ಅನಿರೀಕ್ಷಿತ ಅಂಗವೈಕಲ್ಯಕ್ಕೆ ಅಂಜದ ಬಾಲೆ
ಗದಗ: ಅವಳು 11 ವರ್ಷದ ಬಾಲೆ. ಎಲ್ಲರಂತೆ ಓದಬೇಕು, ಬರೆಯಬೇಕು ಎನ್ನುವ ತವಕದಲ್ಲಿದ್ದಾಳೆ. ಆದರೆ, 5 ವರ್ಷಗಳ ಹಿಂದೆ ವಕ್ಕರಿಸಿದ ಜ್ವರ ಆಕೆಯ ಕಾಲುಗಳು ಹಾಗೂ ಮಾತನ್ನೇ ಕಸಿದುಕೊಂಡು ಜೀವ ಹಿಂಡುತ್ತಿದೆ.
ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದ ಸುಮಿತ್ರಾ ಲಮಾಣಿಯ ನೋವಿನ ಕಥೆ ಇದು. ಏನೂ ಅರಿಯದ ಬಾಲೆ ಒಂದೇ ಒಂದು ಜ್ವರದಿಂದಾಗಿ ಈಗ ಅಂಗವಿಕಲೆಯಂತೆ ಬದುಕಬೇಕಾಗಿದೆ.
ಸುಮಿತ್ರಾ 4 ವರ್ಷದವರೆಗೂ ಎಲ್ಲರಂತೆಯೇ ಇದ್ದಳು. ಮುದ್ದಾಗಿ ಮಾತನಾಡುತ್ತಿದ್ದಳು. ಕುಲುಕುಲು ಓಡಾಡುತ್ತಾ ಆಟವಾಡುತ್ತಾ ಹೆತ್ತವರ ಕಣ್ಮಣಿಯಾಗಿದ್ದಳು. ಆಕಸ್ಮಿಕವಾಗಿ ಜ್ವರ ಬಂತು. ನಾಲ್ಕೈದು ದಿನಗಳಾದರೂ ಕಮ್ಮಿಯಾಗಲೇ ಇಲ್ಲ. ಕಂಗಾಲಾದ ಪಾಲಕರು ಸ್ಥಳೀಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದರು. ಜ್ವರ ಕಮ್ಮಿಯಾಯಿತು. ಆದರೆ, ಹೆತ್ತವರಿಗೆ ದೊಡ್ಡ ಆಘಾತವೇ ಕಾದಿತ್ತು. ಮಗುವಿನ ಕೈಗಳು ಶಕ್ತಿ ಕಳೆದು ಕೊಂಡವು. ಮಾತು ಸ್ಥಗಿತಗೊಂಡಿತು!
ಎದೆಗುಂದಿಲ್ಲ: ಕೆಲಸ ಮಾಡುತ್ತಿದ್ದ ಕೈಗಳು ಒಮ್ಮೆಲೇ ನಿಷ್ಕ್ರಿಯವಾಗಿದ್ದರಿಂದ ಈ ಬಾಲಕಿಯೂ ಆರಂಭದಲ್ಲಿ ಸಹಜವಾಗಿಯೇ ಆತಂಕಪಟ್ಟಿದ್ದಾಳೆ. ಆದರೆ, ಪರಿಸ್ಥಿತಿಗೆ ಒಗ್ಗಿಕೊಂಡು, ಕೈಗಳಲ್ಲಿ ಮಾಡಬೇಕಾದ ಕೆಲಸಗಳಿಗೆ ಕಾಲುಗಳನ್ನೇ ಬಳಸಲು ಆರಂಭಿಸಿದಳು. ಸದ್ಯ ತನ್ನ ಎಡಗಾಲಿನಿಂದ ಊಟ ಮಾಡುವ ಈಕೆ, ಬರೆಯಲೂ ಅದೇ ಕಾಲನ್ನು ಬಳಸುತ್ತಿದ್ದಾಳೆ. ಕೈಗಳು ನಿಷ್ಕ್ರಿಯವಾಗಿದ್ದರೂ ಕಲಿಯುವ ಆಸಕ್ತಿ ಕುಗ್ಗಿಲ್ಲ ಎಂಬುದನ್ನು ಆಕೆ, ತನ್ನನ್ನು ನೋಡಲು ಬರುವ ಎಲ್ಲರಿಗೂ ಕಾಲಿನಿಂದಲೇ ಬರೆದು ತೋರಿಸಿ, ಸಾಬೀತು ಮಾಡುತ್ತಿದ್ದಾಳೆ.
ಬಡ ಕುಟುಂಬ: ಗ್ರಾಮದ ರೂಪ್ಲಪ್ಪ ಹಾಗೂ ದೇವಕ್ಕ ದಂಪತಿಗೆ ನಾಲ್ವರು ಮಕ್ಕಳು. ಸುಮಿತ್ರಾ ಎರಡನೆಯವಳು. ಸದ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾಳೆ. ಬಾಲಕಿಗೆ ಚಿಕಿತ್ಸೆ ಕೊಡಿಸಲು ಈಕೆಯ ಪಾಲಕರು ರಾಜ್ಯದ ಹಲವಾರು ಆಸ್ಪತ್ರೆಗಳಿಗೆ ಸುತ್ತಾಡಿ ಸುಸ್ತಾಗಿದ್ದಾರೆ. ರೈತರ ಜಮೀನುಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿರುವ ಅವರ ಸಂಪಾದನೆ ನಿತ್ಯದ ಹೊಟ್ಟೆಪಾಡಿಗೇ ಹರೋಹರ. ಉತ್ತಮ ಚಿಕಿತ್ಸೆ ಕೊಡಿಸಿದರೆ ತಮ್ಮ ಮಗಳು ಸಂಪೂರ್ಣ ಗುಣವಾಗುವ ನಂಬಿಕೆ ಹಾಗೂ ಭರವಸೆ ಇದ್ದು, ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದಾರೆ.
ನೆರವಾಗುವಿರಾ?
ದೇವಕ್ಕ ರೂಪ್ಲಪ್ಪ ಲಮಾಣಿ, ಎಸ್.ಬಿ. ಖಾತೆ ನಂ. 17140607395, ಐಎಫ್ಎಸಿ ಕೋಡ್: ಕೆವಿಜಿ 0006403, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಶಿರಹಟ್ಟಿ ಶಾಖೆ. ಹೆಚ್ಚಿನ ಮಾಹಿತಿಗಾಗಿ ರೂಪ್ಲಪ್ಪ (ಮೊ. 9743209105), ಉಮೇಶ (9964052307), ಎಸ್.ಎಸ್. ಮ್ಯಾಗೇರಿ (9986847182) ಅವರನ್ನು ಸಂಪರ್ಕಿಸಬಹುದು.
ಮಗಳ ಆರೋಗ್ಯ ಸಮಸ್ಯೆ ಪರಿಹರಿಸಲು ಹಲವಾರು ವೈದ್ಯರ ಬಳಿ ತೆರಳಿದ್ದೇವೆ. ಅವರು ಇದಕ್ಕೆ ಸ್ಪಷ್ಟವಾದ ಕಾರಣ ಹೇಳುತ್ತಿಲ್ಲ. ಬೆಂಗಳೂರಿನ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸೂಚಿಸುತ್ತಿದ್ದಾರೆ. ನಮ್ಮ ಬಳಿ ಅಷ್ಟೊಂದು ಹಣವಿಲ್ಲ. ನಾವು ಯಾರನ್ನು ಕೇಳುವುದು? ತಿಳಿಯದಾಗಿದೆ.
ಟಿ ರೂಪ್ಲಪ್ಪ ಲಮಾಣಿ, ಬಾಲಕಿಯ ತಂದೆ
ಎಲ್ಲರಂತೆ ಓಡಾಡಿಕೊಂಡಿದ್ದ ಮಗಳು ಈಗ ಅಸಹಾಯಕಳಾಗಿರುವುದು ತಾಯಿಯಾದ ನನಗಂತೂ ತುಂಬ ನೋವಿನ ಸಂಗತಿ. ಈಕೆ ಗುಣಮುಖಳಾಗಬೇಕಾದರೆ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಂತೆ. ನಾವು ಬಡವರು, ದುಡಿದು ತಿನ್ನುವವರು. ಅಷ್ಟೊಂದು ಹಣ ಎಲ್ಲಿಂದ ತರುವುದು? ಯಾರಾದರೂ ಹಣವಿದ್ದವರು ಸಹಾಯ ಮಾಡಿದರೆ ಅನುಕೂಲವಾಗುತ್ತದೆ.
ಟಿ ದೇವಕ್ಕ ಲಮಾಣಿ, ಮಗುವಿನ ತಾಯಿ
-ಶಿವಕುಮಾರ ಕುಷ್ಟಗಿ