ಎಸ್ಸೆಸ್ಸೆಲ್ಲಿ ಪೂರೈಸದ ಅಂಗನವಾಡಿ ಸಹಾಯ ಕಾರ್ಯಕರ್ತೆಯರಿಗೆ ಬಡ್ತಿ ಅವಕಾಶ ಇಲ್ಲ
ಬೆಂಗಳೂರು: ಸೇವಾನುಭವವಿದ್ದರೂ ಎಸ್ಎಸ್ಎಲ್ಸಿ ಪೂರೈಸದ ಅಂಗನವಾಡಿ ಸಹಾಯಕ ಕಾರ್ಯಕರ್ತೆಯರಿಗೆ ಕಾರ್ಯಕರ್ತೆ ಹುದ್ದೆಗೆ ಬಡ್ತಿ ಹೊಂದಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಮಗೆ ಕಾರ್ಯಕರ್ತೆಯ ಹುದ್ದೆಗೆ ಬಡ್ತಿ ನೀಡಬೇಕು ಎಂದು ಕೋರಿ ತುಮಕೂರು ಜಿಲ್ಲೆ ತುರುವೆಕೆರೆ ತಾಲೂಕಿನ ಬೈತರಹೊಸಹಳ್ಳಿಯ ಅಂಗನವಾಡಿ ಸಹಾಯಕ ಕಾರ್ಯಕರ್ತೆ ಚಂದ್ರಮ್ಮ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.
ವಿವಾದವೇನು?: ತಾವು ಬೈತರಹೊಸಹಳ್ಳಿ ಅಂಗನವಾಡಿಯ ಸಹಾಯಕ ಕಾರ್ಯಕರ್ತೆಯಾಗಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಸೇವಾಧಾರದ ಮೇಲೆ ತಮ್ಮನ್ನು ಕಾರ್ಯಕರ್ತೆಯ ಹುದ್ದೆಗೆ ಪರಿಗಣಿಸಬೇಕು. ಆದರೆ, ಸರ್ಕಾರ 2012ರ ಜೂನ್ನಲ್ಲಿ ಬಿ.ಪಿ.ರಂಜಿತಾ ಎಂಬುವರನ್ನು ಕಾರ್ಯಕರ್ತೆಯಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದೆ ಎಂದು ಮಂಜುಳಾ ಅರ್ಜಿಯಲ್ಲಿ ಆರೋಪಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಂಜಿತಾ ಪರ ವಕೀಲರು, ಸರ್ಕಾರ 2012ರ ಜೂನ್ 15ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ಅರ್ಹತೆಗಳನ್ನು ಉಲ್ಲೇಖಿಸಿದೆ. ಅದರಂತೆ, ಕಾರ್ಯಕರ್ತೆಯ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಕನಿಷ್ಠ ಎಸ್ಎಸ್ಎಲ್ಸಿ ಪೂರೈಸಿರಬೇಕು. ಅಲ್ಲದೆ, ಎಸ್ಎಸ್ಎಲ್ಸಿ ಪೂರೈಸಿ ಕನಿಷ್ಠ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವವಿರುವ ಸಹಾಯಕ ಕಾರ್ಯಕರ್ತೆಯರು ಕೂಡ ಅರ್ಜಿ ಸಲ್ಲಿಸಬಹುದು ಎಂದು ಅದರಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಅಧಿಸೂಚನೆ ಹೊರಡಿಸಿದ ದಿನಾಂಕದಂದು ಮಂಜುಳಾ ಎಸ್ಎಸ್ಎಲ್ಸಿ ಪೂರೈಸಿರಲಿಲ್ಲ. ನಂತರ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾರೆ. ಆದ್ದರಿಂದ ಅವರನ್ನು ಹುದ್ದೆಗೆ ಪರಿಗಣಿಸಲಾಗದು ಎಂದು ವಾದಿಸಿದ್ದರು. ಇದನ್ನು ಪರಿಗಣಿಸಿದ ಪೀಠ, ಮಂಜುಳಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.