ಟಿಬೆಟಿಯನ್ನರು ನಿರಾಶ್ರಿತರೋ, ಭಾರತೀಯರೋ?
ಮುಂಡಗೋಡ: ತಾಲೂಕಿನಲ್ಲಿ ಟಿಬೆಟಿಯನ್ನರು ನಿರಾಶ್ರಿತರೋ ಅಥವಾ ಭಾರತೀಯರೋ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ. ಸರ್ಕಾರ ಮತ್ತು ಅಧಿಕಾರಿ ವರ್ಗ ಸ್ಥಳೀಯರಿಗೆ ಒಂದು, ಟಿಬೆಟಿಯನ್ನರಿಗೆ ಇನ್ನೊಂದು ಕಾನೂನು ಅನುಸರಿಸುತ್ತಿರುವುದೇ ಇದಕ್ಕೆ ಕಾರಣ. ಟಿಬೆಟಿಯನ್ನರು ಹಲವು ಅಕ್ರಮಗಳಲ್ಲಿ ತೊಡಗಿದ್ದರೂ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರನ್ನು ಕೆರಳಿಸಿದೆ.
ಟಿಬೆಟಿಯನ್ನರು ನಿಯಮ ಉಲ್ಲಂಘಿಸುತ್ತಿದ್ದರೂ ಯಾರೂ ಕ್ಯಾರೇ ಎನ್ನುತ್ತಿಲ್ಲ. ಟಿಬೆಟಿಯನ್ನರಿಗೆ ನೀಡಲಾದ ಬಹುತೇಕ ಕೃಷಿ ಭೂಮಿ ಈಗ ಅನಧಿಕೃತ ಕಟ್ಟಡಗಳಿಂದ ಆವೃತವಾಗಿದೆ. ಕೃಷಿ ಭೂಮಿಯನ್ನು ವಿರೂಪಗೊಳಿಸಲಾಗಿದೆ. ಐದು ದಶಕಗಳ ಹಿಂದೆ ನಿರಾಶ್ರಿತರಾಗಿ ಬಂದವರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸರ್ಕಾರ ಷರತ್ತುಬದ್ಧವಾಗಿ 4045 ಎಕರೆ ಕೃಷಿ ಭೂಮಿ ನೀಡಿತ್ತು. ಈಗ ಬಹುತೇಕ ಭೂಮಿಯಲ್ಲಿ ಕಟ್ಟಡಗಳೇ ಇವೆ. ಬೆರಳೆಣಿಕೆಯಷ್ಟು ಟಿಬೆಟಿಯನ್ನರು ಮಾತ್ರ ಕೃಷಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಉಳಿದ ಜಾಗೆ ಬೀಳು ಬಿದ್ದಿದೆ.
ಭೂಮಿ ವಿರೂಪ: ಎಲ್ಲೆಂದರಲ್ಲಿ ಬೃಹದಾಕಾರದ ಐಷಾರಾಮಿ ಕಟ್ಟಡಗಳು ತಲೆ ಎತ್ತಿವೆ. ಕೃಷಿ ಚಟುವಟಿಕೆ ಒಕ್ಕಲುತನ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಈ ಭೂಮಿ ಬಳಸಬೇಕಿದ್ದರೆ ಪುನರ್ವಸತಿ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಪ್ರತಿ ವರ್ಷ ನಿಯಮಾನುಸಾರ ಸರ್ಕಾರಕ್ಕೆ ಲೀಸ್ ಹಣ ಪಾವತಿಸಬೇಕು. ಆದರೆ, ಕಟ್ಟಡ ನಿರ್ಮಾಣಕ್ಕೂ ಪರವಾನಗಿ ಪಡೆದಿಲ್ಲ. ಹಲವು ವರ್ಷಗಳಿಂದ ಸರ್ಕಾರಕ್ಕೆ ಕಂದಾಯವನ್ನೂ (ಸೆಸ್) ಪಾವತಿಸಿಲ್ಲ. ತಾತ್ಕಾಲಿಕ ವಸತಿ ಭೂಮಿಯಲ್ಲಿ ವಸತಿ ಗೃಹ, ಆಸ್ಪತ್ರೆ, ಶಾಲೆ, ಬ್ಯಾಂಕ್ - ಈ ನೆಪದಲ್ಲಿ ಕಾನೂನು ಗಾಳಿಗೆ ತೂರಿ ಐಷಾರಾಮಿ ಬಂಗಲೆ ನಿರ್ಮಿಸುತ್ತಿದ್ದಾರೆ. ಭಾರತೀಯರು ಸಣ್ಣ ಮನೆ ಕಟ್ಟಿಸಲೂ ಸ್ಥಳೀಯ ಸಂಸ್ಥೆ ಪರವಾನಗಿ ಕಡ್ಡಾಯ. ಅನಧಿಕೃತವಾಗಿ ಕಾಮಗಾರಿ ಆರಂಭಿಸಿದರೆ ದಂಡ ತೆರಬೇಕು. ಈ ಯಾವ ನಿಯಮವೂ ಟಿಬೆಟಿಯನ್ನರಿಗೆ ಅನ್ವಯಿಸುವುದಿಲ್ಲ.
ಮುಂಡಗೋಡ ತಾಲೂಕಿಗೆ ಹಿನ್ನಡೆ: ಟಿಬೆಟಿಯನ್ನರು ಬಳಸುವ ಮೊಬೈಲ್ 40-50 ಸಾವಿರ ಮೌಲ್ಯದವು. ತಿರುಗಾಡಲು ಐಷಾರಾಮಿ ಕಾರುಗಳೇ ಬೇಕು. ಹೈ-ಫೈ ಜೀವನ ಶೈಲಿ ಇವರದ್ದು. ಮುಂಡಗೋಡ ಪಟ್ಟಣದಲ್ಲಿ ಯಾರಲ್ಲೂ ಇರದ ಐಷಾರಾಮಿ ಕಾರುಗಳು ಟಿಬೆಟಿಯನ್ ಕಾಲನಿಯಲ್ಲಿವೆ. ಆದರೆ, ಇದರಿಂದ ತಾಲೂಕಿಗೆ ನಷ್ಟವೇ ಹೊರತು, ಲಾಭವೇನೂ ಇಲ್ಲ. ಇಲ್ಲಿನ ಬ್ಯಾಂಕ್‌ಗಳಲ್ಲೂ ಟಿಬೆಟಿಯನ್ನರಿಂದಲೇ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತದೆ. ಬ್ಯಾಂಕ್ ವ್ಯವಹಾರದ ಆಧಾರದಲ್ಲಿ ಮುಂಡಗೋಡ ತಾಲೂಕನ್ನು ಶ್ರೀಮಂತ ಎಂದು ಪರಿಗಣಸಿರುವ ಸರ್ಕಾರ, ನಂಜುಂಡಪ್ಪ ವರದಿಯಲ್ಲಿರುವ ಹಿಂದುಳಿದ ತಾಲೂಕುಗಳ ಪಟ್ಟಿಯಿಂದ ಇದನ್ನು ಕೈಬಿಟ್ಟಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮುಂಡಗೋಡ ತಾಲೂಕು ಸಾಕಷ್ಟು ಹಿಂದುಳಿದಿದ್ದರೂ ಟಿಬೆಟಿಯನ್ನರಿಗೆ ಆಶ್ರಯ ನೀಡಿದ ಕಾರಣಕ್ಕಾಗಿಯೇ ಶ್ರೀಮಂತ ಎಂದು ಕರೆಸಿಕೊಂಡಿದೆ. ಇಲ್ಲಿ ವಾಸಿಸುವ ಟಿಬೇಟಿಯನ್ನರು ಹುಬ್ಬಳ್ಳಿ ಮುಂತಾದ ಕಡೆಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ. ಇದು ಸ್ಥಳೀಯ ವ್ಯಾಪಾರ-ವಹಿವಾಟಿಗೂ ಹಿನ್ನಡೆ ಮಾಡಿದೆ.
ಅಕ್ರಮ ಚಟುವಟಿಕೆ: ಟಿಬೆಟಿಯನ್ ಕಾಲನಿಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪವಿದೆ. ಕೆಲ ಮಾದಕ ವಸ್ತುಗಳೂ ಇಲ್ಲಿ ಹರಿದಾಡುತ್ತವೆ ಎಂಬ ದೂರುಗಳಿವೆ. ಸಂಬಂಧಿಸಿದ ಇಲಾಖೆಗಳು ಇವೆಲ್ಲದರ ಬಗ್ಗೆ ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕು ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹ.
ಟಿಬೆಟಿಯನ್ ಕಾಲನಿಯಲ್ಲಿ ಅವರಿಗೆ ಭೂಮಿ ನೀಡಿರುವುದು ಕೇವಲ ಲೀಸ್‌ಗಾಗಿ. ವಾಸಿಸಲು ತಾತ್ಕಾಲಿಕ ಮನೆ ನಿರ್ಮಿಸಿಕೊಳ್ಳುವುದು ಹೊರತುಪಡಿಸಿ ಕಟ್ಟಡ, ಮೊನೆಸ್ಟ್ರಿಗಳನ್ನು ಕಟ್ಟುವುದಕ್ಕೂ ಅವಕಾಶವಿಲ್ಲ. ಹಲವು ವರ್ಷಗಳಿಂದ ಟಿಬೆಟಿಯನ್ನರು ಸರ್ಕಾರಕ್ಕೆ ಕಂದಾಯವನ್ನೂ ಕಟ್ಟಿಲ್ಲ. ಇವೆಲ್ಲದರ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಟಿ. ನಾರಾಯಣ ರಾವ್, ಮುಂಡಗೋಡ ತಹಸೀಲ್ದಾರ್
-ಸಂತೋಷ ದೈವಜ್ಞ