ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಾದರಿಯಾಗದ ಶಿಕ್ಷಣ ಸಾಮರಸ್ಯ ಯೋಜನೆ

Mainashree
Updated On : 2 Mar 2014, 9:14 am

ಬೆಂಗಳೂರು: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಶಿಕ್ಷಣ ಸಾಮರಸ್ಯ ವಿದ್ಯಾ ಕೇಂದ್ರ ಯೋಜನೆ ಇಲಾಖೆ ನಿರ್ಲಕ್ಷ್ಯದಿಂದ ಹಳ್ಳ ಹಿಡಿದಿದೆ.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಶಾಲೆಯನ್ನು ಉದ್ಯಮಿಗಳ ನೆರವಿನಿಂದ ಅಭಿವೃದ್ಧಿಗೊಳಿಸುವ ಮಹತ್ವಾಕಾಂಕ್ಷಿ ಯೋಜನೆ 8 ತಿಂಗಳಿಂದ ಕಡತದಲ್ಲೇ ಬಾಕಿಯಾಗಿದೆ. 2013-14ರ ಆಯವ್ಯಯದಲ್ಲಿ ಈ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು. ಆದರೆ ಶಾಲೆ ಅಭಿವೃದ್ಧಿಯೂ ಇಲ್ಲ, ಯೋಜನೆ ರೂಪುರೇಷೆ ಕೂಡ ತಯಾರಾಗಿಲ್ಲ.
ರಾಜ್ಯದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 6 ಸಾವಿರ ಕೋಟಿಗೂ ಅಧಿಕ ಅನುದಾನದ ಅಗತ್ಯವಿದೆ. ರಾಜ್ಯ ಸರ್ಕಾರದಿಂದ ಈ ಹಣವನ್ನು ನೀಡಲು ಕಷ್ಟವಾಗಬಹುದು ಎಂದು ನಿಜವನ್ನು ಒಪ್ಪಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ರಾಜ್ಯ ಸಚಿವ ಕಿಮ್ಮನೆ ರತ್ನಾಕರ, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಸರ್ವ ಶಿಕ್ಷಣ ಅಭಿಯಾನ ಇಲಾಖೆ ಮಾಹಿತಿ ಪ್ರಕಾರ ಇವತ್ತಿನವರೆಗೆ ಶಿಕ್ಷಣ ಸಾಮರಸ್ಯ ವಿದ್ಯಾ ಕೇಂದ್ರ ಯೋಜನೆ ಕುರಿತಂತೆ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಮತ್ತೊಂದೆಡೆ ಈ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕಿರುವ ಸರ್ವಶಿಕ್ಷಣ  ಅಭಿಯಾನದ ಯೋಜನಾ ನಿರ್ದೇಶಕರ ಹುದ್ದೆ 3 ತಿಂಗಳಿಂದ ಖಾಲಿ ಬಿದ್ದಿದೆ. ಇದರಿಂದ ಮೂಲಭೂತ ಸೌಕರ್ಯ ಅಭಿವೃದ್ಧಿ ಎನ್ನುವುದು ಕೇವಲ ಪ್ರಚಾರದ ಮಾತಾಗಿದೆ.
ಏನಿದು ಸಾಮರಸ್ಯ ಯೋಜನೆ?: ರಾಜ್ಯ ಸರ್ಕಾರ ಈಗಾಗಲೇ ಕೆಲ ಮಾದರಿ ಶಾಲೆಗಳನ್ನು ತೆರೆದಿದೆ. ಇದನ್ನು ಹೊರತುಪಡಿಸಿ ಪ್ರತಿ ತಾಲೂಕಿಗೊಂದರಂತೆ ಸರ್ಕಾರಿ ಶಾಲೆಯನ್ನು ಉನ್ನತೀಕರಿಸಲು ಸರ್ಕಾರ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿತ್ತು. ಆದರೆ ಇದನ್ನು ಹೊರತುಪಡಿಸಿ ಸುಮಾರು 5 ಸಾವಿರಕ್ಕೂ ಅಧಿಕ ಹಿರಿಯ ಪ್ರಾಥಮಿಕ ಶಾಲೆಗಳನ್ನು ಅಭಿವೃದ್ಧಿಪಡಿಸುವ ಬೃಹತ್ ಯೋಜನೆ ಇದು.
