ಸಮಾವೇಶಕ್ಕೆ ಸಿಎಂ ಗೈರು ಭುಗಿಲೆದ್ದ ಅಸಮಾಧಾನ
ಅಲ್ಪಸಂಖ್ಯಾತರ ಸಮಾವೇಶಕ್ಕೆ ಆಗಮಿಸದ...
ಬೆಂಗಳೂರು: ಅಲ್ಪಸಂಖ್ಯಾತರ ಸಮಾವೇಶಕ್ಕೆ ಆಗಮಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಿರಿಯ ನಾಯಕ ಜಾಫರ್ ಷರೀಫ್, ಶಾಸಕ ಎನ್.ಎ. ಹ್ಯಾರೀಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಗೆ ಪಕ್ಷ ಸಂಘಟಿಸುವ ಉದ್ದೇಶದಿಂದ ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿ ಆಯೋಜಿಸಿದ್ದ ಈ ಸಮಾವೇಶದಲ್ಲಿ ಅಲ್ಪಸಂಖ್ಯಾತ ಮುಖಂಡರು ವ್ಯಕ್ತಪಡಿಸಿದ ಈ ಆಕ್ರೋಶದಿಂದ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಕೂಡಾ ಅಲ್ಪಸಂಖ್ಯಾತ ಮುಖಂಡರ ಮಾತಿಗೆ ಧ್ವನಿಗೂಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಈ ಕುರಿತು ಮಾತನಾಡುವುದಾಗಿ ಹೇಳಿದ್ದಾರೆ. ಅಲ್ಪಸಂಖ್ಯಾತ ಸಮುದಾಯದವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯಕ್ಕೆ ಆಗ್ರಹಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾರ್ತಾ ಸಚಿವ ರೋಷನ್ ಬೇಗ್ ಸೇರಿದಂತೆ ಹಲವು ಗಣ್ಯರು ಗೈರಾಗಿದ್ದರು. ಬೆಂಗಳೂರು ನಗರದಿಂದ ಆಯ್ಕೆಗೊಂಡ ಇಬ್ಬರು ಕಾಂಗ್ರೆಸ್ ಶಾಸಕರು ಮಾತ್ರ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅಹಿಂದ ಹಿನ್ನೆಲೆಯಲ್ಲೇ ಸಿದ್ದರಾಮಯ್ಯ ಮೇಲೆ ಬೇಸರ ವ್ಯಕ್ತವಾಗಿರುವುದು ವಿಶೇಷ.