ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಡಾ.ಪ್ರಭು'ರಾಜ' ಅಕ್ರಮಕ್ಕೆ ಮಂತ್ರಿ 'ಬಹುಪರಾಕ್‌'

Vishwanath S
Updated On : 6 Mar 2014, 12:25 pm

ಬೆಂಗಳೂರು: ಆಯಕಟ್ಟಿನ ಸ್ಥಾನದಲ್ಲಿರುವ ಕಳಂಕಿತ ಅಧಿಕಾರಿಯೊಬ್ಬರನ್ನು ಮಾತೃ ಇಲಾಖೆಗೆ ತಕ್ಷಣ ವರ್ಗಾಯಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಡತಕ್ಕೆ ಸಹಿ ಮಾಡಿದ್ದರೂ ಕ್ರಮ ತೆಗೆದುಕೊಳ್ಳುವುದಕ್ಕೆ ಐಟಿಬಿಟಿ ಸಚಿವ ಎಸ್.ಆರ್. ಪಾಟೀಲರು ಮೀನಮೇಷ ಎಣಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಡಿ.ಕೆ.ಪ್ರಭುರಾಜ ಅವರನ್ನು ಮಾತೃ ಇಲಾಖೆಗೆ ವರ್ಗಾಯಿಸಿ ನಿಯಮ ಪ್ರಕಾರ ಹೊಸ ನಿರ್ದೇಶಕರನ್ನು ನೇಮಕ ಮಾಡಿ ಎಂದು ಸಿದ್ದರಾಮಯ್ಯ ಆದೇಶಿಸಿದ್ದಾರೆ. ಇದಕ್ಕೆ ಆರಂಭದಲ್ಲಿ ಸಮ್ಮತಿ ನೀಡಿದ್ದ ಎಸ್.ಆರ್.ಪಾಟೀಲರು ದಿನ ಕಳೆದಂತೆ 'ನುಡಿದಂತೆ ನಡೆಯುವುದನ್ನು' ಮರೆತು ಬಿಟ್ಟಿದ್ದಾರೆ.
ಡಾ.ಪ್ರಭುರಾಜ ವಿರುದ್ಧ ಅಧಿಕಾರ ದುರ್ಬಳಕೆ, ಅಧೀನ ಅಧಿಕಾರಿಗಳಿಗೆ ಕಿರುಕುಳ ಸೇರಿದಂತೆ ಅನೇಕ ಆರೋಪಗಳಿವೆ. ಇಸ್ರೋದಿಂದಲೇ ನಿಷೇಧಗೊಂಡ ವಿಜ್ಞಾನಿಯೊಬ್ಬರನ್ನು ಕಾನೂನು ಬಾಹಿರವಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಎರಡು ದಿನಗಳ ಹಿಂದಷ್ಟೇ ಸರ್ಕಾರ ಲೋಕಾಯುಕ್ತ ತನಿಖಾ ವ್ಯಾಪ್ತಿಗೆ ತಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಡಾ.ಬಸಪ್ಪ ರೆಡ್ಡಿ ಅವರನ್ನೂ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ.
ಯಾರೀ ಅಧಿಕಾರಿ?: ಕೆಎಸ್‌ಆರ್‌ಎಸ್‌ಎಸಿಯ ಹಾಲಿ ಪ್ರಭಾರ ನಿರ್ದೇಶಕರಾಗಿರುವ ಡಾ.ಪ್ರಭುರಾಜ ತಲಘಟ್ಟಪುರದಲ್ಲಿರುವ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ನಿಯೋಜನೆಗೊಂಡ ವಿಜ್ಞಾನಿ. 2011ರಲ್ಲಿ ಅಂದಿನ ಸರ್ಕಾರದ ಮೇಲೆ ಒತ್ತಡ ತಂದು ದೂರ ಸಂವೇದಿ ಕೇಂದ್ರದ ಪ್ರಭಾರ ನಿರ್ದೇಶಕರಾಗಿ ನೇಮಕಗೊಂಡರು.
ಇವರು ಅಧಿಕಾರ ವಹಿಸಿಕೊಂಡ ನಂತರ ವಿದ್ಯಾರ್ಹತೆ, ಅನುಭವ ಪರಿಗಣಿಸದೇ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ, ಬಡ್ತಿ, ವೇತನ ಪರಿಷ್ಕರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಾತಿ, ಪ್ರದೇಶ ಹಾಗೂ ಇತರೆ ಮಾನದಂಡಗಳಿಗೆ ಆದ್ಯತೆ ನೀಡಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪವಿದೆ. ಕೇಂದ್ರದಲ್ಲಿ ಸಾಕಷ್ಟು ಕಂಪ್ಯೂಟರ್‌ಗಳಿದ್ದರೂ ಬಾಡಿಗೆಗೆ ಕಂಪ್ಯೂಟರ್ ಖರೀದಿಸಿ ಭ್ರಷ್ಟಾಚಾರವೆಸಗಿದ ಆರೋಪವಿದೆ.
