ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗೆಲವಿನ ಅಂತರ ದ್ವಿಗುಣ

Vishwanath S
Updated On : 17 Mar 2014, 1:18 am

ತುಮಕೂರು: ಈ ಬಾರಿ ನನ್ನ ಗೆಲವಿನ ಅಂತರ ದ್ವಿಗುಣವಾಗಲೇಬೇಕು. ಅದು ಆಗೇ ಆಗುತ್ತದೆ ಎಂದು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾನುವಾರ ತುಮಕೂರಿನ ಸಿದ್ದಗಂಗಾ ಶ್ರೀಗಳಿಗೆ ದ್ರೌಪದಿ ಕುರಿತು ತಾವು ರಚಿಸಿದ ಸಿರಿಮುಡಿ ಪರಿಕ್ರಮಣ ಕೃತಿ ನೀಡಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 53 ಸಾವಿರಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಜಯ ಗಳಿಸಿದ್ದೆ. ಈ ಬಾರಿ ಅದು ದ್ವಿಗುಣಗೊಳ್ಳಲಿದೆ. ನಾಮಪತ್ರ ಸಲ್ಲಿಸುವುದಕ್ಕಿಂತ ಮುಂಚೆ ಧಾರ್ಮಿಕ ಗುರುಗಳ ಆಶೀರ್ವಾದ ಪಡೆಯುವುದನ್ನು ಮೊದಲಿಂದಲೂ ನಡೆಸಿಕೊಂಡು ಬಂದಿದ್ದೇನೆ. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದೇನೆ ಎಂದರು.
ದಲಿತರು ಸಿಎಂ ಆಗಲು ಸಾಧ್ಯ
ಚಾಮರಾಜನಗರ: ಕಾಂಗ್ರೆಸ್‌ನಲ್ಲಿ ಮಾತ್ರ ದಲಿತರು ಸಿಎಂ ಆಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.   ಕೊಳ್ಳೇಗಾಲದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ  ಭಾರತ್ ನಿರ್ಮಾಣ್ ಜಾಥಾ ಸಮಾರೋಪದಲ್ಲಿ  ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ  ಮಾತನಾಡಿದರು.   ಕಾಂಗ್ರೆಸ್ ಮೇಲಿನ ಹೊಟ್ಟೆ ಉರಿಯಿಂದಾಗಿ ಕೆಲವರು ಕಾಂಗ್ರೆಸ್  ಪಕ್ಷದಲ್ಲಿ ದಲಿತರಿಗೆ ಸಿಎಂ ಆಗುವ ಅವಕಾಶ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಶ್ರೀನಿವಾಸ ಪ್ರಸಾದ್, ಎಚ್.ಸಿ. ಮಹದೇವಪ್ಪ, ಕೇಂದ್ರದಲ್ಲಿ ಮಲ್ಲಿಕಾರ್ಜುನಖರ್ಗೆ ಸಚಿವರಾಗಿದ್ದಾರೆ. ದಲಿತ ಜನಾಂಗಕ್ಕೆ ಸೇರಿದ ಡಾ. ಜಿ. ಪರಮೇಶ್ವರ್ ರಾಜ್ಯ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಸಿಎಂ ಆಗುವ ಅವಕಾಶ ಎಂದು ತಿಳಿಸಿದರು.
18ರಿಂದ 20 ಸ್ಥಾನ: ನಾನು ಸಮೀಕ್ಷೆಗಳನ್ನು ನಂಬುವುದಿಲ್ಲ. ಆದರೆ, ನಮ್ಮ ಲೆಕ್ಕಚಾರದ ಪ್ರಕಾರ ರಾಜ್ಯದಲ್ಲಿ 18ರಿಂದ 20 ಸ್ಥಾನಗಳನ್ನು ಕಾಂಗ್ರೆಸ್ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ನಮ್ಮಿಂದ ತಪ್ಪಾಗಿದೆ'
ನವದೆಹಲಿ: ತೃತೀಯ ರಂಗ ರಚನೆ ಪ್ರಯತ್ನದಲ್ಲಿ ಆರಂಭದಲ್ಲೇ ಮುಗ್ಗರಿಸಿ ಮುಖಭಂಗ ಅನುಭವಿಸಿದ ಸಿಪಿಐ, 'ಪ್ರಾದೇಶಿಕ ಪಕ್ಷಗಳೊಂದಿಗೆ ಚುನಾವಣೆಗೆ ಮುನ್ನವೇ ಇಂಥ ಮೈತ್ರಿಕೂಟ ರಚಿಸಲು ಮುಂದಾದದ್ದು ದೊಡ್ಡ ತಪ್ಪು' ಎಂದು ಒಪ್ಪಿಕೊಂಡಿದೆ.
ತೃತೀಯ ರಂಗದ ಬಹಳಷ್ಟು ಪಕ್ಷಗಳು ಪ್ರಾದೇಶಿಕ ಪಕ್ಷಗಳು. ಅವುಗಳಿಗೆ ತಾವು ಎಷ್ಟು ಸ್ಥಾನ ಹೆಚ್ಚಿಸಿಕೊಳ್ಳಬಹುದು ಎನ್ನುವ ಕಡೆಗೇ ಗಮನ. ಹೀಗಾಗಿ ಚುನಾವಣೆಗೆ ಮುನ್ನವೇ ಅಂಥ ಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆ ಮಾತುಕತೆಗೆ ಎಡಪಕ್ಷಗಳು ಮುಂದಾಗಬಾರದಿತ್ತು. ಮತದಾನದ ಫಲಿತಾಂಶ ಪ್ರಕಟವಾದ ನಂತರವಷ್ಟೇ ತೃತೀಯ ರಂಗ ರಚನೆ ಪ್ರಯತ್ನ ನಡೆಸಬೇಕಿತ್ತು ಎಂದು ಸಿಪಿಐ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ಧನ್ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಆರಂಭದಲ್ಲೇ ತೃತೀಯ ರಂಗ ರಚನೆ ಪ್ರಯತ್ನಗಳಿಗೆ ಹಿನ್ನಡೆ ಆದದ್ದು ಎಡಪಕ್ಷಗಳಿಗೆ ಮುಖಭಂಗ ಅಲ್ಲ ಎಂದು ಹೇಳಿಕೊಂಡಿರುವ ಅವರು, ಪ್ರಾದೇಶಿಕ ಪಕ್ಷಗಳೊಂದಿಗೆ ಚುನಾವಣೆಪೂರ್ವ ಹೊಂದಾಣಿಕೆ ಮಾಡಿಕೊಳ್ಳುವುದೇ ತಪ್ಪು ಎಂದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವರ್ತನೆ ಬಗ್ಗೆ ನಿರಾಸೆ ವ್ಯಕ್ತಪಡಿಸಿರುವ ಬರ್ಧನ್, 'ನಮ್ಮನ್ನು ಮೊದಲು ಆಮಂತ್ರಿಸಿದ್ದು ಎಐಎಡಿಎಂಕೆ. ಮಾತುಕತೆ ಶುರುವಾದ ನಂತರ ನಮಗೆ ತಮಿಳುನಾಡಿನಲ್ಲಿ ಕೇವಲ ಒಂದು ಸ್ಥಾನ ನೀಡಲು ಮುಂದಾದರು. ನಾವು ಅವರಿಗೆ ಧನ್ಯವಾದ ಹೇಳಿ, ನಮಗೆ ಒಂದು ಸ್ಥಾನದ ಅವಶ್ಯಕತೆ ಇಲ್ಲ ಎಂದು ಹೇಳಿ ಬಂದೆವು' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement