ಅಪ್ಪಯ್ಯ ಸ್ವಾಮಿ ವಿರುದ್ಧ ಜಾತಿ ನಿಂದನೆ ದೂರು
ಬೆಳಗಾವಿ/ಅಥಣಿ: ಪವಾಡದ ಹೆಸರಿನಲ್ಲಿನ ಮುಗ್ಧ ಜನರನ್ನು ನಂಬಿಸಿ ವಂಚಿಸಿ ಕಂಬಿ ಎಣಿಸುತ್ತಿರುವ ಅಥಣಿ ತಾಲೂಕಿನ ಝುಂಜರವಾಡದ ಕಪಟಿ ಸ್ವಾಮಿ ಅಪ್ಪಯ್ಯನ ವಿರುದ್ಧ ಐಗಳಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ತನ್ನ ಅಕ್ರಮ ಆಶ್ರಮದಲ್ಲಿದ್ದ ಎಲ್ಲ ಮಕ್ಕಳಿಗೆ ಈ ಕಪಟಿ ಸ್ವಾಮಿ ಜಾತಿ ನಿಂದನೆ ಮಾಡಿ, ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಾಲಮಂದಿರದ ಅಧೀಕ್ಷಕಿ ರೇಣುಕಾ ವಡಗಾಂವಕರ ದೂರು ನೀಡಿದ್ದಾರೆ.
ಸಮಾಧಿ, ಅಗ್ನಿ ಪ್ರವೇಶದ ಪವಾಡದ ಹೆಸರಿನಲ್ಲಿ 7 ವರ್ಷದ ಮಗುವನ್ನು ಕತ್ತಲ ಕೋಣೆಯಂಥ ಸ್ಥಳದಲ್ಲಿ ಕೂಡಿಟ್ಟು ಚಿತ್ರಹಿಂಸೆ ನೀಡಿದ್ದ. ಅಲ್ಲದೇ ಅವಳನ್ನು ಸುಡಲಾಗಿದೆ, ಶಿವರಾತ್ರಿಯಂದು ಅವಳು ಮತ್ತೆ ಅವತರಿಸಲಿದ್ದಾಳೆ ಎಂದು ಜನರಿಗೆ ಮಂಕುಬೂದಿ ಎರಚುತ್ತಿದ್ದ ಅಪ್ಪಯ್ಯ ಸ್ವಾಮಿ ಮಠದ ಮೇಲೆ ದಾಳಿ ಮಾಡಿದ ಪೊಲೀಸರು ಹಾಗೂ ಅಥಣಿ ತಹಶೀಲ್ದಾರ್ ಫೆ.26 ರಂದು ಸ್ವಾಮಿಯನ್ನು ಬಂಧಿಸಿದ್ದರು.
ಸ್ವಾಮಿಯ ದುಷ್ಕೃತ್ಯದಿಂದ ಬಳಲಿ ಬೆಂಡಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ನಿಜಲಿಂಗಮ್ಮದೇವಿ (ಚಂದ್ರಿಕಾ) ಆರೋಗ್ಯ ಸಂಪೂರ್ಣ ಚೇತರಿಕೆಯಾಗಿದ್ದು, ಆಕೆಯನ್ನು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಚಂದ್ರಿಕಾ ಮತ್ತು ಆಕೆಯ ಸಹೋದರಿ ರಾಧಿಕಾಳನ್ನು ಸ್ವಾಮಿ ವಿವೇಕಾನಂದ ಟ್ರಸ್ಟ್‌ನ ಗಂಗಮ್ಮ ಚಿಕ್ಕುಂಬಿಮಠ ಬಾಲ ಕಲ್ಯಾಣ ಕೇಂದ್ರಕ್ಕೆ ದಾಖಲಿಸಲಾಗಿದೆ. ಈ ಮಧ್ಯೆ ಕಪಟಿ ಸ್ವಾಮಿಯ ಆಶ್ರಮದಲ್ಲಿ ಪತ್ತೆಯಾಗಿದ್ದ ಐದು ಮಕ್ಕಳ ಪೈಕಿ ನಾಲ್ವರು ಮಕ್ಕಳನ್ನು ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಗಲಕೋಟೆಗೆ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿದೆ. ಜಮಖಂಡಿ ತಾಲೂಕಿನ ಕಾಜಿಬೀಳಗಿ ಗ್ರಾಮದ ಪ್ರಶಾಂತ(10), ಸಚಿನ (8), ಪುರುಷೋತ್ತಮ (8) ಹಾಗೂ ಕಿರಣ(8) ಎಂಬ ಮಕ್ಕಳನ್ನು ಬಾಗಲಕೋಟೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸ್ಥಳಾಂತರಿಸಲಾಗಿದೆ ಎಂದು ಬೆಳಗಾವಿಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.