ರಾಜ್ಯದಲ್ಲಿರುವ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ದೃಷ್ಟಿಯಿಂದ ಈ ಯೋಜನೆ ಪ್ರಾರಂಭಿಸಲು ಉದ್ದೇಶಿಸಲಾಗಿತ್ತು. ಪ್ರಾರಂಭಿಕ ಹಂತವಾಗಿ ಕೆಲ ಉದ್ಯಮಿಗಳೊಂದಿಗೆ ಸಚಿವರು ಮಾತುಕತೆ ನಡೆಸಿದ್ದರು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ಯೋಜನೆ ಮುಂದಿನ ಹಂತ ತಲುಪಲೇ ಇಲ್ಲ. ಈ ಯೋಜನೆ ಪ್ರಕಾರ, ಪ್ರತಿ ಶಾಲೆಯ ಅಭಿವೃದ್ಧಿಗೆ ಖಾಸಗಿ ಉದ್ಯಮಗಳು ಸುಮಾರು 30 ಲಕ್ಷ ಹಣವನ್ನು ವಿನಿಯೋಗಿಸುತ್ತವೆ. ಇದರಿಂದ ಶಾಲೆಯಲ್ಲಿ ಕಟ್ಟಡ, ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಹಾಗೂ ಕಂಪ್ಯೂಟರ್ ಪ್ರಯೋಗಾಲಯ ಒದಗಿಸಲಾಗುತ್ತದೆ. ಒಂದು ಶಾಲೆಗೆ ರಾಜ್ಯ ಸರ್ಕಾರ ಇಷ್ಟೊಂದು ಪ್ರಮಾಣದ ಅನುದಾನ ನೀಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಖಾಸಗಿ ಸಹಭಾಗಿತ್ವ ಪಡೆಯಲು ಚಿಂತಿಸಲಾಗಿತ್ತು. ಅಂದಹಾಗೆ ಇದರಿಂದ ಆ ಶಾಲೆಯ ಮೇಲೆ ಸರ್ಕಾರದ ಯಾವುದೇ ಹಿಡಿತ ತಪ್ಪುತ್ತಿರಲಿಲ್ಲ. ಬದಲಾಗಿ ಸರ್ಕಾರದ ಯಾವುದೇ ಖರ್ಚಿಲ್ಲದೇ ಸರ್ಕಾರಿ ಶಾಲೆ ಮೂಲಭೂತ ಸೌಕರ್ಯ ಅಭಿವೃದ್ಧಿ ಹೊಂದುತ್ತಿತ್ತು. ಇದಲ್ಲದೇ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಒಂದು ಮಾದರಿ ಶಾಲೆ ದೊರೆಯುತ್ತಿತ್ತು.
ವರ್ಗಾವಣೆಗೆ ಮಾತ್ರ ಆಸಕ್ತಿ: ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕರಾಗಿದ್ದ ಸುಬೋಧ್ ಯಾದವ್ ಅವರಿಗೆ ಇದಕ್ಕೆ ಸಂಬಂಧಿಸಿದ ತಂತ್ರಾಂಶ ಹಾಗೂ ನಮೂನೆಗಳನ್ನು ರೂಪಿಸುವ ಜವಾಬ್ದಾರಿ ನೀಡಲಾಗಿತ್ತು.
ಆದರೆ ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಅಕ್ರಮಗಳನ್ನು ಯಾದವ್ ಅವರು ಬಹಿರಂಗಪಡಿಸುತ್ತಾರೆ ಎನ್ನುವುದು ತಿಳಿಯುತ್ತಿದ್ದಂತೆ ವರ್ಗಾವಣೆಗೊಳಿಸಲಾಯಿತು. ಅವರ ನಂತರ ಅಧಿಕಾರಕ್ಕೆ ಬಂದ ಮುದ್ದುಮೋಹನ್ ಕೂಡ ಕಳೆದ ವಾರ ವರ್ಗಾವಣೆಯಾಗಿ ಹೋದರು. ಸರ್ವ ಶಿಕ್ಷಣ ಅಭಿಯಾನದ ಒಬ್ಬ ಮುಖ್ಯ ಎಂಜಿನಿಯರ್‌ಗೋಸ್ಕರ ಇಲಾಖೆಯಲ್ಲಿನ ಇತರ ಯೋಜನೆಗಳನ್ನು ಹಳ್ಳ ಹಿಡಿಸಲಾಗುತ್ತಿದೆ.
ಪ್ರಾಮಾಣಿಕ ಸಚಿವರು ಕೈಗೆ ಸಿಗುವುದಿಲ್ಲ!
ಯೋಜನೆ ರೂಪುರೇಷೆ ತಯಾರಿಸಲಾಗುತ್ತಿದೆ, ಜನವರಿ ತಿಂಗಳಿನಿಂದ ಅರ್ಜಿ ಕರೆಯಲಾಗುವುದು ಎಂದು ಅಕ್ಟೋಬರ್ ತಿಂಗಳ ಕೊನೆಯಲ್ಲಿ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದರು. ಆದರೆ ಇವತ್ತಿನವರೆಗೆ ಯೋಜನೆಯು ಆ ಹಂತದಿಂದ ಮುಂದೆ ಸಾಗಿಯೇ ಇಲ್ಲ. ಈ ಬಗ್ಗೆ ಸಚಿವರನ್ನು ಸಂಪರ್ಕಿಸಲು 'ಕನ್ನಡಪ್ರಭ' ಪ್ರಯತ್ನಿಸಿದರೆ ಯಾವುದೇ ಪ್ರತಿಕ್ರಿಯೆಯಿಲ್ಲ.
ಯೋಜನೆಯ ಮುಖ್ಯ ಉದ್ದೇಶ
-  ಕಾರ್ಪೊರೇಟ್ ಸಂಸ್ಥೆ ಹಾಗೂ ದಾನಿಗಳ ನೆರವಿನಿಂದ ರಾಜ್ಯದಲ್ಲಿರುವ 5629 ಗ್ರಾ.ಪಂಗಳಲ್ಲಿ ಮಾದರಿ ಶಾಲೆ ನಿರ್ಮಾಣ.
- ಪ್ರತಿ ಶಾಲೆಗೆ ಕನಿಷ್ಠ 30 ಲಕ್ಷ ಹಣ ವಿನಿಯೋಗ.
-  ಶಾಲೆಯಲ್ಲಿ ಕಟ್ಟಡ, ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಹಾಗೂ ಕಂಪ್ಯೂಟರ್ ಪ್ರಯೋಗಾಲಯ ನಿರ್ಮಾಣ.

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement