ಹೆಗಡೆಗೆ ತೆರೆಯದ 'ಕೋಟೆ' ಬಾಗಿಲು!
ರಾಜ್ಯದಲ್ಲಿ ಮೌಲ್ಯಾಧಾರಿತ ರಾಜಕಾರಣದ ಬೀಜ ಬಿತ್ತಿದ್ದ ಮುತ್ಸದ್ದಿ, ಪ್ರಬುದ್ಧ, ಚಾಣಾಕ್ಷ...
ಕನ್ನಡಪ್ರಭ ವಾರ್ತೆ , ಬಾಗಲಕೋಟೆ , ಮಾ.15
ರಾಜ್ಯದಲ್ಲಿ ಮೌಲ್ಯಾಧಾರಿತ ರಾಜಕಾರಣದ ಬೀಜ ಬಿತ್ತಿದ್ದ ಮುತ್ಸದ್ದಿ, ಪ್ರಬುದ್ಧ, ಚಾಣಾಕ್ಷ ರಾಜಕಾರಣಿ, ಜನಾಕರ್ಷಣೆಯ ರಾಷ್ಟ್ರೀಯ ನಾಯಕ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಂಥ ನಾಯಕರನ್ನು ಸೋಲಿಸಿದ ಇತಿಹಾಸ ಬಾಗಲಕೋಟೆ ಕ್ಷೇತ್ರಕ್ಕಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ಬಿಟ್ಟು ಕೇವಲ ನಾಲ್ಕೇ ವರ್ಷದಲ್ಲಿ ಅಂದರೆ 1991ರ ಲೋಕಸಭೆ ಚುನಾವಣೆಯಲ್ಲಿ ಹೆಗಡೆ ಜನತಾದಳದ ಹುರಿಯಾಳಾಗಿ ಬಾಗಲಕೋಟೆ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಹೆಗಡೆ ಆಡಳಿತ, ಅವರ ಜನಪರ, ಜನಪ್ರಿಯ ಯೋಜನೆಗಳು ಇನ್ನೂ ಜನರ ಮನಸ್ಸಿನಲ್ಲಿ ಹಸುರಾಗಿತ್ತು. ಬಾಗಲಕೋಟೆ ಸುರಕ್ಷಿತ ಕ್ಷೇತ್ರ ಎಂಬ ಭಾವನೆ ಎಲ್ಲರಲ್ಲಿಯೂ ಇತ್ತು. ಸ್ವತಃ ರಾಮಕೃಷ್ಣ ಹೆಗಡೆ ಅವರಿಗೂ ಆ ನಂಬಿಕೆ ಇತ್ತು. ಆದ್ದರಿಂದಲೇ ತಮ್ಮ ತವರು ಕೆನರಾ ಕ್ಷೇತ್ರ, ರಾಜಕೀಯ ಕಾರ್ಯಕ್ಷೇತ್ರವಾದ ಬೆಂಗಳೂರನ್ನು ಬಿಟ್ಟು ಬಾಗಲಕೋಟೆಯಲ್ಲಿ ರಾಜಕೀಯ ನೆಲೆ ಅರಸಲು ಹೊರಟಿದ್ದರು. ಆದರೆ, ಅದೇ ತಾನೆ ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದ ಚಿಕ್ಕಪಡಸಲಗಿ ಬ್ಯಾರೇಜ್ ಖ್ಯಾತಿಯ, ಈಗಿನ ಜಮಖಂಡಿಯ ಶಾಸಕ ಸಿದ್ದು ನ್ಯಾಮಗೌಡ ಎದುರು ಸೋಲು ಅನುಭವಿಸಬೇಕಾಯಿತು. ಸಿದ್ದು ನ್ಯಾಮಗೌಡ ಅಲ್ಲಿಯ ತನಕ ರಾಜಕೀಯಕ್ಕೆ ಅಪರಿಚಿತ ವ್ಯಕ್ತಿ. ಆದರೆ ರೈತರ ಪಡೆಯೊಂದಿಗೆ ಚಿಕ್ಕಪಡಸಲಗಿ ಬಳಿ ಬ್ಯಾರೇಜ್ ನಿರ್ಮಿಸಿ ಕ್ರಾಂತಿ ಮಾಡಿದ ಸಿದ್ದು ನ್ಯಾಮಗೌಡರನ್ನು ರಾಜಕೀಯಕ್ಕೆ ಕರೆತಂದ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಾಗಲಕೋಟೆ ಕ್ಷೇತ್ರದಿಂದ ರಾಮಕೃಷ್ಣ ಹೆಗಡೆ ಎದುರಾಳಿಯಾಗಿ ಕಣಕ್ಕಿಳಿಸಿದರು. ಸಿದ್ದು ಪ್ರಥಮ ಪ್ರಯತ್ನದಲ್ಲೇ ಲೋಕಸಭೆ ಪ್ರವೇಶಿದರಲ್ಲದೇ, ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.
ರಾಜೀವ ಹತ್ಯೆ ಮುಳುವಾಗಿತ್ತು: ಹೆಗಡೆ ಅವರ ಸೋಲಿಗೆ ಹಲವು ಕಾರಣ ವಿಶ್ಲೇಷಿಸಲಾಗಿತ್ತು. ರಾಮಕೃಷ್ಣ ಹೆಗಡೆ ಕೇವಲ 21 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಆದರೆ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಅಭ್ಯರ್ಥಿ ಕಣಕ್ಕಿಳಿಸಿದ ಬಿಜೆಪಿ ಅಭ್ಯರ್ಥಿ ಪಿ.ಎಚ್. ಪೂಜಾರ 33 ಸಾವಿರ ಮತ ಗಳಿಸಿದ್ದರು. ಇದೇ ಚುನಾವಣೆಯ ಸಂದರ್ಭದಲ್ಲೇ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ಭೀಕರ ಹತ್ಯೆ ಸಂಭವಿಸಿತ್ತು. 1991ರ ಮೇ 21 ರಂದು ತಮೀಳ್ನಾಡಿನ ಶ್ರೀಪೆರಂಬುದೂರು ಬಳಿ ಭೀಕರ ಮಾನವ ಬಾಂಬ್ ಸ್ಫೋಟದಲ್ಲಿ ರಾಜೀವ ಹತ್ಯೆಯಾಯಿತು. ಅದರ ಬಳಿಕ ನಡೆದ ಚುನಾವಣೆಯಲ್ಲಿ (ಜೂನ್ 20) ಕಾಂಗ್ರೆಸ್ ಅನುಕಂಪದ ಅಲೆಯಲ್ಲಿ ಜಯ ಸಾಧಿಸಿತು. ಅಂತಹ ಪರಿಸ್ಥಿತಿಯಲ್ಲೂ ತೀವ್ರ ಪೈಪೋಟಿ ನೀಡಿದ ರಾಮಕೃಷ್ಣ ಹೆಗಡೆ 2,55,645 ಮತ ಗಳಿಸುವ ಮೂಲಕ ಗಮನ ಸೆಳೆದಿದ್ದರು.
ಪಾಟೀಲ್ ಪ್ರಭಾವ ಇತ್ತು
ಇನ್ನು ಈ ಹಿಂದೆ ಹೆಗಡೆ ಅವರ ಸಂಪುಟದಲ್ಲಿ ಸಚಿವರಾಗಿದ್ದ ರಾಯಬಾಗದ ಹುಲಿ ಖ್ಯಾತಿಯ ವಿ.ಎಲ್. ಪಾಟೀಲ ಹೆಗಡೆ ಅವರ ವಿರುದ್ಧ ಮುನಿಸಿಕೊಂಡು, ಹೆಗಡೆ ಅವರನ್ನು ಸೋಲಿಸಿಯೇ ತೀರುತ್ತೇನೆಂದು ಅಲ್ಲಿಯೇ ಠಿಕಾಣಿ ಹೂಡಿ ಪ್ರಚಾರ ನಡೆಸಿದ್ದರು. ಪಕ್ಕದ ಕ್ಷೇತ್ರವೇ ಆಗಿದ್ದ ಬಾಗಲಕೋಟೆಯಲ್ಲಿ ಪಾಟೀಲರ ಪ್ರಭಾವವೂ ಸಾಕಷ್ಟು ಇತ್ತು. ಅವರ ಸಮುದಾಯದ ಮತದಾರರ ಪ್ರಮಾಣವೂ ಹೆಚ್ಚಾಗಿತ್ತು. ಈ ಕ್ಷೇತ್ರದಲ್ಲಿ ಅಂದು ರಾಮಕೃಷ್ಣ ಹೆಗಡೆ ಸೋತಿರಬಹುದು. ಆದರೆ ಕ್ಷೇತ್ರದಲ್ಲಿ ಬಲವಾದ ಕಾಂಗ್ರೆಸ್ ವಿರೋಧಿ ಶಕ್ತಿ, ಅಲೆಯನ್ನು ಸ್ಥಾಪಿಸುವಲ್ಲಿ ಹೆಗಡೆ ಯಶಸ್ವಿಯಾಗಿದ್ದರು. 1991ರ ಬಳಿಕ ನಡೆದ ಐದು ಚುನಾವಣೆಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ವಿರೋಧಿ ಅಭ್ಯರ್ಥಿಯೇ ಇಲ್ಲಿ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್ ಸೋಲು ಅನುಭವಿಸಿದೆ. ಈ ಬಾರಿಯ ವಿಧಾನಸಭೆ ಚುನಾವಣೆ ಹೊರತುಪಡಿಸಿ ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ಸೇತರ ಪಕ್ಷಗಳೇ ಇಲ್ಲಿ ಮೇಲುಗೈ ಸಾಧಿಸಿವೆ.
-ಚಂದ್ರು ಅಂಬಿಗೇರ