ಕಳಂಕಿತರಿಗೆ ಟಿಕೆಟ್ ಬೇಡ: ಕಾಂಗ್ರೆಸ್ಗೆ ತಿವಾರಿ ಆಗ್ರಹ
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಳಂಕಿತರಿಗೆ ಟಿಕೆಟ್ ನೀಡುವ ವಿರುದ್ಧ ಈಗ ಕಾಂಗ್ರೆಸ್ನೊಳಗಿಂದಲೇ ವಿರೋಧ ವ್ಯಕ್ತವಾಗಿದೆ. ಕಳಂಕಿತ ಮುಖಂಡರಿಗೆ ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಮನೀಷ್ ತಿವಾರಿ ಪಕ್ಷದ ಮುಖಂಡರನ್ನು ಆಗ್ರಹಿಸಿದ್ದಾರೆ. ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿತ್ತು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪವನ್ ಕುಮಾರ್ ಬನ್ಸಲ್, ಸುರೇಶ್ ಕಲ್ಮಾಡಿ, ಅಶೋಕ್ ಚವಾಣ್ ಮತ್ತಿತರ ಮುಖಂಡರ ಹೆಸರು ಪಕ್ಷದ ಎರಡನೇ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ತಿವಾರಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಕಳಂಕಿತ ರಾಜಾ, ಮಾರನ್ಗೆ ಟಿಕೆಟ್
ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಎ.ರಾಜಾಗೆ ಡಿಎಂಕೆ ಟಿಕೆಟ್ ನೀಡಿದೆ. ಎಂ.ಕೆ.ಸ್ಟಾಲಿನ್ ನಾಯಕತ್ವಕ್ಕೆ ಸೆಡ್ಡು ಹೊಡೆದಿರುವ ಎಂ.ಕೆ.ಅಳಗಿರಿ ಅವರಿಗೆ ಮೊದಲ ಪಟ್ಟಿಯಲ್ಲಿ ಸ್ಥಾನವೇ ಸಿಕ್ಕಿಲ್ಲ. ಕರುಣಾನಿಧಿ ವಿರುದ್ಧ ಬಂಡೆದ್ದಿರುವ ಹಿನ್ನೆಲೆಯಲ್ಲಿ ಸದ್ಯ ಅಳಗಿರಿ ಪ್ರತಿನಿಧಿಸುತ್ತಿರುವ ಮದುರೆ ಕ್ಷೇತ್ರದಿಂದ ಅವರ ಬದಲಾಗಿ ಬೇರೊಬ್ಬ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಇದರ ಜತೆಗೆ ತಮಿಳುನಾಡಿನಲ್ಲಿ ಅಳಗಿರಿ ಅವರ 10 ಮಂದಿ ಬೆಂಬಲಿಗರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಕಿರಣ್ ಪಕ್ಷ ಉದಯ
ಹೈದರಾಬಾದ್: ಜೈ ಸಮೈಕ್ಯ ಆಂಧ್ರ! ಇದು ತೆಲಂಗಾಣ ರಾಜ್ಯ ವಿಭಜನೆ ವಿರೋಧಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ನಿಂದ ಹೊರಬಂದಿದ್ದ ಕಿರಣ್ ರೆಡ್ಡಿ ಅವರ ಹೊಸ ಪಕ್ಷ. ತೆಲಂಗಾಣ ವಿರೋಧಿಸಿ ರಾಜಿನಾಮೆ ನೀಡಿದ್ದ ರೆಡ್ಡಿ ಹೊಸ ಪಕ್ಷ ರಚಿಸುವುದಾಗಿ ಕಳೆದ ವಾರವಷ್ಟೇ ಘೋಷಿಸಿದ್ದರು.
ವಿವಾದದಿಂದ ದೂರ
ಉ.ಪ್ರದೇಶದಿಂದ ಸ್ಪರ್ಧಿಸುವ ಸಂಬಂಧದ ವಿವಾದದಿಂದ ದೂರ ಉಳಿಯಲು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ನಿರ್ಧರಿಸಿದ್ದಾರೆ. ಮೋದಿಯಾಗಲಿ, ತಾನಾಗಲಿ ಉತ್ತರಪ್ರದೇಶದಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದ ನಿರ್ಧಾರ ಪಕ್ಷಕ್ಕೆ ಬಿಟ್ಟದ್ದು ಎಂದಿದ್ದಾರೆ.
ರಾಜ್ಯಕ್ಕೆ 13 ಆಪ್ ಅಭ್ಯರ್ಥಿಗಳು
ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಆಪ್) ರಾಜ್ಯದಲ್ಲಿ 13 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಇನ್ಫೋಸಿಸ್ನ ನಿವೃತ್ತ ಹಣಕಾಸು ಅಧಿಕಾರಿ ವಿ.ಬಾಲಕೃಷ್ಣನ್ ಬೆಂಗಳೂರು ಕೇಂದ್ರದಿಂದ, ಬೆಂ.ದಕ್ಷಿಣದಿಂದ ನೀನಾ ಪಿ.ನಾಯಕ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಗುಲ್ಬರ್ಗದಿಂದ, ಬೆಂಗಳೂರು ಗ್ರಾಮಾಂತರದಿಂದ ರವಿಕೃಷ್ಣ ರೆಡ್ಡಿ ಕಣಕ್ಕೆ ಇಳಿಯಲಿದ್ದಾರೆ.
ಬಿಹಾರದಲ್ಲಿ ನರೇಂದ್ರ ಮೋದಿ, ರಾಜಸ್ಥಾನದಲ್ಲಿ ರಾಹುಲ್ ರ್ಯಾಲಿ
ಪೂರ್ಣಿಯಾ/ಟಾಂಕ್: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಿಹಾರದ ಪೂರ್ಣಿಯಾದಲ್ಲಿ ಬೃಹತ್ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ ಅವರು ತೃತೀಯರಂಗ, ಕಾಂಗ್ರೆಸ್ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತೃತೀಯರಂಗವನ್ನು ಟೀಕಿಸಿದ ಮೋದಿ, ಈ ರಂಗ ಚುನಾವಣೆ ಬರುವಾಗಲಷ್ಟೇ ಏಳುತ್ತದೆ, ನಂತರ ಮತ್ತೆ ನಿದ್ದೆಗೆ ಜಾರುತ್ತದೆ ಎಂದು ವ್ಯಂಗ್ಯವಾಡಿದರು. ರಾಜಸ್ಥಾನದ ರ್ಯಾಲಿಯಲ್ಲಿ ಪಾಲ್ಗೊಂಡ ರಾಹುಲ್, ಯುಪಿಎ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಅತ್ತ ಬಡವರೂ ಅಲ್ಲದ, ಇತ್ತ ಮಧ್ಯಮ ವರ್ಗದವರೂ ಅಲ್ಲದ 70 ಕೋಟಿ ಜನರಿಗಾಗಿ ನಾವು ರಾಜಕೀಯ ಮಾಡುತ್ತಿದ್ದೇವೆ ಎಂದರು.