ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶಿರಾಡಿಘಾಟ್ ಕಾಂಕ್ರೀಟ್ ರಸ್ತೆ ನಿರ್ಮಾಣ: ಅಡೆತಡೆ ನಿವಾರಣೆ

Mainashree
Updated On : 1 Mar 2014, 11:38 am

ಬೆಂಗಳೂರು: ಶಿರಾಡಿ ಘಾಟ್ ರಸ್ತೆಗೆ ಕಾಂಕ್ರೀಟ್ ಹಾಕುವ ಯೋಜನೆಯ ಟೆಂಡರ್ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ರಸ್ತೆ ನಿರ್ಮಾಣಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿವೆ. ಟೆಂಡರ್ ಪ್ರಶ್ನಿಸಿ ಗೋಕುಲ್‌ದಾಸ್ ಭಂಡಾರ್‌ಕರ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ಅಲ್ಲದೆ, ಟೆಂಡರ್‌ನ ನಿಯಮಗಳಲ್ಲಿ ಕೊನೆಯ ಹಂತದಲ್ಲಿ ಮಾಡಿದ ಬದಲಾವಣೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದು, ಅದರಲ್ಲಿ ಯಾವುದೇ ದುರುದ್ದೇಶ ಕಂಡುಬರುತ್ತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಪ್ರಕ್ರಿಯೆ ಸರಿಯಾಗಿದೆ: ಶಿರಾಡಿ ಘಾಟ್‌ನ ರಸ್ತೆಯನ್ನು ದುರಸ್ತಿಗೊಳಿಸಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕರೆದಿದ್ದ ಟೆಂಡರ್‌ನ ದಾಖಲೆಗಳನ್ನು ಬದಲಾವಣೆ ಮಾಡಿ 'ಅಕ್ವಡಕ್ಟ್‌' ಮಾದರಿ ಅಳವಡಿಸುವ ಕುರಿತು ಪರಿಷ್ಕೃತ ದಾಖಲೆ ಬಿಡುಗಡೆ ಮಾಡಿದ ಸರ್ಕಾರದ ಕ್ರಮ ಸರಿಯಾಗಿದೆ. ಅಲ್ಲದೆ, ಟೆಂಡರ್‌ಗೆ ಯಾವುದೇ ಸಂಸ್ಥೆಯನ್ನು ಪರಿಗಣಿಸುವ ಮುನ್ನ ಸಂಸ್ಥೆ ಹಿನ್ನೆಲೆ ಹಾಗೂ ಸಾಧನೆ ಪರಿಶೀಲಿಸಿದೆ. ಆದ್ದರಿಂದ ಅರ್ಜಿದಾರ ಸಂಸ್ಥೆ ಟೆಂಡರ್ ಪಡೆದ ಸಂಸ್ಥೆಗಿಂತ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿದ್ದರೂ, ಅದೇ ಸಂಸ್ಥೆಗೆ ಟೆಂಡರ್ ನೀಡಬೇಕು ಎಂಬ ಆದೇಶ ಸಾರ್ವಜನಿಕ ಹಿತಾಸಕ್ತಿಯಾಗಲಾರದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ವಿವಾದವೇನು?: ಬೆಂಗಳೂರಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್‌ನ ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್ 48)ನ  250 ಕಿಮಿ ರಸ್ತೆಯ ದುರಸ್ತಿಯ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕರೆದಿದ್ದ ಟೆಂಡರ್‌ನಲ್ಲಿ ತಾವು ಅತ್ಯಂತ ಕಡಿಮೆ ದರದ ಬಿಡ್ ಮಾಡಿದ್ದರೂ ತಮ್ಮನ್ನು ಕಡೆಗಣಿಸಿ ಬೇರೊಂದು ಸಂಸ್ಥೆಗೆ ನೀಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement