ರಾಷ್ಟ್ರಪತಿ ತಿರಸ್ಕಾರ ಭಯ ರಾಹುಲ್ ಬಿಲ್ ನಪಾಸು
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿರೋಧದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಬಲಿತ ಭ್ರಷ್ಟಾಚಾರ ನಿಗ್ರಹ...
ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿರೋಧದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಬಲಿತ ಭ್ರಷ್ಟಾಚಾರ ನಿಗ್ರಹ ಮಸೂದೆಗಳಿಗೆ ಸಂಬಂಧಿಸಿ ಸುಗ್ರೀವಾಜ್ಞೆ ಹೊರಡಿಸುವ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟ ತಿರಸ್ಕರಿಸಿದೆ.
ಆದರೆ, ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತರ ಭಾರತದ ಬಹುಸಂಖ್ಯಾತ ಜಾಟ್ ಜನಾಂಗವನ್ನು ಒಬಿಸಿ ಪಟ್ಟಿಗೆ ಸೇರಿಸುವ ಪ್ರಸ್ತಾಪಕ್ಕೆ ಭಾನುವಾರ ನಡೆದ ಯುಪಿಎ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಜತೆಗೆ, ದಲಿತರ ಮೇಲಿನ ದೌರ್ಜನ್ಯಗಳ ತಡೆ ಕಾಯ್ದೆ ತಿದ್ದುಪಡಿ ಮತ್ತು ಅಂಗವಿಕಲರ ಹಕ್ಕುಗಳ ಕಾಯ್ದೆ ತಿದ್ದುಪಡಿಗೂ ಒಪ್ಪಿಗೆ ಸೂಚಿಸಿದೆ.
ಸೀಮಾಂಧ್ರಕ್ಕೆ ವಿಶೇಷ ಸ್ಥಾನ: ಸೀಮಾಂಧ್ರಕ್ಕೆ ಮುಂದಿನ ಐದು ವರ್ಷಗಳ ವರೆಗೆ ವಿಶೇಷ ಸ್ಥಾನ ಮಾನ ನೀಡುವ ಪ್ರಸ್ತಾಪವನ್ನು ಒಪ್ಪಿಕೊಂಡಿರುವ ಸಚಿವ ಸಂಪುಟ, ಈ ಕುರಿತು ಯೋಜನಾ ಆಯೋಗಕ್ಕೂ ನಿರ್ದೇಶನ ನೀಡಿದೆ.
ರಾಷ್ಟ್ರಪತಿ ವಿರೋಧ: ರಾಹುಲ್ ಗಾಂಧಿ ಬೆಂಬಲಿತ ನ್ಯಾಯಾಂಗ ಮಾನದಂಡ ಹಾಗೂ ಉತ್ತರದಾಯಿತ್ವ ಮಸೂದೆ, ಮಾಹಿತಿದಾರರ ರಕ್ಷಣೆ ಮಸೂದೆ, ಸಾರ್ವಜನಿಕ ಸ್ವಾಧೀನ ಮಸೂದೆ, ಕಾಲಮಿತಿಯೊಳಗೆ ಸರಕು ಮತ್ತು ಸೇವೆಗಳ ಪೂರೈಕೆ ಮತ್ತು ಕುಂದುಕೊರತೆಗಳ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಷ್ಟ್ರಪತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಸಚಿವ ಕಪಿಲ್ ಸಿಬಲ್ ಹಾಗೂ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೂ ರಾಷ್ಟ್ರಪತಿ ಪಟ್ಟು ಬಿಡದ ಹಿನ್ನೆಲೆಯಲ್ಲಿ ಸರ್ಕಾರ ಈ ಮಸೂದೆಗಳಿಗೆ ಒಪ್ಪಿಗೆ ನೀಡದಿರಲು ನಿರ್ಧರಿಸಿತು. ಸಾಲು ಸಾಲು ಹಗರಣಗಳಿಂದಾಗಿ ಹೆಸರು ಕೆಡಿಸಿಕೊಂಡಿರುವ ಯುಪಿಎ ಸರ್ಕಾರಕ್ಕೆ ಈ ಮಸೂದೆಗಳು ಹೊಸ ವರ್ಚಸ್ಸು ನೀಡಲಿವೆ ಎಂಬುದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿರೀಕ್ಷೆಯಾಗಿತ್ತು.