ವಾರಾಣಸಿಯಿಂದ ಮೋದಿ, ಲಖನೌದಿಂದ ರಾಜನಾಥ್ ಸ್ಪರ್ಧೆ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿಯಿಂದ, ಅಧ್ಯಕ್ಷ ರಾಜನಾಥ್ ಸಿಂಗ್ ಲಖನೌದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ...
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿಯಿಂದ, ಅಧ್ಯಕ್ಷ ರಾಜನಾಥ್ ಸಿಂಗ್ ಲಖನೌದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಉತ್ತರಪ್ರದೇಶವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡು ಮೋದಿ ಹಾಗೂ ರಾಜನಾಥ್ ಸಿಂಗ್ ಸ್ಪರ್ಧೆಗಿಳಿಯುತ್ತಿದ್ದಾರೆ. ಆದರೆ, ಪಕ್ಷದ ಈ ನಿರ್ಧಾರ ಬಿಜೆಪಿಯ ಕೆಲ ಹಿರಿಯ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಮೋದಿಗಷ್ಟೇ ಕ್ಷೇತ್ರಬಿಟ್ಟುಕೊಡಲು ಸಿದ್ಧ ಎಂದಿದ್ದ ಲಖನೌ ಸಂಸದ ಲಾಲ್ಜಿ ಟಂಡನ್ ರಾಜನಾಥ್ಗೆ ಕ್ಷೇತ್ರ ತೆರವುಗೊಳಿಸಲು ನಿರಾಕರಿಸಿದ್ದಾರೆ. ಇನ್ನು ವಾರಾಣಸಿ ಬದಲು ಕಾನ್ಪುರದ ಟಿಕೆಟ್ ಪಡೆದಿರುವ ಜೋಶಿ ಪಕ್ಷದ ಮುಖಂಡರ ಎದುರೇ ಅತೃಪ್ತಿ ಬಹಿರಂಗಪಡಿಸಿದ್ದಾರೆ.
ಈ ನಡುವೆ, ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಹಿರಿಯ ಮುಖಂಡರಾದ ಸುಷ್ಮಾಸ್ವರಾಜ್ ಹಾಗೂ ಎಲ್.ಕೆ. ಆಡ್ವಾಣಿ ಅವರೂ ಅಸಮಾಧಾನ ಹೊರಗೆಡವಿದ್ದಾರೆ.
ಅನಿವಾರ್ಯ ಕಾರಣವಿತ್ತು
ಶ್ರೀರಾಮುಲು ಸೇರ್ಪಡೆ ವಿಚಾರವನ್ನು ಪಕ್ಷದ ಹಿರಿಯ ಮುಖಂಡ ಅರುಣ್ ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ. ಶ್ರೀರಾಮುಲು ಅವರನ್ನು ಅನಿವಾರ್ಯ ಕಾರಣಗಳಿಂದಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದಿರುವ ಅವರು, ಸುಷ್ಮಾಸ್ವರಾಜ್ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಶ್ರೀರಾಮುಲು ಸೇರ್ಪಡೆ ವಿರುದ್ಧ ಶುಕ್ರವಾರ ಟ್ವಿಟರ್ ಮೂಲಕ ಸುಷ್ಮಾಸ್ವರಾಜ್ ಅಸಮಾಧಾನ ಹೊರಹಾಕಿದ್ದರು. ಅಭ್ಯರ್ಥಿಗಳ ಆಯ್ಕೆ, ಪಕ್ಷ ಸೇರ್ಪಡೆ, ಪಕ್ಷ ತ್ಯಜಿಸುವಂಥ ಸಣ್ಣ ಸಣ್ಣ ವಿಚಾರಗಳು ಬಿಜೆಪಿಯ ರಾಜಕೀಯ ಅಜೆಂಡಾ ಮೇಲೆ ಸವಾರಿ ಮಾಡಲು ಅವಕಾಶ ಮಾಡಿಕೊಡಬಾರದು. ಸ್ಥಿರ ಸರ್ಕಾರ, ಉತ್ತಮ ಆಡಳಿತ ಈ ಚುನಾವಣೆಯ ಪ್ರಮುಖ ವಿಚಾರ. ಈಗ ಕೊನೆಯ ಹಂತದ ಪ್ರಚಾರ ಶುರುವಾಗಿದೆ. ನಾವು 272 ಸ್ಥಾನಗಳತ್ತ ಮುನ್ನುಗ್ಗಲು ಗಮನಹರಿಸಬೇಕು ಎಂದು ಜೇಟ್ಲಿ ತಮ್ಮ ಬ್ಲಾಗ್ನಲ್ಲಿ ಹೇಳಿಕೊಂಡಿದ್ದಾರೆ.
125 ಮಂದಿ ಪಟ್ಟಿ
ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯು ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಒಟ್ಟು 125 ಸ್ಥಾನಗಳ ಟಿಕೆಟ್ಗೆ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳಲಿದೆ. ಉಳಿದ ಸ್ಥಾನಗಳಿಗೆ ಹೋಳಿಯ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಮುಖ ಅಭ್ಯರ್ಥಿಗಳ ಕ್ಷೇತ್ರ
ಮನೇಕಾಗಾಂಧಿ- ಪಿಲಿಭಿಟ್
ವರುಣ್ ಗಾಂಧಿ- ಸುಲ್ತಾನ್ಪುರ
ಹರ್ಷವರ್ಧನ್- ಚಾಂದ್ನಿ ಚೌಕ್
ಮೀನಾಕ್ಷಿ ಲೇಖಿ- ನವದೆಹಲಿ
ಶತ್ರುಘ್ನ ಸಿನ್ಹಾ- ಪಟನಾಸಾಹೀಬ್
ಕಿರಣ್ ಕೇರ್- ಚಂಡೀಗಢ
ಮನೋಜ್ ತಿವಾರಿ- ಆಗ್ನೇಯ ದೆಹಲಿ