ಐಎನ್‌ಎಸ್ ಕೋಲ್ಕತಾ ಯುದ್ಧ ನೌಕೆ ದುರಂತ
ಸಿಂಧು ರತ್ನ ಜಲಾಂತರ್ಗಾಮಿ ಬೆಂಕಿ ಅವಘಡದ ನೆನಪು ಮಾಸುವ ಮುನ್ನವೇ ಭಾರತೀಯ ನೌಕಾ ಸೇನೆಯೀಗ ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಿದೆ...
ಮುಂಬೈ: ಸಿಂಧು ರತ್ನ ಜಲಾಂತರ್ಗಾಮಿ ಬೆಂಕಿ ಅವಘಡದ ನೆನಪು ಮಾಸುವ ಮುನ್ನವೇ ಭಾರತೀಯ ನೌಕಾ ಸೇನೆಯೀಗ ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಿದೆ.
ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿದ್ದ ಐಎನ್‌ಎಸ್ ಕೋಲ್ಕತಾ ಯುದ್ಧನೌಕೆಯಲ್ಲಿ ಸಂಭವಿಸಿದ ದುರಂತದಲ್ಲಿ ಕಮಾಂಡರ್ ಕುಂಟಲ್ ವಾಧ್ವಾ(42) ಮೃತಪಟ್ಟಿದ್ದಾರೆ. ಕಾರ್ಬನ್ ಡೈ ಆಕ್ಸೈಡ್ ಸೋರಿಕೆಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಮತ್ತಿಬ್ಬರು ಸಿಬ್ಬಂದಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನೌಕಾ ಸೇನೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿ ನೌಕಾಸೇನೆ ಮತ್ತು ಶಿಪ್‌ಯಾರ್ಡ್ ಪ್ರತ್ಯೇಕ ತನಿಖೆಗೆ ಆದೇಶಿಸಿವೆ. ಐಎನ್‌ಎಸ್ ಕೋಲ್ಕತಾವನ್ನು ಮಜಗಾಂವ್ ಡಾಕ್ಸ್ ಲಿಮಿಟೆಡ್(ಎಂಡಿಎಲ್) ಸಂಸ್ಥೆ ನಿರ್ಮಿಸುತ್ತಿತ್ತು. ಮುಂಬೈ ಬಂದರು ಟ್ರಸ್ಟ್‌ನಲ್ಲಿ ಮೆಷಿನರಿ ಪರೀಕ್ಷೆ ನಡೆಸುತ್ತಿದ್ದಾಗ ಕಾರ್ಬನ್ ಡೈ ಆಕ್ಸೈಡ್ ಘಟಕದಲ್ಲಿ ಸೋರಿಕೆ ಕಾಣಿಸಿಕೊಂಡಿತ್ತು ಎಂದು ಎಂಡಿಎಲ್ ಮಾಹಿತಿ ನೀಡಿದೆ.
ಟಿ ಆ್ಯಂಟನಿ ರಾಜಿನಾಮೆಗೆ ಬಿಜೆಪಿ ಆಗ್ರಹ
ಐಎನ್‌ಎಸ್ ಕೋಲ್ಕತಾ ದುರಂತ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಯುಪಿಎ ಸರ್ಕಾರವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ. ಘಟನೆಯ ನೈತಿಕ ಹೊಣೆ ಹೊತ್ತು ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದೆ. ಸೇನೆಯ ಸುಪ್ರೀಂಕಮಾಂಡರ್ ಆಗಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಒತ್ತಾಯಿಸಿದ್ದಾರೆ.
6,500 ಟನ್ ನೌಕೆ
ಐಎನ್‌ಎಸ್ ಕೋಲ್ಕತಾ ಅಥವಾ ಯಾರ್ಡ್- 701 6,500 ಟನ್ ತೂಕದ ಯುದ್ಧನೌಕೆಯಾಗಿದೆ. ದೇಶದ ಅತಿ ದೊಡ್ಡ ಯುದ್ಧನೌಕೆಗಳ ಸಾಲಿಗೆ ಸೇರುವ ನೌಕೆಯಾಗಿದೆ.
ಎಂಟು ತಿಂಗಳಲ್ಲಿ 11ನೇ ದುರಂತ
ಕಳೆದ ಎಂಟು ತಿಂಗಳಲ್ಲಿ ನೌಕಾ ಸೇನೆಯ ಪಾಲಿಗೆ ಇದು 11ನೇ ದುರಂತವಾಗಿದೆ. ಒಂಬತ್ತು ದಿನಗಳ ಹಿಂದಷ್ಟೇ ಮುಂಬೈ ಕಡಲ ತೀರದಲ್ಲಿ ಸಿಂಧುರತ್ನ ಜಲಾಂತರ್ಗಾಮಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಅವಘಡದಲ್ಲಿ ಇಬ್ಬರು ನೌಕಾ ಸಿಬ್ಬಂದಿ ಮೃತಪಟ್ಟಿದ್ದರು. ಘಟನೆಯ ನೈತಿಕ ಹೊಣೆ ಹೊತ್ತು ನೌಕಾ ಸೇನೆ ಮುಖ್ಯಸ್ಥ, ಅಡ್ಮಿರಲ್ ಡಿ.ಕೆ. ಜೋಶಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು.