ಹಾಡಹಗಲೇ ಪಾಲಿಕೆ ಸದಸ್ಯೆ ಪತಿ ಕಗ್ಗೊಲೆ
ದೇವಸಂದ್ರ ವಾರ್ಡ್ ಪಾಲಿಕೆ ಸದಸ್ಯೆ ಮಂಜುಳಾದೇವಿ ಪತಿಯನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ಬುಧವಾರ...
ಕೃಷ್ಣರಾಜಪುರ: ದೇವಸಂದ್ರ ವಾರ್ಡ್ ಪಾಲಿಕೆ ಸದಸ್ಯೆ ಮಂಜುಳಾದೇವಿ ಪತಿಯನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ಬುಧವಾರ ಕೃಷ್ಣರಾಜಪುರದಲ್ಲಿ ನಡೆದಿದೆ.
ಸಿರಪುರಂ ಶ್ರೀನಿವಾಸ್ (43) ಕೊಲೆಯಾದವರು. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿಯ ಚಾಯ್ಸ್ ಮೆನ್ಸ್ ಸಲೂನ್ನಲ್ಲಿ ಕ್ಷೌರ ಮಾಡಿಸಿಕೊಳ್ಳಲು ಹೊಗಿದ್ದಾಗ ಹೊಂಚುಹಾಕಿದ್ದ ಐವರು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಶ್ರೀನಿವಾಸ್ ಕ್ಷೌರ ಮಾಡಿಸಿಕೊಳ್ಳುತ್ತಿದ್ದ ವೇಳೆ ನುಗ್ಗಿದ ಹಂತಕರು ಸಲೂನ್ ಬಾಗಿಲು ಮುಚ್ಚಿ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದರು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಎಚ್ಎಎಲ್ ಬಳಿಯ ಮಣಿಪಾಲ್ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಕೂಡಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಶ್ರೀನಿವಾಸ್ಗೆ ಸಾಯಿ ಧನುಷ್ (14) ಮೇಘನಾ (12) ಎಂಬ ಇಬ್ಬರು ಮಕ್ಕಳಿದ್ದಾರೆ. ಕಳೆದ ವರ್ಷ ಏಪ್ರಿಲ್ 19 ರಂದೇ ದುಷ್ಕರ್ಮಿಗಳು ಕೊಲೆಗೆ ಸಂಚು ರೂಪಿಸಿದ್ದರು. ಆದರೆ ಆಗ ಕತ್ತಲಲ್ಲಿ ಗುರುತು ಸಿಕ್ಕದೆ ಇವರ ಜತೆಗಿದ್ದ ವಿಶ್ವನಾಥ್ ಮೇಲೆ ತೀವ್ರ ಹಲ್ಲೆ ಮಾಡಲಾಗಿತ್ತು.
ಮಗನ ಹುಟ್ಟು ಹಬ್ಬದ ಸಿದ್ದತೆಯಲ್ಲಿದ್ದವರಿಗೆ ಆಘಾತ: ಗುರುವಾರ ಮಗ ಸಾಯಿ ಧನುಷ್ ಹುಟ್ಟುಹಬ್ಬ ಇದ್ದ ಕಾರಣ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಈ ದಿನದಂತೆ ಶ್ರೀನಿವಾಸ್ ಅಂತ್ಯಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಬಂದೊದಗಿರುವುದು ಕುಟುಂಬದವರಿಗೆ ತೀವ್ರ ದುಃಖ ತಂದಿದೆ.
ರಾಜಕೀಯ ಪ್ರವೇಶ: ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಸಿರಪುರಂನವರಾದ ಶ್ರೀನಿವಾಸ್ 18ನೇ ವಯಸ್ಸಿನಲ್ಲೆ ರಾಜಕೀಯಕ್ಕೆ ಪ್ರವೇಶಿಸಿದ್ದರು. 1995ರಲ್ಲಿ ವರ್ತೂರು ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಂತರ ಸಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಳೆದ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸೇರಿ ದೇವಸಂದ್ರ ವಾರ್ಡ್ನಿಂದ ತನ್ನ ಪತ್ನಿಯನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದರು.
ಪ್ರತಿಭಟನೆ: ಶವವಿದ್ದ ಆ್ಯಂಬುಲೆನ್ಸ್ನ್ನು ಕೆ.ಆರ್.ಪುರ ಪೊಲೀಸ್ ಠಾಣೆ ಎದರು ನಿಲ್ಲಿಸಿ ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಮಾಜಿ ಶಾಸಕ ನಂದೀಶ್ರೆಡ್ಡಿ ಪ್ರತಿಭಟನೆ ನಡೆಸಿದರು. ಬುಧವಾರ ಮಧ್ಯಾಹ್ನ 2.30 ಪ್ರಾರಂಭವಾದ ಪ್ರತಿಭಟನೆ ಸಂಜೆ 4.30 ರ ತನಕ ನಡೆಯಿತು.
ಪ್ರತಿಭಟನಾಕಾರರು ಪೊಲೀಸ್ ಇಲಾಖೆ, ಸ್ಥಳೀಯ ಶಾಸಕ ಬೈರತಿ ಬಸವರಾಜ್ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪ್ರಕರಣವನ್ನು ಸಿಸಿಬಿಗೆ ಒಪ್ಪಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪೊಲೀಸ್ ಅಧಿಕಾರಿಗಳಾದ ಕಮಲ್ ಪಂತ್, ಶರತ್ಚಂದ್ರ, ಡಾ. ಹರ್ಷ, ಸಿದ್ದಪ್ಪ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು. 10ಕ್ಕೂ ಹೆಚ್ಚು ಕೆಎಸ್ಆರ್ಪಿ ವ್ಯಾನ್ಗಳಲ್ಲಿ ಪೊಲೀಸರು ಸ್ಥಳಕ್ಕೆ ನಿಯೋಜಿಸಲಾಗಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ಜೋಷಿ, ಸಂಸದ ಅನಂತ್ಕುಮಾರ್, ಮಾಜಿ ಮುಖ್ಯ ಮಂತ್ರಿ ಸದಾನಂದಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ, ಮೇಯರ್ ಕಟ್ಟೆ ಸತ್ಯನಾರಾಯಣ, ಪಾಲಿಕೆ ಸದಸ್ಯರಾದ ನಟರಾಜ್, ಪೂರ್ಣಿಮಾ ಶ್ರೀನಿವಾಸ್, ಲತಾ ನರಸಿಂಹಮೂರ್ತಿ ಸೇರಿ ಹಲವು ಗಣ್ಯರು ಭೇಟಿ ನೀಡಿದ್ದರು.
ತಲೆ ಹಿಂಭಾಗ ಮತ್ತು ಮುಂಭಾಗ, ಎರಡೂ ಕೈಗಳಿಗೆ ಮತ್ತು ಎದೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು. ನನಗೂ ಇದನ್ನು ಕಂಡು ಭಯವಾಯಿತು.
- ಸಲೂನ್ ಮಾಲೀಕ ರಮೇಶ್
ಶಾಸಕರ ಕೈವಾಡ ಶಂಕೆ
ಕೊಲೆಯ ಹಿಂದೆ ಸ್ಥಳೀಯ ಶಾಸಕರ ಕೈವಾಡ ಇದೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಶ್ರೀನಿವಾಸ್ ಮೇಲೆ ದಾಳಿ ನಡೆದಿತ್ತು. ಕೆ.ಆರ್.ಪುರ ಸೇರಿದಂತೆ ಸುತ್ತ ಮುತ್ತಲಿನ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರ ಇಲಾಖೆ ಅಧಿಕಾರಿಗಳು ಶಾಸಕ ಬೈರತಿ ಬಸವರಾಜ್ ಕೈಗೊಂಬೆಯಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಬೆದರಿಸಲು ಈ ಕೊಲೆ ನಡೆದಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು.
- ನಂದೀಶ್ ರೆಡ್ಡಿ, ಮಾಜಿ ಶಾಸಕ
ವಿಶೇಷ ತನಿಖಾ ತಂಡ
ರಾಜಕೀಯ ವೈರತ್ವ ಹಿನ್ನೆಲೆಯಲ್ಲಿ ಶ್ರೀನಿವಾಸ್ ಕೊಲೆ ನಡೆದಿರುವ ಸಾಧ್ಯತೆ ಇದೆ. ಕಳೆದ ವರ್ಷ ಶ್ರೀನಿವಾಸ್ ಸಹಚರ ವಿಶ್ವನಾಥ್ ಅವರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಈ ವೇಳೆ ವಿಶ್ವನಾಥ್ ಗಾಯಗೊಂಡಿದ್ದು ಶ್ರೀನಿವಾಸ್ ಬಚಾವ್ ಆಗಿದ್ದರು. ಕೊಲೆ ನಡೆದಿರುವ ಮಳಿಗೆ ಸಮೀಪ ಒಂದು ಸಿಸಿ ಕ್ಯಾಮರಾ ಇದ್ದು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳ ಬಂಧನಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ವೃತ್ತಿ ವೈಷಮ್ಯ ಹಾಗೂ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲೂ ಕೊಲೆ ನಡೆದಿರುವ ಬಗ್ಗೆ ತನಿಖೆ ನಡೆಯುತ್ತಿದೆ.
- ರಾಘವೇಂದ್ರ ಔರಾದ್ಕರ್, ಪೊಲೀಸ್ ಆಯುಕ್ತ