ಆಲಿಕಲ್ಲು ಮಳೆ ಹಾನಿ: ಪರಿಶೀಲನೆಗೆ ಇಂದು ಬೆಳಗಾವಿ ಸಿದ್ದರಾಮಯ್ಯ
ಬೆಳಗಾವಿ: ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆ, ಬಿರುಗಾಳಿಯಿಂದ ಆಗಿರುವ ಬೆಳೆ ಹಾನಿ ಹಾಗೂ ಆಸ್ತಿ ಪಾಸ್ತಿ ಹಾನಿಯ ಕುರಿತು ಪರಿಶೀಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಶುಕ್ರವಾರ ಮುಂಜಾನೆ 8 ಗಂಟೆಗೆ ಜಕ್ಕೂರ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಡುವ ಮುಖ್ಯಮಂತ್ರಿಗಳು 10.50ಕ್ಕೆ ಗೋಕಾಕ ತಾಲೂಕು ವಡೇರಹಟ್ಟಿ ಪದವಿಪೂರ್ವ ಕಾಲೇಜು ಮೈದಾನದ ಹೆಲಿಪ್ಯಾಡ್ನಲ್ಲಿ ಇಳಿದು, ಬೆಳೆ ಹಾನಿಗೀಡಾದ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಗೋಕಾಕದಿಂದ ಹೆಲಿಕಾಪ್ಟರ್ನಲ್ಲಿ ಹೊರಟು 12.20ಕ್ಕೆ ಅಥಣಿಯ ರೇಣುಕಾ ಸಕ್ಕರೆ ಕಾರ್ಖಾನೆಯ ಹೆಲಿಪ್ಯಾಡ್ನಲ್ಲಿ ಇಳಿಯಲಿದ್ದಾರೆ. ಅಲ್ಲಿಂದ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ, ಆಸ್ತಿ ಪಾಸ್ತಿ ಹಾನಿ ಪರಿಶೀಲಿಸಿ ಮಧ್ಯಾಹ್ನ 3 ಗಂಟೆಗೆ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಜೇವೂರ ಗ್ರಾಮಕ್ಕೆ ತೆರಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಂ ತಿಳಿಸಿದ್ದಾರೆ.
ರು. 260 ಕೋಟಿ ಹಾನಿ: ಅಕಾಲಿಕ, ಆಲಿಕಲ್ಲು ಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 260 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಗೋವಿನ ಜೋಳ, ಕಬ್ಬು, ಗೋಧಿ ಸೇರಿದಂತೆ ಸುಮಾರು 200 ಕೋಟಿ ಮೌಲ್ಯದ ಕೃಷಿ ಬೆಳೆ ಹಾಗೂ ದ್ರಾಕ್ಷಿ, ದಾಳಿಂಬೆ, ಲಿಂಬೆ, ಬಾಳೆ ಸೇರಿ ಸುಮಾರು 60 ಕೋಟಿ ಮೌಲ್ಯದ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ 5 ಜನರು ಮೃತಪಟ್ಟು, ನವಿಲು, ಹಸು, ಕರು, ಎಮ್ಮೆ, ಕರಿ ಸೇರಿ 51 ಜಾನುವಾರು ಸತ್ತಿವೆ.