ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇವತ್ತೇ ಮತಪಟ್ಟಿಗೆ ನಿಮ್ಮ ಹೆಸರು ಸೇರಿಸಿ, ಮರೆಯದಿರಿ, ಮರೆತು ನಿರಾಶರಾಗದಿರಿ

ಮತದಾನದ ಹಕ್ಕು ಚಲಾಯಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗುವ ಆಸೆ ನಿಮಗಿದೆಯೆ? ಗೊತ್ತಿರಲಿ, ಮತದಾರರ...

Vishwanath S
Updated On : 16 Mar 2014, 1:35 am

ಕನ್ನಡಪ್ರಭ ವಾರ್ತೆ , ಬೆಂಗಳೂರು , ಮಾ.15
ಮತದಾನದ ಹಕ್ಕು ಚಲಾಯಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗುವ ಆಸೆ ನಿಮಗಿದೆಯೆ? ಗೊತ್ತಿರಲಿ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನಿಮ್ಮ ಆಸೆ ಈಡೇರಲು ಸಾಧ್ಯವೇ ಇಲ್ಲ. 'ನನ್ನ ಹೆಸರು ವೋಟರ್ಸ್ ಲಿಸ್ಟ್‌ನಲ್ಲಿ ಇಲ್ಲ' ಎಂದು ಪರಿತಪಿಸಬೇಡಿ. 2014ರ ಲೋಕಸಭಾ ಚುನಾವಣೆಯಲ್ಲಿ ಹೆಸರು ನೋಂದಾಯಿಸಲು ಕೊನೆಯ ಅವಕಾಶವೊಂದಿದೆ. ನೀವು ಮಾಡಬೇಕಾದದ್ದು ಎಂದರೆ ಭಾನುವಾರ ಎಂದು ಮನೆಯಲ್ಲಿ ಕುಳಿತುಕೊಳ್ಳದೆ ಸಮೀಪದ ಮತಗಟ್ಟೆಗೆ ಧಾವಿಸಿ.

ಯಾರು ಹೆಸರು ನೋಂದಾಯಿಸಬಹುದು?
2014ರ ಜನವರಿ 1ರಂದು 18 ವರ್ಷ ಪೂರೈಸಿರುವ ಯಾವುದೇ ಭಾರತೀಯ, ತನ್ನ ವಾಸಸ್ಥಳಕ್ಕೆ ಸಮೀಪದ ಮತಗಟ್ಟೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

ನನಗೆ 18 ತುಂಬುತ್ತದೆ. ಹೆಸರು ನೋಂದಾಯಿಸಿಕೊಳ್ಳಬಹುದೆ?
ಇಲ್ಲ. ಮತದಾರರ ಪಟ್ಟಿ ಪರಿಷ್ಕರಣೆಯಾಗುವ ವರ್ಷದ ಜನವರಿ 1ರಂದು 18 ವರ್ಷ ತುಂಬಿದ್ದರೆ ಮಾತ್ರ ಹೆಸರು ನೋಂದಾಯಿಸಿಕೊಳ್ಳಬಹುದು.

ಏನೇನು ದಾಖಲೆಗಳನ್ನು ನೀಡಬೇಕು?
ವಾಸಸ್ಥಳ ವಿಳಾಸದ ದೃಢೀಕರಣಕ್ಕಾಗಿ ಬ್ಯಾಂಕ್ ಪಾಸ್‌ಬುಕ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಅಥವಾ ನಿಮ್ಮ ವಿಳಾಸ ದೃಢೀಕರಿಸುವ ಯಾವುದೇ ಸರ್ಕಾರಿ ದಾಖಲೆ. ಇವುಗಳ ನಕಲು ಪ್ರತಿಗಳು, ಇತ್ತೀಚಿನ ಭಾವಚಿತ್ರದೊಂದಿಗೆ ಭರ್ತಿ ಮಾಡಿದ ನಮೂನೆ-6 ಅನ್ನು ಸಮೀಪದ ಮತಗಟ್ಟೆ ಅಧಿಕಾರಿಗೆ ಸಲ್ಲಿಸಬೇಕು.

ನನ್ನ ಮತಗಟ್ಟೆ ಯಾವುದೆಂದು ತಿಳಿಯುವುದು ಹೇಗೆ?
ಚುನಾವಣಾ ಆಯೋಗದ ಸಹಾಯವಾಣಿ 1950ಕ್ಕೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದು.

ನನಗೆ ಇತ್ತೀಚೆಗೆ ಮದುವೆಯಾಗಿದೆ. ಹೆಂಡತಿ ಹೆಸರನ್ನು ನಾನಿರುವ ಪ್ರದೇಶದಲ್ಲಿ ಸೇರಿಸಬಹುದೆ?
ಆಕೆ ಮೊದಲ ಸಲ ಮತ ಚಲಾಯಿಸುವಂತಿದ್ದರೆ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು. ಆಕೆಯ ಹೆಸರು ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ಇದ್ದರೆ, ಆಗಲೂ ಇದೇ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಕ್ಷೇತ್ರ ಒಂದೇ ಆಗಿದ್ದು, ವಿಳಾಸ ಬದಲಾದರೆ ನ.-8ಎ ಸಲ್ಲಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement