ಬಂಡೆ ಕುಟುಂಬಕ್ಕೆ ರು. 9.25 ಲಕ್ಷ ನೆರವು
ಬೆಳಗಾವಿ: ಎನ್ಕೌಂಟರ್ ವೇಳೆ ಪಾತಕಿಗಳ ಗುಂಡಿಗೆ ಎದೆಯೊಡ್ಡಿ ವೀರಮರಣ ಹೊಂದಿದ ಗುಲ್ಬರ್ಗದ ಪ್ರಾಮಾಣಿಕ, ದಕ್ಷ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಬೆಳಗಾವಿ ಉತ್ತರ ವಲಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ 9.25 ಲಕ್ಷ ಸಹಾಯಧನ ನೀಡಲಾಗಿದೆ.
ಬಂಡೆ ಕುಟುಂಬಕ್ಕೆ ನೆರವು ನೀಡುವಂತೆ ಉತ್ತರ ವಲಯ ಐಜಿಪಿ ಭಾಸ್ಕರ್ರಾವ್ ಅವರು ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ನೆರವು ನೀಡಿದ್ದಾರೆ. ಐಜಿ- 1 ಸಾವಿರ, ಬೆಳಗಾವಿ- ರು. 2,82,250, ಹಾವೇರಿ- 3,00,100, ಬಾಗಲಕೋಟೆ- ರು. 1,86,650, ಗದಗ- ರು. 1,30,000 ಹಾಗೂ ಧಾರವಾಡ- ರು. 25 ಸಾವಿರ ಹೀಗೆ ಒಟ್ಟು ರು. 9.25 ಲಕ್ಷ ಸಂಗ್ರಹವಾಗಿತ್ತು.
ಹುತಾತ್ಮ ಮಲ್ಲಿಕಾರ್ಜುನ ಬಂಡೆ ಪುತ್ರಿ ಶಿವಾನಿ ಹೆಸರಿನಲ್ಲಿ ರು. 4,65,000 ಹಾಗೂ ಅವರ ಪುತ್ರ ಸಾಯಿದರ್ಶನ ಹೆಸರಿನಲ್ಲಿ ರು. 4,60,000 ಹಣವನ್ನು ಗುಲ್ಬರ್ಗದ ಇಂಡಿಯನ್ ಓವರಸೀಸ್ ಬ್ಯಾಂಕ್ನಲ್ಲಿ ಹತ್ತು ವರ್ಷಗಳ ಅವಧಿಗೆ ಫಿಕ್ಸೆಡ್ ಡಿಪಾಸಿಟ್ ಇಡಲಾಗಿದೆ. ಈ ಸಂಬಂಧ ದಾಖಲೆ ಪತ್ರಗಳನ್ನು ಮಲ್ಲಿಕಾರ್ಜುನ ಬಂಡೆ ಅವರ ಪತ್ನಿ ಮಲ್ಲಮ್ಮ ಬಂಡೆ ಅವರಿಗೆ ಗುರುವಾರ ಹಸ್ತಾಂತರಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ಭಾಸ್ಕರ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.