ್ಲಿ ಮಳೆ ಬೀಳುವ ಗರಿಷ್ಠ ದಿನಗಳು 100. ಮಳೆ ಸರಾಸರಿ ಪ್ರಮಾಣ 3,500ರಿಂದ 4 ಸಾವಿರ ಮಿ.ಮೀ. ಆದರೆ, ಎತ್ತಿನಹೊಳೆ ಯೋಜನೆಯಲ್ಲಿ 8 ಸಾವಿರ ಮಿ.ಮೀ. ತೋರಿಸಲಾಗಿದೆ. ಈ ಪ್ರಮಾಣವನ್ನು ನೀಡಿರುವುದು ಖಾಸಗಿ ಕಾಫಿ ತೋಟದವರು! 12,900 ದುಬಾರಿ ವೆಚ್ಚದಲ್ಲಿ 24 ಟಿಎಂಸಿ ನೀರು ತಿರುಗಿಸಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ನೀಡಲಾಗುವುದು ಎಂದು ನಂಬಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಅಲ್ಲಿ ಹೆಚ್ಚೆಂದರೆ 8ರಿಂದ 10 ಟಿಎಂಸಿ ಮಾತ್ರ ಸಿಗುತ್ತದೆ.
ದುಷ್ಪರಿಣಾಮ ಏನು?: ಕಾಡು ಹಾಳು ಮಾಡಿ ನದಿ ನೀರು ತಿರುಗಿಸಿದರೆ ಇಲ್ಲಿ ಬೀಳುವ ಮಳೆ ಪ್ರಮಾಣ ಕಡಿಮೆಯಾಗುತ್ತದೆ. ಪಶ್ಚಿಮಘಟ್ಟ ಉಗಮವಾಗುವ ಎಲ್ಲ ನದಿಗಳ ಮೇಲೂ ಪರಿಣಾಮ ಬೀಳುತ್ತದೆ. ಇದರಿಂದ ಎಲ್ಲೆಡೆ ತೊಂದರೆ. ನದಿ ನೀರು ಹರಿವು ಕಡಿಮೆಯಾಗುತ್ತಿದ್ದಂತೆ ಕಡಲಿನ ಉಪ್ಪು ನೀರು ನದಿಯಲ್ಲಿ ಹಿಮ್ಮುಖವಾಗಿ ಹರಿಯುತ್ತದೆ. ನದಿ ಪಾತ್ರದ ಬಾವಿ, ಕೆರೆಗಳಲ್ಲಿ ಉಪ್ಪು ನೀರು ತುಂಬಿ, ಕೃಷಿಯೂ ನಾಶವಾಗಿ ಜನರು ಬದುಕು ಬರಡಾಗುತ್ತದೆ.  ನದಿಯಲ್ಲಿ ಹರಿದು ಬರುವ ಮಳೆಗಾಲದ ಸಿಹಿ ನೀರು ಸಮುದ್ರದಲ್ಲಿ ಮೀನುಗಳ ಸಂತಾನೋತ್ಪತ್ತಿಗೆ ಪ್ರಶಸ್ತ್ಯ. ಪಶ್ಚಿಮಘಟ್ಟದ ಖನಿಜಾಂಶಗಳ ನೀರು ಕಡಿಮೆಯಾದಾಗ ಮೀನುಗಳು ನಮ್ಮ ಕರಾವಳಿಗೆ ಬಾರದೆ ಮೀನುಗಾರಿಕೆ ಬರ ಉಂಟಾಗಿ ಬಡ ಮೀನುಗಾರರಿಗೆ ಬದುಕು ಕಷ್ಟವಾಗಬಹುದು.
233 ಕಿ.ಮೀ. ಕಾಲುವೆ ಮಾಡುತ್ತಾರಂತೆ. ಕುಡಿಯುವ ನೀರಿಗಾದರೆ ಕೊಳವೆ ಮೂಲಕ ನೀರು ಕಳುಹಿಸಬಹುದಲ್ಲ? ಕೃಷಿ, ಕೈಗಾರಿಕೆ ಇನ್ನಿತರ ವ್ಯಾಪಾರಿ ಉದ್ದೇಶಗಳಿಗಾಗಿ ನೀರು ಒಯ್ಯುತ್ತಿದ್ದಾರೆ. ಪರಿಸರ ಇಲಾಖೆ ಅನುಮತಿ ಸಿಗಲು ಕುಡಿಯುವ ನೀರು ಯೋಜನೆ ಎಂದು ತೋರಿಸಲಾಗುತ್ತಿದೆ. 8 ಕಡೆ ಆಣೆಕಟ್ಟು ನಿರ್ಮಿಸುತ್ತಾರೆ. 100 ಕಿ.ಮೀ. ಉದ್ದ ಪಶ್ಚಿಮಘಟ್ಟ ದಟ್ಟಾರಣ್ಯದಲ್ಲಿ ಕಾಲುವೆ ಮಾಡಿದಾಗ ಕಾಡು ನಾಶವಾಗುತ್ತದೆ.
ಇಲ್ಲಿನ ಕುಡಿಯುವ ನೀರು ಒಯ್ಯುವಾಗ ಇಲ್ಲಿನವರನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು. ಗ್ರಾಮ ಪಂಚಾಯ್ತಿಯಿಂದ ಹಿಡಿದು ಜಿಲ್ಲಾಪಂಚಾಯ್ತಿ ವರೆಗೆ ಎತ್ತಿನಹೊಳೆ ಯೋಜನೆ ವಿರುದ್ಧ ನಿರ್ಣಯಿಸಲಾಗಿದೆ. ಇಲ್ಲಿನ ಜನರ ಜೀವನ ಬಗ್ಗೆ ಕಾಳಜಿ ವಹಿಸಿಲ್ಲ. ಹಕ್ಕು ಮೊಟಕುಗೊಳಿಸಲಾಗಿದೆ.

 ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement