ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನೀರಾವರಿ ತಜ್ಞ ಪರಮಶಿವಯ್ಯ ನಿಧನ

ಬಯಲುಸೀಮೆ ಪ್ರದೇಶಗಳಿಗೆ ನೀರುಣಿಸುವ ಕೈಂಕರ್ಯಕ್ಕೆ ದನಿಯಾಗಿದ್ದ...

Vishwanath S
Updated On : 12 Mar 2014, 1:00 am

ತುಮಕೂರು: ಬಯಲುಸೀಮೆ ಪ್ರದೇಶಗಳಿಗೆ ನೀರುಣಿಸುವ ಕೈಂಕರ್ಯಕ್ಕೆ ದನಿಯಾಗಿದ್ದ ಖ್ಯಾತ ನೀರಾವರಿ ತಜ್ಞ ಡಾ. ಜಿ.ಎಸ್. ಪರಮಶಿವಯ್ಯ (96) ಬುಧವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪರಮಶಿವಯ್ಯ ಅವರು ಭಾಜನರಾಗಿದ್ದರು. ತಮ್ಮ ಅಧಿಕಾರವಧಿಯಲ್ಲಿ ರಾಜ್ಯದ 41 ವಿವಿಧ ನೀರಾವರಿ ಯೋಜನೆಗಳ ಅಂದಾಜು ವರದಿ ತಯಾರಿಸಿದ್ದರು. 1 ಲಕ್ಷ ಎಕರೆಗೆ ನೀರುಣಿಸುವ ಹೇಮಾವತಿ ನೀರಾವರಿ ಯೋಜನೆ ವಿಸ್ತರಿಸಿ 7.20 ಲಕ್ಷ ಎಕರೆಗೆ ವಿಸ್ತರಿಸುವ ಯೋಜನೆ ತಯಾರಿಸಿದ ಕೀರ್ತಿ ಪರಮಶಿವಯ್ಯನವರಿಗೆ ಸಲ್ಲುತ್ತದೆ. ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 2 ಗಂಟೆಗೆ ತುಮಕೂರಿನ ಸಿದ್ದಗಂಗಾ ಮಠದ ಮರಿಯಪ್ಪ ಉದ್ಯಾನವನದಲ್ಲಿ ನೆರವೇರಲಿದೆ. ವರುಣಾ ನಾಲೆ ಯೋಜನೆಯ ರೂವಾರಿ ಕೂಡ ಪರಮಶಿವಯ್ಯನವರೇ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ, ತುಂಗಾ ಮೇಲ್ದಂಡೆ ನೀರಾವರಿ ಯೋಜನೆಗಳ ರೂಪು ರೇಶೆ ನಡೆಸಿದ್ದರು.         
ಜತೆಗೆ, ದೇವರ ಬೆಳಕೆರೆ ನೀರಾವರಿ ಯೋಜನೆ, ಯಗಚಿ ನೀರಾವರಿ ಯೋಜನೆ, ವಾಟೆಹೊಳೆ ನೀರಾವರಿ ಯೋಜನೆ, ತೀತಾ ನೀರಾವರಿ ಯೋಜನೆ, ವರದಾ ನದಿ ಪಾತ್ರದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಮಧ್ಯಮ ನೀರಾವರಿ ಯೋಜನೆಗಳ ವರದಿಗಳನ್ನು ಪರಮಶಿವಯ್ಯ ಅವರು ತಯಾರಿಸಿದ್ದರು.
ಪಶ್ಚಿಮ ಘಟ್ಟದ ಪಶ್ಚಿಮಕ್ಕೆ ಹರಿಯುವ ನೀರಿನ ಅಂಕಿ ಅಂಶಗಳ ಸಂಗ್ರಹಿಸಿ ಮಹತ್ತದ ಕೊಡುಗೆ ನೀಡಿದ್ದಾರೆ. ಪಶ್ಚಿಮಕ್ಕೆ ಹರಿದು ಸಮುದ್ರ ಸೇರುತ್ತಿರುವ ಕುಮಾರಧಾರ, ನೇತ್ರಾವತಿ, ವರಾಹಿ, ಚಕ್ರ, ಕಾವೇಹಕ್ಲು, ಬೇಡ್ತಿ, ಅಘನಾಶಿನಿ, ತೀತಾ, ಎಣ್ಣೆ ಹೊಣೆ, ಒಕಟು ಹೊಳೆ, ಕೋದಂಡ ಹೊಳೆ ಸೇರಿದಂತೆ ಇತರೆ ನದಿಗಳ ನೀರನ್ನು ಪೂರ್ವಕ್ಕೆ ಹರಿಸುವ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿ ಪೂರ್ವಭಾವಿ ವರದಿ ನೀಡಿದ್ದರು. ಅರ್ಕಾವತಿ, ಶಿಂಶಾ, ಗೋಗೆರೆ ನದಿ ಪಾತ್ರದ ಹಲವು ಯೋಜನೆಗಳು, ಕಾವೇರಿ ಪಾತ್ರದಲ್ಲಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹಲವು ಯೋಜನೆಗಳ ಕಾರ್ಯಸಾಧುವಾದ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಎಂಜಿನಿಯರ್: ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮೊದಲ ಪ್ರಿನ್ಸಿಪಾಲರು ಆದ್ದರು. ಗುಲ್ಬರ್ಗ, ಯಾದಗಿರಿ, ಶಿವಮೊಗ್ಗ, ಬೆಂಗಳೂರು, ಮೈಸೂರು, ತುಮಕೂರು, ಹರಿಹರ, ಹಾಸನ ಹೀಗೆ ರಾಜ್ಯದ ಮೂಲೆ ಮೂಲೆಗಳಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ನೀರಾವರಿ ಇಲಾಖೆ, ನಿಗಮಗಳಲ್ಲಿ ನಿರ್ವಹಿಸದ ಹುದ್ದೆಯಿಲ್ಲ. ಪಾಲ್ಗೊಳ್ಳದ ಯೋಜನೆಗಳಿಲ್ಲ ಎನ್ನುವಷ್ಟರ ಮಟ್ಟಿಗೆ ತಮ್ಮ ಜೀವನವನ್ನೇ ನೀರಾವರಿ ಯೋಜನೆಗಳ ತಯಾರಿಗೆ ಮುಡಿಪಾಗಿಟ್ಟಿದ್ದ ವ್ಯಕ್ತಿಯಾಗಿದ್ದರು. 1944ರಲ್ಲಿ ಮೈಸೂರು ವಿವಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದು, 1944ರಲ್ಲೇ ಸರ್ಕಾರಿ ಸೇವೆಗೂ ಸೇರಿ 1974ರಲ್ಲಿ ನಿವೃತ್ತರಾದರು.
ಸಂತಾಪ: ಪರಮಶಿವಯ್ಯ ಅವರ ನಿಧನಕ್ಕೆ ತುಮಕೂರಿನ ಸಿದ್ದಗಂಗಾ ಶ್ರೀ, ಕೇಂದ್ರ ವೀರಪ್ಪ ಮೊಯ್ಲಿ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಿಧನಕ್ಕೆ ಸಿದ್ಧಗಂಗಾ ಶ್ರೀ ಸಂತಾಪ
ತುಮಕೂರು: ನೀರಾವರಿ ತಜ್ಞ ಪರಮಶಿವಯ್ಯನವರ ನಿಧನಕ್ಕೆ ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮಿ  ಸಂತಾಪ ಸೂಚಿಸಿದ್ದಾರೆ. ಪರಮಶಿವಯ್ಯ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮುಂತಾದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಇದರಿಂದ ಲಕ್ಷೋಪಲಕ್ಷ ಜನತೆಗೆ ಅನುಕೂಲವಾಗುತ್ತಿತ್ತು. ಸರ್ಕಾರ ಇದನ್ನು ಜಾರಿಗೆ ತರಬೇಕಿದೆ. ಇದರಿಂದ ಶ್ರೀಯುತರ ಆತ್ಮಕ್ಕೆ ತೃಪ್ತಿಯುಂಟಾಗುತ್ತದೆ ಎಂದು ಸಿದ್ಧಗಂಗಾ ಮಠಾಧೀಶರು ತಿಳಿಸಿದ್ದಾರೆ. ಶ್ರೀಮಠದ ಭಕ್ತರು, ಗುರುಲಿಂಗ ಜಂಗಮಪ್ರೇಮಿಗಳು ಆಗಿದ್ದ ಪರಮಶಿವಯ್ಯನವರ ಅಗಲಿಕೆಯಿಂದ ರಾಜ್ಯ ಹಾಗೂ ಸಮಾಜಕ್ಕೆ ದೊಡ್ಡ ನಷ್ಟವುಂಟಾಗಿದೆ. ಅವರ ಆತ್ಮಕ್ಕೆ ಪರಶಿವನು ಪರಮಶಾಂತಿ ನೀಡಲೆಂದು ಆಶಿಸುವುದಾಗಿಯೂ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆಲ್ಲಾ ನೀಡಲೆಂದು ಭಗವಂತನಲ್ಲಿ ಕೋರುತ್ತೇವೆ ಎಂದು ಸಿದ್ಧಗಂಗಾ ಶ್ರೀಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement