ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಪು ತೋಪು

Vishwanath S
Updated On : 16 Mar 2014, 12:54 pm

ಕನ್ನಡಪ್ರಭ ವಾರ್ತೆ , ಬೆಂಗಳೂರು , ಮಾ.15
ಸಿಲಿಕಾನ್ ನಗರಿಯಲ್ಲಿ “ಆಮ್ ಆದ್ಮಿ’ ಅರವಿಂದ್ ಕೇಜ್ರಿವಾಲ್ ರೋಡ್ ಶೋ ಫ್ಲಾಪ್ ಆಗಿದೆ.
ವಾರಾಂತ್ಯದ ದಿನವಾದ್ದರಿಂದ ಐಟಿ ಸಿಟಿಯ ವಿದ್ಯಾವಂತರು ದಂಡೆತ್ತಿ ಬರುತ್ತಾರೆ ಎಂದು ನಿರೀಕ್ಷಿಸಿ ಬೆಳಗ್ಗೆ ರೋಡ್ ಶೋ ಪ್ರಾರಂಭಿಸಿದ್ದ ಅರವಿಂದ್ ಕೇಜ್ರಿವಾಲ್‌ಗೆ ನಗರದೆಲ್ಲೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತ್ತೊಂದೆಡೆ ಹವಾನಿಯಂತ್ರಿತ ನಗರವೆಂದೇ ಖ್ಯಾತವಾಗಿರುವ ಬೆಂಗಳೂರಿನ ಬಿಸಿಲಿಗೇ ಸುಸ್ತಾದ ದೆಹಲಿ ಮಾಜಿ ಮುಖ್ಯಮಂತ್ರಿ ರೋಡ್ ಶೋ ಅರ್ಧಕ್ಕೇ ಮುಗಿಸಿ ವಿಶ್ರಾಂತಿಯ ಮೊರೆ ಹೋದರು.
ಅರವಿಂದ್ ಕೇಜ್ರಿವಾಲ್ ರೋಡ್ ಶೋ ನೆಪದಿಂದ ನಗರದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸೂಚನೆಯಿತ್ತು. ಆದರೆ ಆಮ್ ಆದ್ಮಿ ಪಕ್ಷದ ನಿರೀಕ್ಷೆಯಂತೆ ಜನರು ಸ್ಪಂದಿಸದಿರುವುದರಿಂದ ಸಂಚಾರ ವ್ಯವಸ್ಥೆ ಸುಗಮವಾಗಿಯೇ ಇತ್ತು. ಬೆಳಗ್ಗೆ ಒಂಬತ್ತೂವರೆಯಿಂದ ಸಂಜೆ 6 ಗಂಟೆವರೆಗೆ ರೋಡ್ ಶೋನಲ್ಲಿ ಭಾಗವಹಿಸಿದ ಕೇಜ್ರಿವಾಲ್, ಅನಾರೋಗ್ಯದ ನೆಪ ಹೇಳಿ ವಿಶ್ರಾಂತಿಗೆ ತೆರಳಿದರು. ನಿರೀಕ್ಷಿತ ಜನಸ್ಪಂದನೆಯಿಲ್ಲದಿರುವುದು  ಈ ತೀರ್ಮಾನಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.
ನಗರದ ಸ್ಯಾಂಕಿ ಕೆರೆ ಬಳಿ ರೋಡ್ ಶೋ ಬಂದಾಗ ಅಲ್ಲಿ ಬೆರಳೆಣಿಕೆಯ ಜನರಿದ್ದರು. ಇದಲ್ಲದೆ ರಾಷ್ಟ್ರೀಯ ಸೈನಿಕ ಸ್ಮಾರಕದ ಬಳಿ ರೋಡ್ ಶೋ ಅಂತ್ಯಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಅಲ್ಲಿಯೂ ಜನ ಸೇರಿರಲಿಲ್ಲ. ಇದರಿಂದ ನೇರವಾಗಿ ವಿಶ್ರಾಂತಿಗೆ ತೆರಳಿದ ಕೇಜ್ರಿವಾಲ್, ರಾತ್ರಿ 8 ರಿಂದ 11 ಗಂಟೆವರೆಗೆ 20 ಸಾವಿರ ದೇಣಿಗೆ ನೀಡಿದ 'ಆಮ್ ಆದ್ಮಿ'ಗಳೊಂದಿಗೆ ಪಂಚತಾರಾ ಹೋಟೆಲ್‌ನಲ್ಲಿ ಊಟ ಮಾಡಿದರು.
ಸಾರ್ವಜನಿಕ ಶೌಚಾಲಯಕ್ಕೆ ಭೇಟಿ: ಹೆಬ್ಬಾಳದಿಂದ ರೋಡ್ ಶೋ ಆರಂಭಿಸುವ ಮೊದಲು ಸ್ಥಳೀಯ ಸಾರ್ವಜನಿಕ ಶೌಚಾಲಯಕ್ಕೆ ಭೇಟಿ ನೀಡಿ 'ಶೋ' ನಡೆಸಿದರು. ಅಲ್ಲಿಂದ ತೆರೆದ ಜೀಪಿಗೆ ಏರಿ ರೋಡ್ ಶೋ ಆರಂಭಿಸಿದರು. ಆರಂಭದಲ್ಲಿ ಸುಮಾರು 100 ಆಪ್ ಕಾರ್ಯಕರ್ತರು ಭಾಗವಹಿಸಿದ್ದರು. ಯಾತ್ರೆ ಸಾಗಿದಂತೆ ಜೀಪಿನಲ್ಲಿ ಎಂಟು ಮಂದಿ ಹಾಗೂ ಹಿಂದೆರಡು ಕಾರುಗಳು ಹಿಂಬಾಲಿಸಿದವು. ಕಾರ್ಯಕರ್ತರ ಸಂಖ್ಯೆಗಿಂತ ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸರ ಸಂಖ್ಯೆ ಹೆಚ್ಚಿತ್ತು. ಆರ್.ಟಿ.ನಗರ, ಇಂಡಿಯನ್ ಎಕ್ಸ್‌ಪ್ರೆಸ್, ಶಾಂತಿನಗರದಲ್ಲಿ ಸಾರ್ವಜನಿಕರು ರೋಡ್ ಶೋಗೆ ಆಸಕ್ತಿಯನ್ನೇ ತೋರಲಿಲ್ಲ.
ಆದರೆ ಜಯನಗರ 4ನೇ ಹಂತ ಹಾಗೂ ಗಾಂಧಿಬಜಾರ್‌ನಲ್ಲಿ ಸ್ವಲ್ಪ ನೂಕುನುಗ್ಗಲು ಇತ್ತು. ಇವೆರಡು ಪ್ರದೇಶಗಳು ವಾರಾಂತ್ಯ ಹಾಗೂ ಸಾಮಾನ್ಯ ದಿನದಲ್ಲಿಯೂ ಜನಜಂಗುಳಿಯಿಂದ ತುಂಬಿಕೊಂಡಿರುತ್ತದೆ. ಇದೇ ಜನರು ದೆಹಲಿಯಲ್ಲಿ 49 ದಿನಗಳ ಕಾಲ ಅಧಿಕಾರ ನಡೆಸಿದ ಅರವಿಂದ್ ಕೇಜ್ರಿವಾಲ್ ಅವರನ್ನು ನೋಡುವ ಕೌತುಕದಿಂದ ರೋಡ್ ಶೋದತ್ತ ಗಮನ ನೀಡಿದರು.
ಮಾಧ್ಯಮಗಳ ವಿರುದ್ಧದ ಟೀಕೆ ಸಮರ್ಥನೆ
ಮಾಧ್ಯಮ ಪ್ರತಿನಿಧಿಗಳನ್ನು ಜೈಲಿಗೆ ಕಳುಹಿಸುತ್ತೇನೆ ಎಂಬ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ಕೇಜ್ರಿವಾಲ್, ಕೆಲ ಮಾಧ್ಯಮಗಳು ಮೋದಿಗೆ ಮಾರಿಕೊಂಡಿವೆ ಎಂದು ಹೇಳಿದ್ದೇನೆ. ಇದನ್ನು ಸಾರ್ವತ್ರಿಕಗೊಳಿಸಿಲ್ಲ. ಈ ಹೇಳಿಕೆಗೆ ಇಂದು ಬದ್ಧನಾಗಿದ್ದೇನೆ ಎಂದು ಸಮರ್ಥಿಸಿಕೊಂಡರು. ಆದರೆ ಮಾಧ್ಯಮ ಪ್ರತಿನಿಧಿಗಳು ಈ ಕುರಿತಂತೆ ದಾಖಲೆಗಳನ್ನು ನೀಡಿ ಎಂದು ಮರು ಪ್ರಶ್ನೆ ಹಾಕಿದಾಗ ನುಣುಚಿಕೊಂಡರು. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ರಾಜ್ಯದ ಜನತೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.
ಇಂದು ಸಾರ್ವಜನಿಕ ಕಾರ್ಯಕ್ರಮ: ಚಿಕ್ಕಬಳ್ಳಾಪುರದಲ್ಲಿ ಭಾನುವಾರ ರೋಡ್ ಶೋ ನಡೆಸಲಿರುವ ಕೇಜ್ರಿವಾಲ್, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮತ್ತೆ ಬೆಂಗಳೂರಿಗೆ ಆಗಮಿಸುವ ಕೇಜ್ರಿವಾಲ್, ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement