ನೊಂದ ಮಹಿಳೆ ನೆರವಿಗಿಲ್ಲದ ಆಯೋಗ
ಬೆಂಗಳೂರು: ಪತಿ ಮಾತ್ರವಲ್ಲ ಆತನ ಸಂಬಂಧಿಕರು, ಕುಟುಂಬ ಸದಸ್ಯರಿಂದ ಹಿಂಸೆ ಅನುಭವಿಸಿ ನೊಂದ ಹತ್ತಾರು ಜೀವಗಳು ಸಾವಿರಾರು ಮೈಲಿ ದೂರದಿಂದ ನ್ಯಾಯ ಅರಸಿ ಬರುತ್ತಾರೆ. ಇಲ್ಲಾದರೂ ನಮಗೆ ನ್ಯಾಯ ಸಿಕ್ಕೇಸಿಗುತ್ತದೆ, ಸಮಸ್ಯೆ ಬಗೆಹರಿಯುತ್ತದೆ ಎಂಬ ಸಣ್ಣ ಭರವಸೆ ಹೊತ್ತು.
ಆದರೆ, ಆ ನಿರೀಕ್ಷೆ ಹುಸಿಯಾಗುತ್ತದೆ. ಅವರ ಗೋಳು ಕೇಳುವವರಿಲ್ಲ. ಕೆಲವೊಮ್ಮೆ ನೆಪಮಾತ್ರಕ್ಕೆ ದೂರು ದಾಖಲಿಸುತ್ತಾರೆ. ಅದು ಇತ್ಯರ್ಥವಾಗಲು ವರ್ಷಗಳೇ ಬೇಕು.
ದೂರು ಹೊತ್ತು ಮಹಿಳಾ ಆಯೋಗಕ್ಕೆ ಬರುವ ಮಹಿಳೆಯರ ಸ್ಥಿತಿ ಇದು!
ಆಯೋಗದ ಅಧ್ಯಕ್ಷರು ಇಲ್ಲದ ಪರಿಣಾಮ ಅಲ್ಲಿಗೆ ಬರುವ ನೊಂದ ಮಹಿಳೆಯರ ಗೋಳು ಕೇಳುವವರಿಲ್ಲ. ಅವರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳುವವರಿಲ್ಲ. ದೂರು ದಾಖಲಿಸುವುದು ಸೇರಿದಂತೆ ಸಮಸ್ಯೆ ಇತ್ಯರ್ಥಕ್ಕೆ ಯಾರನ್ನು ಭೇಟಿ ಮಾಡಬೇಕು, ಮುಂದಿನ ಸವಾಲು ಎದರಿಸುವುದು ಹೇಗೆ ಎಂಬಿತ್ಯಾದಿ ಬಗ್ಗೆ ಮಾರ್ಗದರ್ಶನ ನೀಡುವವರೇ ಇಲ್ಲ.
ನೊಂದವರು ಮಾತ್ರವಲ್ಲ ಆಯೋಗದ ಸಿಬ್ಬಂದಿಯೂ ತೊಂದರೆ ಎದುರಿಸುತ್ತಿದ್ದಾರೆ. ಹಾಗಾಗಿ ಸಮಸ್ಯೆ ಹೊತ್ತು ಆಯೋಗಕ್ಕೆ ಬರುವ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ. ಆಯೋಗವಾದರೂ ನಮ್ಮ ನೆರವಿಗೆ ಬರುತ್ತದೆ ಎಂಬ ಅವರ ನಂಬಿಕೆ ಹುಸಿಯಾಗುತ್ತಿದೆ.
ಅಷ್ಟೇ ಅಲ್ಲ ಗ್ರಾಮಾಂತರ ಪ್ರದೇಶ, ನಗರ, ಜಿಲ್ಲಾ ಮಟ್ಟದಲ್ಲಿ ಮಹಿಳೆ, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳತ್ತ ಗಮನಹರಿಸುವವರೇ ಇಲ್ಲ. ಸಾಕಷ್ಟು ಕಡೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂಜರಿಯುತ್ತಾರೆ. ಆಯೋಗ ಸೂಚಿಸಿದರೆ ದೂರು ದಾಖಲಾಗುತ್ತದೆ. ಆ ಕೆಲಸವೂ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಸಮಾಲೋಚನೆ ಸ್ಥಗಿತ: ಆಯೋಗಕ್ಕೆ ಬರುವ ಮಹಿಳೆಯರ ಸ್ಥಿತಿ ಹಾಗೂ ಅವರ ದೂರು ಆಧರಿಸಿ ಅವರನ್ನು ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗೆ ಕಳುಹಿಸದೆ ಸಾಧ್ಯವಾದಷ್ಟು ಆಯೋಗದಲ್ಲೇ ಬಗೆಹರಿಸಬೇಕು. ಅದಕ್ಕಾಗಿ ಆಯೋಗದಲ್ಲಿ ವಾರದ ಕೊನೆ ದಿನ ಕೌನ್ಸಿಲಿಂಗ್ ನಡೆಸಬೇಕು. ಒಂದು ಪ್ರಕರಣವನ್ನು ಮೂರ್ನಾಲ್ಕು ಬಾರಿ ಸಮಾಲೋಚನೆ ಮಾಡಿ ಬಗೆಹರಿಸಬೇಕು. ಆದರೆ ಆ ಕೌನ್ಸಿಲಿಂಗ್ ಸ್ಥಗಿತಗೊಂಡಿದೆ. ತಜ್ಞರ ಪ್ರಕಾರ ಶೇ.90ರಷ್ಟು ಪ್ರಕರಣ ಸಮಾಲೋಚನೆಯಿಂದ ಬಗೆಹರಿಸಬಹುದು. ಆದರೆ ಈ ಕೆಲಸವೇ ಸ್ಥಗಿತವಾಗಿದೆ.
ಕೇಳೋರಿಲ್ಲ: ಕೆಲವು ಜಿಲ್ಲೆಗಳಲ್ಲಿ ಆಯೋಗ ಇಲ್ಲದ ಕಾರಣ, ದೂರು ದಾಖಲಿಸಲು ವಿವಿಧ ಜಿಲ್ಲೆಗಳಿಂದ ನೊಂದ ಮಹಿಳೆಯರು ಬೆಂಗಳೂರಿಗೆ ಆಗಮಿಸುತ್ತಾರೆ. ಅವರು ಆಯೋಗಕ್ಕೆ ಭೇಟಿ ನೀಡಿದರೂ ಅವರನ್ನು ವಿಚಾರಿಸುವವರಿಲ್ಲ, ದೂರು ಸ್ವೀಕರಿಸುವವರಿಲ್ಲ. ಇಲ್ಲಿಗೆ ಬರುವವರಿಗೆ ಯಾರನ್ನು ಭೇಟಿ ಮಾಡಬೇಕು, ಎಲ್ಲಿ ದೂರು ನೀಡಬೇಕೆಂಬುದು ತಿಳಿದಿರುವುದಿಲ್ಲ. ಹಾಗಾಗಿ ದೂರು ಕೊಡುವವರ ಅಳಲು ಕೇಳುವವರಿಲ್ಲದಾಗಿದೆ ಎನ್ನುತ್ತಾರೆ ದೂರು ನೀಡಲು ಬಂದಿದ್ದ ಸರೋಜ.
ನೊಂದ ಮಹಿಳೆಯ ಪಾತ್ರ ನಿರ್ವಹಿಸುವಲ್ಲಿ ಆಯೋಗ ವಿಫಲವಾಗಿದೆ. ರಾಜ್ಯದಲ್ಲಿ ಒಂಟಿ ಮಹಿಳೆಯರ ಹತ್ಯೆ, ಮಕ್ಕಳ ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಆದರೂ ಸರ್ಕಾರ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಲಿ ನೊಂದ ಮಹಿಳೆಯರ ನೋವು ಆಲಿಸುತ್ತಿಲ್ಲ. ಇದೊಂದು ರೀತಿ ಮನೆಯೊಡೆಯ ಇಲ್ಲದ ಪರಿಸ್ಥಿತಿ ಆಗಿದೆ. ಸಹಜವಾಗಿ ನೊಂದವರು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಕಾಡುವುದು ಸಹಜ. ಮಹಿಳೆಯರಿಗೆ ಆಯೋಗ ಈಗ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ ಎಂದರೆ ತಪ್ಪಾಗಲಾರದು ಎನ್ನುತ್ತಾರೆ ವಕೀಲೆ ಅಂಜಲಿ ರಾಮಣ್ಣ.
ಠಾಣೆಗೆ ವಹಿಸುವುದೇ ಇತ್ಯರ್ಥ
ಮಹಿಳಾ ಆಯೋಗಕ್ಕೆ ಬರುವ ದೂರುಗಳನ್ನು ಸಂಬಂಧಪಟ್ಟ ಠಾಣೆಗೆ ವರ್ಗಾಯಿಸುವುದು ಮಾತ್ರ ಮಹಿಳಾ ಆಯೋಗದ ಕೆಲಸವಾಗಿದೆ. ಅಲ್ಲಿಗೆ ಬರುವ ಸುಮಾರು ಅರ್ಧದಷ್ಟು ಪ್ರಕರಣಗಳನ್ನು ಈ ರೀತಿ ಠಾಣೆಗಳಿಗೆ ವರ್ಗಾಯಿಸುವ ಮೂಲಕ ಆಯೋಗ ತನ್ನ ಕೈ ತೊಳೆದುಕೊಳ್ಳುತ್ತಿದೆ.
ಸಂಬಂಧಪಟ್ಟ ಜಿಲ್ಲೆಯ ಉಸ್ತುವಾರಿ ವಹಿಸಿರುವ ಸಿಬ್ಬಂದಿ ಸ್ಥಳೀಯ ಠಾಣೆಗೆ ದೂರು ರವಾನಿಸುತ್ತಾರೆ. ಅದಾದ ನಂತರ ಆ ಪ್ರಕರಣದ ಸ್ಥಿತಿ ಏನು ಎಂಬತ್ತ ಗಮನಹರಿಸುವುದಿಲ್ಲ. ಸಾಕಷ್ಟು ಬಾರಿ ಆಯೋಗಕ್ಕೆ ಹೋಗುವ ನೊಂದ ಮಹಿಳೆಯರ ದೂರು ದಾಖಲಿಸಿಕೊಳ್ಳದೆ ಅವರನ್ನು ಸಂಘಸಂಸ್ಥೆಗಳ ಬಳಿ ಕಳುಹಿಸಿರುವ ಉದಾಹರಣೆಗಳಿವೆ.
ದೂರು ಆಲಿಸುವವರಿಲ್ಲ ಎಂದು ಸಾಕಷ್ಟು ಮಹಿಳೆಯರು ತಮಗೆ ಕರೆ ಮಾಡಿ ದೂರಿದ್ದಾರೆ. ಇಂತಹ ಮಹಿಳಾ ಆಯೋಗದಿಂದ ನೊಂದ ಮಹಿಳೆ, ಮಕ್ಕಳಿಗೆ ಎಷ್ಟು ಪ್ರಯೋಜನವಾಗಲಿದೆ ಎಂದು ಅಖಲಿ ಭಾರತ ಜನವಾದಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಕೆ.ಶ್ರೀಮತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಷ ದಾಖಲು ಇತ್ಯರ್ಥ ಬಾಕಿ
2011 1092 118 1074
2012 785 65 720
2013
(2014 ಫೆ) 1480 725 755
-ಶಾಂತ ತಮ್ಮಯ್ಯ