ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹರ್ಷ ಮೊಯ್ಲಿ ಕಣದಿಂದ ಔಟ್!

ಅಮೆರಿಕ ಮಾದರಿಯಲ್ಲಿ ಅಭ್ಯರ್ಥಿ ಆಯ್ಕೆ ಮಾಡಬೇಕೆಂಬ ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಆಂತರಿಕ ಚುನಾವಣೆ ಮಂಗಳೂರಿನಲ್ಲಿ ಠುಸ್ ಆಗಿದೆ...

Mainashree
Updated On : 2 Mar 2014, 10:11 am

ಮಂಗಳೂರು: ಅಮೆರಿಕ ಮಾದರಿಯಲ್ಲಿ ಅಭ್ಯರ್ಥಿ ಆಯ್ಕೆ ಮಾಡಬೇಕೆಂಬ ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಆಂತರಿಕ ಚುನಾವಣೆ ಮಂಗಳೂರಿನಲ್ಲಿ ಠುಸ್ ಆಗಿದೆ.
ದಕ್ಷಿಣ ಕನ್ನಡ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಆಸೆಗೆ ಎಐಸಿಸಿ ತಣ್ಣೀರೆರಚಿದೆ.
ಅಂದರೆ ಆಂತರಿಕ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಪ್ರಕಟ ವೇಳೆ ಹರ್ಷ ಮೊಯ್ಲಿ ಹೆಸರನ್ನೇ ಕೈಬಿಡಲಾಗಿದೆ.  ಇದರೊಂದಿಗೆ ಮಂಗಳೂರಿನಲ್ಲಿ ಮಾ. 9ರಂದು ನಡೆಯುವ ಆಂತರಿಕ ಚುನಾವಣೆಯಲ್ಲಿ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಮತ್ತು ಉದ್ಯಮಿ ಕಣಚೂರು ಮೋನು ನಡುವೆ ಮಾತ್ರ ಚುನಾವಣೆ ನಡೆಯಲಿದೆ.   

ಈ ಮೂಲಕ ಕೇಂದ್ರ ಸಚಿವ ಮೊಯ್ಲಿ ಪುತ್ರ ಹಾಗೂ ಮಾಜಿ ಕೇಂದ್ರ ಸಚಿವರಂಥ ದಿಗ್ಗಜರ ನಡುವೆ ಪೈಪೋಟಿ ಇದ್ದ ಹಿನ್ನೆಲೆಯಲ್ಲಿ ನಡೆಯಬೇಕಾಗಿದ್ದ ಆಂತರಿಕ ಚುನಾವಣೆ ಮಹತ್ವ ಕಳೆದುಕೊಂಡಿದೆ.
ಆಂತರಿಕ ಚುನಾವಣೆಗೆ ಅಭ್ಯರ್ಥಿ ಸ್ಥಾನಕ್ಕೆ ಅರ್ಜಿ ಸಲ್ಲಿಸಬೇಕಾದರೆ 19 ಮಾನದಂಡಗಳಲ್ಲಿ ಅವಕಾಶವಿದೆ. ಜನಾರ್ದನ ಪೂಜಾರಿ ಮಾಜಿ ಸಂಸದ, ಮಾಜಿ ಸಚಿವ, ಎಐಸಿಸಿ ಪದಾಧಿಕಾರಿ ನೆಲೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಕಣಚೂರು ಮೋನು ಅಲ್ಪಸಂಖ್ಯಾತ ವಿಭಾಗದ ಪದಾಧಿಕಾರಿಯಾಗಿದ್ದ ಹಿನ್ನೆಲೆಯಲ್ಲಿ ಅರ್ಜಿ ಗುಜರಾಯಿಸಿದ್ದರು. ಆದರೆ ಹರ್ಷ ಮೊಯ್ಲಿ ಕಾಂಗ್ರೆಸ್‌ನ ಯಾವ ವಿಭಾಗದ ಪದಾಧಿಕಾರಿಯೂ ಅಲ್ಲ. ಅವರು ಕೇವಲ ಕಾಂಗ್ರೆಸ್ ಸದಸ್ಯ ಹಾಗೂ ಉದ್ಯಮಿ ಬಿಟ್ಟರೆ ಬೇರೆ ಅರ್ಹತೆ ಇರಲಿಲ್ಲ. ಹಾಗಾಗಿ ಅವರು ಕೊನೆ ಮಾನದಂಡವಾದ ಸಾಮಾಜಿಕ ಅರ್ಹತೆ ವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದರು.
ನಾಮಪತ್ರ ಪರಿಶೀಲನೆಯಲ್ಲಿ ಅರ್ಜಿ ಸ್ವೀಕಾರವಾಗಿದೆ. ಮತದಾರರ ಕರಡು ಮತಪಟ್ಟಿ ಪ್ರಕಟಿಸುವಾಗಲೂ ಹರ್ಷ ಮೊಯ್ಲಿ ಸ್ಪರ್ಧಾ ಕಣದಲ್ಲಿದ್ದರು. ಹರ್ಷ ಮೊಯ್ಲಿ ಮಂಗಳೂರಿನ ಮತದಾರರಲ್ಲವಾದ್ದರಿಂದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಆದರೆ ಭಾನುವಾರ ಮತದಾರರ ಅಂತಿಮ ಪಟ್ಟಿ ಪ್ರಕಟಣೆ ವೇಳೆ ಹರ್ಷ ಮೊಯ್ಲಿ ಹೆಸರು ನಾಪತ್ತೆಯಾಗಿದೆ.
ಮಾ.9ರಂದು ನಡೆಯುವ ಆಂತರಿಕ ಚುನಾವಣೆಯಲ್ಲಿ ಜನಾರ್ದನ ಪೂಜಾರಿಗೆ ವಿಮಾನ ಮತ್ತು ಕಣಚೂರು ಮೋನುಗೆ ಬ್ಯಾಟ್ ಚಿನ್ಹೆ ನೀಡಲಾಗಿದೆ. ನಗರದ ರೊಸಾರಿಯೋ ಚರ್ಚ್ ಹಾಲ್‌ನಲ್ಲಿ ಬೆಳಗ್ಗೆ 11ಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಮತದಾನ ನಡೆಯಲಿದೆ.
ರಾಹುಲ್‌ಗೆ ಮುಖಭಂಗ: ಅಭ್ಯರ್ಥಿ ಆಯ್ಕೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟ ಕಾರಣ ಮಂಗಳೂರು ಮತ್ತು ಬೆಂಗಳೂರು ಉತ್ತರದಲ್ಲಿ ಅಮೆರಿಕ ಮಾದರಿಯಲ್ಲಿ ಆಂತರಿಕ ಚುನಾವಣೆಗೆ ಕಾಂಗ್ರೆಸ್ ನಿರ್ಧರಿಸಿತ್ತು. ಮಂಗಳೂರು ಕ್ಷೇತ್ರದಲ್ಲಿ ಪೂಜಾರಿ ಹಾಗೂ ಹರ್ಷ ಮೊಯ್ಲಿ ಮಧ್ಯೆ ಪೈಪೋಟಿ ಏರ್ಪಟ್ಟಿದ್ದರಿಂದ ರಾಹುಲ್ ಆಂತರಿಕ ಚುನಾವಣೆಗೆ ಸೂಚನೆ ನೀಡಿದ್ದರು.
ಪೂಜಾರಿಯ ಹಿರಿತನಕ್ಕೆ ಬೆಲೆ ನೀಡಿ ಆಂತರಿಕ ಚುನಾವಣೆಯಿಂದ ಮಂಗಳೂರನ್ನು ಹೊರತುಪಡಿಸುವಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‌ನ್ನು ವಿನಂತಿ ಮಾಡಿದ್ದರು.
ಇದಕ್ಕೆ ಹೈಕಮಾಂಡ್ ಕ್ಯಾರೇ ಎಂದಿರಲಿಲ್ಲ. ಇದರ ಪರಿಣಾಮ ಈಗ ಹರ್ಷ ಮೊಯ್ಲಿ ಬದಲು ಕಣಚೂರು ಮೋನು ಮತ್ತು ಪೂಜಾರಿ ನಡುವಿನ ಪ್ರಯೋಗಕ್ಕೆ ರಾಹುಲ್ ಸಾಕ್ಷಿಯಾಗಬೇಕಾಗಿದೆ!


ಪೂಜಾರಿಗೇ ಗೊತ್ತಿರಲಿಲ್ಲ!
ಮತದಾರರ ಅಂತಿಮ ಪಟ್ಟಿ ಪ್ರಕಟಿಸುತ್ತಾರೆ ಎಂದು ಜನಾರ್ದನ ಪೂಜಾರಿ, ಕಣಚೂರು ಮೋನು ಮತ್ತು ಹರ್ಷ ಮೊಯ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭಾನುವಾರ ಸಂಜೆ ಆಗಮಿಸಿದ್ದರು. ಮೊದಲು ಹರ್ಷ ಮೊಯ್ಲಿ ಬಂದು ಹೋದರು. ನಂತರ ಪೂಜಾರಿ, ಮೋನು ಆಗಮಿಸಿದರು. ಇಷ್ಟಾದರೂ ಹರ್ಷ ಮೊಯ್ಲಿ ಹೆಸರು ತಿರಸ್ಕೃತಗೊಂಡಿರುವುದು ಪೂಜಾರಿ ಅವರಿಗೆ ಗೊತ್ತಿರಲಿಲ್ಲ. ನೋಟಿಸ್ ಬೋರ್ಡ್‌ನಲ್ಲಿ ನೋಡಿದಾಗ ಕೇವಲ ಪೂಜಾರಿ ಮತ್ತು ಮೋನು ಹೆಸರಿತ್ತು. ಬಹುಶಃ ಬಿಟ್ಟುಹೋಗಿರಬೇಕು ಎಂದು ಪದಾಧಿಕಾರಿಗಳು ವೀಕ್ಷಕರಲ್ಲಿ ವಿಚಾರಿಸಿದರು. ಆಗಷ್ಟೇ ಹರ್ಷ ಮೊಯ್ಲಿ ಹೆಸರು ತಿರಸ್ಕೃತಗೊಂಡಿರುವುದು ಗಮನಕ್ಕೆ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement