3 ವರ್ಷ ಒಂದೇ ಕಡೆ ಇರುವವರ ವರ್ಗ
ಬೆಂಗಳೂರು: ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ 3 ವರ್ಷಗಳಿಂದ ಒಂದೇ ಸ್ಥಾನದಲ್ಲಿರುವ ಅಧಿಕಾರಿಗಳ ವರ್ಗಾವಣೆ ನಡೆಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ತಿಳಿಸಿದ್ದಾರೆ.
ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾರ್ಗಸೂಚಿ ಪ್ರಕಾರ ಅಧಿಕಾರಿಗಳ ವರ್ಗಾವಣೆಗೆ ಇನ್ನುಮುಂದೆ ಸೂಚಿಸಬೇಕಾಗುತ್ತದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಿರಂತರವಾಗಿ 3ವರ್ಷಗಳಿಗೂ ಹೆಚ್ಚು ಕಾಲ ಒಂದೇ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಅಥವಾ ಯಾವುದೇ ಸರ್ಕಾರಿ ಸಿಬ್ಬಂದಿಯನ್ನು ಮಾರ್ಗಸೂಚಿ ಪ್ರಕಾರ ವರ್ಗಾವಣೆ ಮಾಡಲಾಗುತ್ತದೆ. ಆದರೆ ಆ ಅಧಿಕಾರಿ ಚುನಾವಣೆ ಸೇವೆಯಲ್ಲಿ ನೇರವಾಗಿ ಪಾಲ್ಗೊಳ್ಳುವಂತಿದ್ದರೆ ಅವರಿಗೆ ಈ ಮಾರ್ಗ ಸೂಚಿ ಅನ್ವಯಿಸುತ್ತದೆ. ಉಳಿದಂತೆ ಚುನಾವಣೆ ಪ್ರಕ್ರಿಯೆಯಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳುವವರನ್ನು ಯಾರಾದರೂ ದೂರು ನೀಡಿದರೆ ಅಥವಾ ಆಯೋಗಕ್ಕೆ ಅಗತ್ಯ ಎನಿಸಿದರೆ ಮಾತ್ರ ವರ್ಗಾವಣೆ ಮಾಡಲಾಗುತ್ತದೆ ಎಂದು ಅನಿಲ್‌ಕುಮಾರ್ ಝಾ ಹೇಳಿದರು. ರಾಜ್ಯದಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಆಯ್ಕೆ ನಡೆಯಬೇಕಿದ್ದು, ಇದಕ್ಕೆ ಯಾವುದೇ ಅಡಚಣೆ ಇಲ್ಲ. ಆದರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಸಂಸದರು ಮತದಾನ ಮಾಡುವುದರಿಂದ ಈ ಬಗ್ಗೆ ಕಾನೂನು ಸಲಹೆ ಹಾಗೂ ಆಯೋಗದ ಹಿರಿಯನ್ನು ಸಂಪರ್ಕಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.
19ರಂದು ಅಧಿಸೂಚನೆ; ಏ.17ರಂದು ಮತದಾನ
ಇಡೀ ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸುವುದು ನೆರೆ ರಾಜ್ಯಗಳಲ್ಲಿ ನಡೆದಿತ್ತು. ಆದರೆ ಲೋಕಸಭೆ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುತ್ತಿರುವುದು ರಾಜ್ಯದಲ್ಲಿ ಇದೇ ಪ್ರಥಮ. ಇದಕ್ಕೆ ಅಗತ್ಯ ಸಿಬ್ಬಂದಿ ಮತ್ತು ಸಿದ್ಧತೆ ನಡೆಸಲಾಗುವುದು ಎಂದರು. ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದಂತೆ ರಾಜ್ಯದಲ್ಲಿ ಏಪ್ರಿಲ್ 17ರಂದು ಮತದಾನ ನಡೆಯಲಿದೆ. ಆದರೆ ಚುನಾವಣೆ ನಡೆದ ತಿಂಗಳ ನಂತರ ಅಂದರೆ ಮೇ 16ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರ ಬೀಳಲಿದೆ ಎಂದರು. ಮಾರ್ಚ್ 19ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮಾ.26ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದ್ದು, ಮಾ.27 ನಾಮಪತ್ರ ಪರಿಷ್ಕರಣೆ ನಡೆಯಲಿದೆ. ನಂತರ ಮಾ.29 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ.
10ಲಕ್ಷ ಮತದಾರರ ಹೆಚ್ಚಳ
ವಿಧಾನಸಭಾ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಸುಮಾರು 10ಲಕ್ಷ ಮತದಾರರು ಹೊಸದಾಗಿ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಜನವರಿ 31ರ ವರೆಗೂ ರಾಜ್ಯದಲ್ಲಿ 4,46,43,877 ಮತದಾರರು ಈತನಕ ಪಟ್ಟಿಯಲ್ಲಿದ್ದಾರೆ. ಇದರಲ್ಲಿ 2,27,78,644 ಮಂದಿ ಪುರುಷ ಮತದಾರರಿದ್ದು, 2,18,23,000 ಮಹಿಳಾ ಮತದಾರರಿದ್ದಾರೆ. ಇದಲ್ಲದೆ 3260 ಇತರ ಮತದಾರರಿದ್ದಾರೆ. ಇದಲ್ಲದೆ ಮೊದಲ ಬಾರಿಗೆ ಮತದಾನ ಮಾಡುವವರೆಂದು ಸುಮಾರು 8.4ಲಕ್ಷ ಮತದಾರರನ್ನು ಗುರುತಿಸಲಾಗಿದೆ.
ಪಟ್ಟಿಗೆ ಹೆಸರು ಸೇರಿಸಲು ಕೊನೆ ಅವಕಾಶ
ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಬಯಸಿದರೆ ಅವರಿಗೆ ಕೊನೆ ಅವಕಾಶ ಕಲ್ಪಿಸಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 16 ಕೊನೆದಿನ. ಇದಕ್ಕಾಗಿ ಮಾರ್ಚ್ 9ರಂದು ರಾಜ್ಯದ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ವಿಶೇಷ ಶಿಬಿರಗಳನ್ನು ನಡೆಸಲಾಗುತ್ತದೆ.