ಇದೆಲ್ಲದಕ್ಕಿಂತ ಮಿಗಿಲಾಗಿ ಕೇಂದ್ರದ ಗುಲ್ಬರ್ಗ ಪ್ರಾಂತೀಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಿಶಿಷ್ಟ ಜಾತಿಯ ಮಂಜುಳಾ ಬಾಯಿ ಎಂಬುವರಿಗೆ ಕಿರುಕುಳ ನೀಡಿದ ಆರೋಪವಿದೆ.
ಸಚಿವ ಪಾಟೀಲರೇ ಈ ಹಿಂದೆ ಮುಖ್ಯಮಂತ್ರಿ ಕಚೇರಿಗೆ ಈ ಎಲ್ಲ ವಿವರಗಳನ್ನು ಒಳಗೊಂಡ ಕಡತ ರವಾನಿಸಿದ್ದರು. ಹೀಗಾಗಿ ಸಿದ್ದರಾಮಯ್ಯ ವರ್ಗಾವಣೆಗೆ ಆದೇಶಿಸಿದ್ದರು. ಆದರೆ ಏಕಾಏಕಿ ಸಚಿವರ ನಿಲುವು ಬದಲಾಗಿದ್ದು ಕುತೂಹಲ ಸೃಷ್ಟಿಸಿದೆ.
ಬಿಎಸ್‌ವೈ ಮಗಳ ಸಂಸ್ಥೆಗೆ ಹಣ ಕೊಡ್ತಾರಂತೆ..!
ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರಿ ಉಮಾದೇವಿ ಅವರಿಗೆ ಸೇರಿದ್ದ ಕಾಂಡೂರ್ ಬ್ಯುಸಿನೆಸ್ ಸೊಲ್ಯೂಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜತೆ ಕೇಂದ್ರದ ಹಿಂದಿನ ನಿರ್ದೇಶಕರು ಹೊರಗುತ್ತಿಗೆ ವಿಚಾರ ಸಂಬಂಧ ಒಪ್ಪಂದ ಮಾಡಿಕೊಂಡಿದ್ದರು.
ಒಂದು ವರ್ಷಗಳವರೆಗೆ ಮಾತ್ರ ಈ ಒಡಂಬಡಿಕೆ ಇತ್ತು. ಆದರೆ ಪ್ರಭುರಾಜ ಅವರು ಇಂದಿಗೂ ಒಡಂಬಂಡಿಕೆ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದ್ದ ಮಾಸಿಕ ರು. 16 ಸಾವಿರವನ್ನು ಈ ಸಂಸ್ಥೆಗೆ ಇನ್ನೂ ರವಾನಿಸುತ್ತಿದ್ದಾರೆ. ಇದರ ಪ್ರತಿಯೂ ಕನ್ನಡಪ್ರಭಕ್ಕೆ ಲಭ್ಯವಾಗಿದೆ.
ವಿವಾದಿತ ಇಸ್ರೋ ವಿಜ್ಞಾನಿ ಹಾಗೂ ಅಕ್ರಮ ಗಣಿಗಾರಿಕೆ ಆರೋಪಿಗೆ ಮಣೆ
ದೇವಾಸ್ ಸ್ಪೆಕ್ಟ್ರಂ ಹಂಚಿಕೆ ವಿಚಾರ ಸಂಬಂಧ ಈ ಹಿಂದೆ ವಿವಾದಕ್ಕೆ ಗುರಿಯಾಗಿದ್ದ ಇಸ್ರೋ ತನ್ನ ನಾಲ್ವರು ವಿಜ್ಞಾನಿಗಳನ್ನು ಪದಚ್ಯುತಗೊಳಿಸಿ, ಇವರಿಗೆ ದೇಶದ ಯಾವುದೇ ಸರ್ಕಾರಿ ಸಂಸ್ಥೆಯಲ್ಲಿ ಹುದ್ದೆ ನೀಡಬಾರದೆಂದು ಅಭಿಪ್ರಾಯಪಟ್ಟಿತ್ತು. ಈ ಪೈಕಿ ಒಬ್ಬರಾದ ಡಾ.ಕೆ.ಆರ್.ಶ್ರೀಧರ್‌ಮೂರ್ತಿ ಅವರನ್ನು ಡಾ.ಪ್ರಭುರಾಜ್ ಗುತ್ತಿಗೆ ಆಧಾರದ ಮೇಲೆ ಸಂಸ್ಥೆಗೆ ನೇಮಕ ಮಾಡಿಕೊಂಡಿದ್ದಾರೆ. ಅದೇ ರೀತಿ ಮೈಸೂರು ಮಿನರಲ್ಸ್ (ಎಂಎಂಎಲ್)ನಲ್ಲಿ ನಡೆದ ಗಣಿ ಅಕ್ರಮ ಹಿನ್ನೆಲೆಯಲ್ಲಿ ಲೋಕಾಯುಕ್ತ ವರದಿಯಲ್ಲಿ ಹೆಸರಿಸಲ್ಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಜಿ ನಿರ್ದೇಶಕ ಡಾ.ಬಸಪ್ಪರೆಡ್ಡಿ ಅವರನ್ನೂ ಸಲಹೆಗಾರರಾಗಿ ನೇಮಿಸಿಕೊಂಡಿದ್ದಾರೆ. ವಿಶೇಷವೆಂದರೆ ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಬಸಪ್ಪ ರೆಡ್ಡಿ ವಿರುದ್ಧ ಮತ್ತೆ ತನಿಖೆಗೆ ಆದೇಶಿಸಲಾಗಿದೆ.


-ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement