ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಕಾಲಿಕ ಮಳೆಗೆ ನಾಲ್ಕು ಬಲಿ

Vishwanath S
Updated On : 8 Mar 2014, 12:42 pm

ಬೆಂಗಳೂರು: ಅಕಾಲಿಕ ಮಳೆ ಅವಾಂತರ ರಾಜ್ಯಾದ್ಯಂತ ಮುಂದುವರಿದಿದ್ದು ಶುಕ್ರವಾರ ಸಿಡಿಲಿಗೆ ಮೂವರು ಮಹಿಳೆಯರು, ಗೋಡೆ ಕುಸಿದು ವ್ಯಕ್ತಿಯೊಬ್ಬ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಆಲಿಕಲ್ಲು ಮಳೆಯಾಗುತ್ತಿದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿ 3500 ಎಕರೆ ಬೆಳೆ ಹಾನಿ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ. ಹಲವೆಡೆ ಮರಗಳು ಉರುಳಿ ಬಿದ್ದಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ಗ್ರಾಮದ ಚಂದ್ರಮ್ಮ (28) ಹೊಲದಲ್ಲಿ ಈರುಳ್ಳಿ ಕೀಳುತ್ತಿದ್ದಾಗ ಸಿಡಿಲು ಬಡಿದಿದ್ದರೆ, ಎಚ್.ಡಿ.ಕೋಟೆ ತಾಲೂಕಿನ ಕಂದಲಿಕೆ ಹೋಬಳಿಯ ದೇವಲಾಪುರ ಗ್ರಾಮದ ಪ್ರೇಮಾ (30) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹೊಲದಿಂದ ಮರಳಿ ಬರುತ್ತಿರುವಾಗ ಸಿಡಿಲು ಅಪ್ಪಳಿಸಿ ಕಮ್ಮರಚೇಡು ಗ್ರಾಮದ ಲಕ್ಷ್ಮಿದೇವಿ (50) ಅಸುನೀಗಿದ್ದಾರೆ. ಬಳ್ಳಾರಿ ಸಮೀಪದ ಮುಂಡರಗಿಯ ಪಂಜಾಬಿ ಡಾಬಾದಲ್ಲಿ ಮಳೆ ಮತ್ತು ಗಾಳಿಗೆ ಗೋಡೆ ಕುಸಿದು ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ (45) ಮೃತಪಟ್ಟಿದ್ದಾನೆ.
ಬಳ್ಳಾರಿ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಶುಕ್ರವಾರ ಸುರಿದ ಆಲಿಕಲ್ಲಿ ಮಳೆಗೆ ಸುಮಾರು 3500 ಎಕರೆ ಪ್ರದೇಶದಲ್ಲಿ ಬೆಳೆದ ಬತ್ತ, ಮೆಕ್ಕೆಜೋಳ, ಮೆಣಸಿನಕಾಯಿ, ಟೊಮೇಟೋ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ.
ಹಗರಿಬೊಮ್ಮನಹಳ್ಳಿ, ಕೂಡ್ಲಗಿ ತಾಲೂಕಿನಲ್ಲಿ ಆಲಿಕಲ್ಲು ಮಳೆಯಾಗಿದ್ದರೆ ಕೊಟ್ಟೂರು, ಹೊಸಪೇಟೆಯಲ್ಲಿ ಧಾರಾಕಾರ ಮಳೆಯಾಗಿದೆ. ವಡ್ಡರಗುಂಡಿ ಪ್ರದೇಶಕ್ಕೆ ಮಳೆ ನೀರು ನುಗ್ಗಿ ಜಲಾವೃತವಾಗಿದೆ. ಬಿರುಗಾಳಿ ಬೀಸಿದ್ದರಿಂದ ವಿದ್ಯುತ್ ತಂತಿಗಳು ಹರಿದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಧರೆಗುರುಳಿದ ಮರ: ಮುದ್ದೇಬಿಹಾಳ ತಾಲೂಕಿನಾದ್ಯಂತ ಭಾರಿ ಮಳೆಯಾಗಿದ್ದು ಜಲಪೂರ ಗ್ರಾಮದ ಶಾಲೆಯ ಬಿಸಿಯೂಟ ಕೋಣೆಯ ಮೇಲೆ ಮರ ಉರುಳಿ ಬಿದ್ದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನತೆ ಪರದಾಡಿದರು.
ಹೊಲದಲ್ಲಿ ರಾಶಿ ಹಾಕಿದ್ದ ಈರುಳ್ಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ರಾಯಚೂರು ಜಿಲ್ಲೆಯ ಮಾನವಿ, ಲಿಂಗಸ್ಗೂರು ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಕುರಿ, ಮೇಕೆ, ಕೋಳಿಗಳು ಮೃತಪಟ್ಟಿದ್ದು, ಇಬ್ಬರು ದನಗಾಹಿಗಳು ಗಾಯಗೊಂಡಿದ್ದಾರೆ. ಗುಂಡ್ಲುಪೇಟೆ, ಚಿಂತಾಮಣಿ ಸೇರಿದಂತೆ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement