ಜನಾರ್ದನ ರೆಡ್ಡಿ ಸ್ಥಿರಾಸ್ತಿ ಕೋಟಿ ಕೋಟಿ!
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಆಸ್ತಿಯ ಮೌಲ್ಯ ಎಷ್ಟು? ಇದು ಎಲ್ಲರಿಗೂ ಕುತೂಹಲದ ವಿಷಯ. ಅಧಿಕೃತ ಮೂಲದ ಪ್ರಕಾರ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮಿ ಅರುಣಾ ಅವರ ಅಧಿಕೃತ ಸ್ಥಿರಾಸ್ತಿ ಹತ್ತಾರು ಕೋಟಿ ರುಪಾಯಿ ಗಡಿ ದಾಟಿದೆ!
'ಕನ್ನಡಪ್ರಭ' ಕ್ಕೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ರೆಡ್ಡಿ ದಂಪತಿ ಒಟ್ಟಾರೆ 195.89 ಎಕರೆ ಜಮೀನು ಹೊಂದಿದ್ದು, ಇನ್ನು ನಿವೇಶನ ಮತ್ತು ಮನೆಗಳ ಮಾರುಕಟ್ಟೆ ದರವೇ ಹತ್ತಾರು ಕೋಟಿ ರು.ಗಳ ಗಡಿ ದಾಟುತ್ತದೆ. ಜನಾರ್ದನ ರೆಡ್ಡಿಯ ಆಸ್ತಿ ಮೌಲ್ಯ ಇಷ್ಟೇನಾ ಎಂದು ಆಶ್ಚರ್ಯ ಪಡಬೇಡಿ. ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮಿ ಅರುಣಾ ಅವರ ಹೆಸರಿನಲ್ಲಿರುವ ಚರ, ನಗದು ಹಣ, ವಾಹನಗಳನ್ನು ಹೊರತುಪಡಿಸಿ, ಅಧಿಕೃತವಾಗಿ ಅವರ ಹೆಸರಿನಲ್ಲಿಯೇ ಇರುವ ಸ್ಥಿರಾಸ್ತಿಯ ಮಾಹಿತಿ ಮಾತ್ರ ಇದು.
128.1625 ಎಕರೆ ಭೂಮಿ ಮತ್ತು ಕೆಲವು ನಿವೇಶನಗಳ ಮೌಲ್ಯವನ್ನು ಹೊರತುಪಡಿಸಿ, ಜನಾರ್ದನ ರೆಡ್ಡಿ ಇಲ್ಲಿಯವರೆಗೆ ಸುಮಾರು ರು. 5.39 ಕೋಟಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿಯು ಬಳ್ಳಾರಿ ಹಾಗೂ ಇತರ ಭಾಗದಲ್ಲಿ ಮನೆ, ನಿವೇಶನ, ಜಮೀನು ಸೇರಿದಂತೆ ಸುಮಾರು 5.09 ಕೋಟಿಗೂ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದುವ ಮೂಲಕ ಕೋಟ್ಯಧಿಪತಿಯಾಗಿದ್ದಾರೆ.
ಎಂಎಲ್ಸಿಯಾದಾಗ ಘೋಷಣೆಯಾದ ಆಸ್ತಿ
ಜನಾರ್ದನ ರೆಡ್ಡಿ ಅವರು 2006ರಲ್ಲಿ ವಿಧಾನ ಪರಿಷತ್ ಸದಸ್ಯರಾಗುವ ಸಂದರ್ಭದಲ್ಲಿ ಅವರ ಪತ್ನಿಯ ಹೆಸರಿನಲ್ಲಿ 45.33 ಎಕರೆ ಜಮೀನು, ಇನ್ನು ಪತ್ನಿ ಹೆಸರಿನಲ್ಲಿ ಭೂಮಿ, ನಿವೇಶನ, ಮನೆ ಸೇರಿದಂತೆ ರು. 53,79,066 ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದರಂತೆ. ಇನ್ನು ರೆಡ್ಡಿ ಹೆಸರಿನಲ್ಲಿ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಸುಮಾರು 5,39,19,631 ಮೌಲ್ಯದ ಮನೆ, ನಿವೇಶಗಳನ್ನು ಹೊಂದಲಾಗಿದೆ ಎಂದು ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ನಂತರದಲ್ಲಿಯೇ ಬಳ್ಳಾರಿ ನಗರದಲ್ಲಿಯೇ ಜನಾರ್ದನ ರೆಡ್ಡಿಗೆ ಅವರ ಹೆಸರಿನಲ್ಲಿ 19.71 ಎಕರೆ ಜಮೀನು, ಇನ್ನು ಪತ್ನಿ ಲಕ್ಷ್ಮಿ ಅರುಣಾ ಅವರ ಹೆಸರಿನಲ್ಲಿ 108 ಎಕರೆ ಜಮೀನು ಖರೀದಿಸಿದ್ದಾರೆ. ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿ ಖರೀದಿಸಿದ 128.1625 ಎಕರೆ ಜಮೀನಿನಲ್ಲಿ 66.06 ಎಕರೆ ಪ್ರದೇಶವನ್ನು ಎನ್ಎ ಮಾಡಿಸಿದ್ದಾರೆ. ಇದಲ್ಲದೆ ಬಳ್ಳಾರಿಯಲ್ಲಿ 22.40 ಎಕರೆ ಭೂಮಿಯನ್ನು ಹೊಂದಿದ್ದಾರೆ ಮೂಲಗಳು ತಿಳಿಸಿವೆ.
ಜಾರಿ ನಿರ್ದೇಶನಾಲಯದ ಭೀತಿ
ಈಗಾಗಲೇ ಒಎಂಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಆಂಧ್ರಪ್ರದೇಶದಲ್ಲಿ ಬ್ರಹ್ಮಿಣಿ ಕೈಗಾರಿಕೆಗೆ ಸಂಬಂಧಿಸಿದ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದೆ. ಇನ್ನು ರಾಜ್ಯದ ಎಎಂಸಿ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ರೆಡ್ಡಿ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೆ, ರೆಡ್ಡಿ ಸ್ಥಿರಾಸ್ತಿಯ ಮಾಹಿತಿಯನ್ನು ಸಿಬಿಐನವರು ಕಲೆಹಾಕಲು ಮುಂದಾಗಿದ್ದಾರೆ. ಈಗಾಗಲೇ ಜನಾರ್ದನ ರೆಡ್ಡಿ ಅವರು 2006ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿಯ ಮಾಹಿತಿಯು ಸಿಬಿಐಗೆ ಲಭ್ಯವಾಗಿದ್ದು, ಇನ್ನು ಹೆಚ್ಚಿನ ಆಸ್ತಿ ಇರುವ ಬಗ್ಗೆ, ಅನಂತರದಲ್ಲಿ ಖರೀದಿಸಿರುವ ಆಸ್ತಿಯ ಬಗ್ಗೆ ಸಿಬಿಐ ಮಾಹಿತಿ ಕಲೆಹಾಕಲು ಮುಂದಾಗಿದೆ. ರೆಡ್ಡಿ ಆಸ್ತಿಯ ಮಾಹಿತಿಯು ಕನ್ನಡಪ್ರಭಕ್ಕೆ ಲಭ್ಯವಾಗಿದೆ.
ಭೂ ಸುಧಾರಣೆ ಕಾಯ್ದೆ ಉಲ್ಲಂಘನೆ
ಭೂ ಸುಧಾರಣೆ ಕಾಯ್ದೆಯ 79ಎ ಪ್ರಕಾರವಾಗಿ ಕೃಷಿಯೇತರ ಉದ್ಯೋಗದಲ್ಲಿ ತೊಡಗಿರುವ ವ್ಯಕ್ತಿಯ ಆದಾಯವು 2 ಲಕ್ಷಗಳಿಗೆ ಮೀರಿದ್ದರೆ, ಕೃಷಿ ಭೂಮಿಯನ್ನು ಕೊಳ್ಳುವಂತಿಲ್ಲ ಎಂಬ ನಿಯಮವಿದೆ. ಆದರೆ ಇದೀಗ ಜನಾರ್ದನ ರೆಡ್ಡಿ ಅವರು ತಮ್ಮ ಪತ್ನಿ ಹಾಗೂ ತಮ್ಮ ಹೆಸರಿನಲ್ಲಿ ಭೂಮಿಯನ್ನು ಖರೀದಿಸಿರುವುದು ಭೂ ಸುಧಾರಣೆ ಕಾಯ್ದೆಯ ಉಲ್ಲಂಘನೆ ಆರೋಪ ಎದುರಿಸುವ ಸಾಧ್ಯತೆ ಇದೆ. ಇನ್ನು ಲಕ್ಷ್ಮಿ ಅರುಣಾ ಅವರು ನಮ್ಮ ರಾಜ್ಯದಲ್ಲಿ ಅಲ್ಲದೆ, ಆಂಧ್ರಪ್ರದೇಶದಲ್ಲೂ ಜಮೀನು ಖರೀದಿಸಿದ್ದಾರೆ. ಕರ್ನೂಲ್ ಜಿಲ್ಲೆಯ ಕಲ್ವಾ ಮತ್ತು ಒರ್ವಕಲ್ ಗ್ರಾಮದಲ್ಲಿ 5.38 ಎಕರೆ ಮತ್ತು 5.38 ಎಕರೆ ಜಮೀನು, ಕರ್ನೂಲ್ ಜಿಲ್ಲೆಯ ಆತ್ಮಾಪುರ ಮಂಡಲದ ವ್ಯಾಪ್ತಿಯ ಕಕನೂರ್ ಗ್ರಾಮದಲ್ಲಿ 25.15 ಎಕರೆ ಜಮೀನನ್ನು ಖರೀದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜನಾರ್ದನ ರೆಡ್ಡಿಗಿಂತ ಪತ್ನಿಯ ಆಸ್ತಿಯೇ ಹೆಚ್ಚು
ಜನಾರ್ದನ ರೆಡ್ಡಿ ಹೆಸರಿನಲ್ಲಿ ಬೆಳಗಲ್ ಗ್ರಾಮದಲ್ಲಿ 19.71 ಎಕರೆ, ಇನ್ನು ಬೆಂಗಳೂರಿನ ಆರ್ಎಂವಿ ಎಕ್ಸ್ ಟೆನಷನ್ನಲ್ಲಿ ವಾರ್ಡ್ ನಂ. 99ರಲ್ಲಿ ರು. 4,39,91,584 ಬೆಲೆ ಬಾಳುವ 7793.75 ಚದರ ಅಡಿ ನಿವೇಶನ, ಬೆಂಗಳೂರಿನ ಆರ್ಎಂವಿ ಸೌತ್ ಎಕ್ಸ್ಟೆನಷನ್ನಲ್ಲಿ ರು. 87,97,260 ಮೌಲ್ಯದ 4520.59 ಚದರ ಅಡಿ ನಿವೇಶನ, ಬಳ್ಳಾರಿಯ ರಾಘವಾಚಾರಿ ರಸ್ತೆಯ ಕೆ.ಸಿ. ಕಾಲೋನಿಯಲ್ಲಿ ರು. 8,25,020 ಮೌಲ್ಯದ 2837 ಚದರ ಅಡಿ ನಿವೇಶನ ಹೊಂದಿದ್ದಾರೆ. ಇನ್ನು ಬೆಂಗಳೂರಿನ ಯಲಹಂಕದ ಕೆಎಚ್ಬಿಯಲ್ಲಿ ಮಲ್ಟಿಸ್ಟೋರ್ಸ್ ಬಿಲ್ಡಿಂಗ್ನಲ್ಲಿ ಎಂಐಜಿ-ಬಿ-ಜಿಎಫ್ನಲ್ಲಿ ರು. 3,05,767 ಮೌಲ್ಯದ ಮನೆಯನ್ನು ಹೊಂದಿದ್ದಾರೆ. ಸ್ಥಿರಾಸ್ತಿಯಲ್ಲಿ ಜನಾರ್ದನ ರೆಡ್ಡಿ ಅವರಿಗಿಂತ ಅವರ ಪತ್ನಿ ಲಕ್ಷ್ಮಿ ಅರುಣಾ ಅಸ್ತಿಯೇ ಹೆಚ್ಚಾಗಿದೆ.
-ಶಶಿಧರ ಮೇಟಿ