ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೆಳೆಹಾನಿ ಪರಿಹಾರಕ್ಕೆ ಚುನಾವಣೆ ಪ್ರಹಾರ

Vishwanath S
Updated On : 17 Mar 2014, 1:12 am

ಬೆಂಗಳೂರು: ರಾಜ್ಯದಲ್ಲಿ ಆಲಿಕಲ್ಲು ಮಳೆಯಿಂದ ಬೆಳೆ ಕಳೆದುಕೊಂಡ ರೈತನ ಗೋಳು ಹೇಳತೀರದಾಗಿದೆ.
ಸಾಮಾನ್ಯ ರೈತರು ಬೆಳೆ ಕಳೆದುಕೊಂಡಾಗ ಸಾಂತ್ವನ ಎನ್ನುವ ರೀತಿಯಲ್ಲಿ ಸರ್ಕಾರ ಬೆಳೆ ಪರಿಹಾರ ನೀಡುತ್ತದೆ. ಆದರೆ ಬೆಳೆ ಪರಿಹಾರಕ್ಕೆಂದು ಸರ್ಕಾರ ಮೀಸಲಿಟ್ಟಿದ್ದ ಅನುದಾನ ಖಾಲಿಯಾಗಿದೆ. ಆದರೂ ಹೇಗಾದರೂ ಮಾಡಿ ಬೆಳೆ ಪರಿಹಾರಕ್ಕೆ ಅನುದಾನ ಹೊಂದಿಸಿ  ನೀಡುತ್ತೇವೆ ಎಂದು ಸರ್ಕಾರ ಮುಂದಾದರೂ ಅದಕ್ಕೆ ಚುನಾವಣಾ ಆಯೋಗ ಬಿಡುತ್ತಿಲ್ಲ.ಹೀಗಾಗಿ ಪಸಲು ಕಳೆದುಕೊಂಡು ಪರದಾಡುತ್ತಿರುವ ರೈತರನ್ನು ಕೇಳುವವರೇ ಇಲ್ಲದಂತಾಗಿದೆ. ವಾರದಿಂದೀಚಿಗೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ರಾಜ್ಯದಲ್ಲಿ 20ಮಂದಿ ಸಾವಿಗೀಡಾಗಿದ್ದು, 547 ಜಾನುವಾರುಗಳ ಜೀವ ಹಾನಿಯಾಗಿದೆ.
ಅಷ್ಟೇ ಅಲ್ಲ, 9 ಜಿಲ್ಲೆಗಳಲ್ಲಿ ಸುಮಾರು 700ಕೋಟಿ ಮೊತ್ತದ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿದೆ. ಆದರೆ ಬೆಳೆ ನಷ್ಟಕ್ಕೆ ಸರ್ಕಾರ ಪರಿಹಾರ ನೀಡುತ್ತಿಲ್ಲ. ಏಕೆಂದರೆ, ಬೆಳೆ ಪರಿಹಾರಕ್ಕೆಂದು ಕೇಂದ್ರ ಸರ್ಕಾರ ನೀಡಿದ್ದ ವಿಶೇಷ ಅನುದಾನ 70ಕೋಟಿ ನವೆಂಬರ್‌ನಲ್ಲೇ ಖಾಲಿಯಾಗಿದೆ. ಹೀಗಾಗಿ ಬೆಳೆ ಪರಿಹಾರಕ್ಕಾಗಿ ಸರ್ಕಾರ ಮತ್ತೆ ಕೇಂದ್ರ ಸರ್ಕಾರದ ಮೊರೆ ಹೋಗಬೇಕಿದೆ. ಹಾಗೊಂದು ವೇಳೆ ಕೇಂದ್ರದಿಂದಲೇ ಅಥವಾ ರಾಜ್ಯದ ಅನುದಾನದಲ್ಲೋ ಹೊಂದಾಣಿಕೆ ಮಾಡಿ ಪರಿಹಾರ ನೀಡಲು ಮುಂದಾರರೂ ಚುನಾವಣಾ ಆಯೋಗದ  ನೀತಿ ಸಂಹಿತೆ ಅಡ್ಡಗಾಲು ಹಾಕಿದೆ.
ನೀತಿ ಸಂಹಿತೆ ಜಾರಿ ಕಾರಣ ಸರ್ಕಾರ ಸಾವು, ನೋವು, ಮನೆ ಹಾನಿ ಹೊರತಾಗಿ ಉಳಿದ ನಷ್ಟಗಳಿಗೆ ಪರಿಹಾರ ನೀಡಲು ಆಯೋಗ ಅವಕಾಶ ನೀಡುತ್ತಿಲ್ಲ. ಹೀಗಾಗಿ ಬೆಳೆ ಹಾನಿಗೆ ಪರಿಹಾರ ನೀಡುವ ಬಗ್ಗೆ ಸಲಹೆ ಕೇಳಿದ್ದ  ಕಂದಾಯ ಇಲಾಖೆಗೆ ಆಯೋಗ ಈತನಕ ಅನುಮತಿ ನೀಡದೆ ಹೆಚ್ಚಿನ ವಿವರ ಕೇಳಿ ಕಾಲ ತಳ್ಳುತ್ತಿದೆ.
ನೋವು ತಂದ ನೀತಿ ಸಂಹಿತೆ: ಹಾಗೆ ನೋಡಿದರೆ ಪ್ರಕೃತಿ ವಿಕೋಪ ಮತ್ತು ತರ್ತು ಪರಿಹಾರಗಳಿಗೆ ಜನಪ್ರತಿನಿಧಿ ಕಾಯ್ದೆಯಾಗಲಿ, ಅದರ ಪ್ರಕಾರ ಜಾರಿಯಾಗುವ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಆದರೆ ಚುನಾವಣೆಗಾಗಿ ಸರ್ಕಾರ ರೈತರಿಗೆ ಪರಿಹಾರ ನೆಪದಲ್ಲಿ ಆಮಿಷ ಒಡ್ಡಬಹುದೆಂದು ಶಂಕಿಸಿ ಆಯೋಗ ಪರಿಹಾರಕ್ಕೆ ಒಪ್ಪಿಗೆ ನೀಡಿಲ್ಲ.
ಸಾಮಾನ್ಯ ಪರಿಹಾರ ಹಣ, ಸೌಲಭ್ಯವನ್ನು ನೊಂದವರಿಗೆ ಈತನಕ ಸ್ಥಳೀಯ ಜನಪ್ರತಿನಿಧಿಗಳೇ ವಿತರಿಸುತ್ತಿದ್ದರು. ಈಗ ನೀತಿ ಸಂಹಿತೆ ಇರುವುದರಿಂದ ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಉಪ ತಹಸೀಲ್ದಾರ್ ಮೂಲಕ ಹಂಚಿಕೆಯಾಗುತ್ತದೆ. ಆದಾಗ್ಯೂ ಆಯೋಗ ಬೆಳೆ ಪರಿಹಾರಕ್ಕೆ ಒಪ್ಪಿಗೆ ನೀಡಿಲ್ಲ.
ನಷ್ಟ ಸಮೀಕ್ಷೆಯೂ ನಡೆಯುತ್ತಿಲ್ಲ: ಬಿಜಾಪುರ, ಬೆಳಗಾವಿ, ಬಳ್ಳಾರಿ, ಯಾದಗಿರಿ, ಬೀದರ್, ಬಾಗಲಕೋಟೆ, ರಾಯಚೂರು, ಗುಲ್ಬರ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಕಬ್ಬು, ಹತ್ತಿ, ಶೇಂಗಾ, ಪಪ್ಪಾಯಿ, ದಾಳಿಂಬೆ, ಬಾಳೆ, ಜೋಳ, ಮೆಕ್ಕೆ ಜೋಳ ಸೇರಿದಂತೆ ಅನೇಕ ರೀತಿಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನೆಲ ಕಚ್ಚಿವೆ.  ಪ್ರಾಥಮಿಕ ಸಮೀಕ್ಷೆ ಪ್ರಕಾರ 1.70ಲಕ್ಷ ಹೆಕ್ಟೇರ್ ಕೃಷಿ ಬೆಳೆ ನಷ್ಟವಾಗಿದೆ. 16ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಅಂದರೆ 243ಕೋಟಿ ಮೊತ್ತದ ಕೃಷಿ ಬೆಳೆ ನಷ್ಟವಾಗಿದ್ದು, 436 ಕೋಟಿ ತೋಟಗಾರಿಕೆ ಬೆಳೆ ನಷ್ಟವಾಗಿದೆ.
ಆದರೆ ವಾಸ್ತದಲ್ಲಿ ಪ್ರತಿ ಜಿಲ್ಲೆಯಲ್ಲೂ 100ಕೋಟಿಗೂ ಹೆಚ್ಚಿನ ಮೊತ್ತದ ಬೆಳೆ ನಷ್ಟವಾಗಿದ್ದು, ಈ ಸಮೀಕ್ಷೆ ಹೊಬಳಿ ಮಟ್ಟದಲ್ಲಿ ಇನ್ನೂ ನಡೆಸಬೇಕಿದೆ. ಆದರೆ ಬೆಳೆ ಪರಿಹಾರಕ್ಕೆ ಅನುಮತಿ ಸಿಕ್ಕಿಲ್ಲದ ಕಾರಣ ಹೋಬಳಿ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿಲ್ಲ. ಈ ಮಧ್ಯೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬೆಳೆ ಪರಿಹಾರ ನೀಡಿ ರೈತರನ್ನು ರಕ್ಷಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿವೆ. ಇದಕ್ಕೆ ಸರ್ಕಾರ ಕೂಡ ಸಿದ್ಧವಿದೆ. ಆದರೆ ಆಯೋಗ ಒಪ್ಪಿಗೆ ನೀಡದೆ ಸರ್ಕಾರ ಏನೂ ಮಾಡದಂತಾಗಿದೆ.
ಚುನಾವಣಾ ನೀತಿ ಸಂಹಿತೆ ಜನರಿಗೆ ಅನುಕೂಲ ಮಾಡಬೇಕು. ಆದರೆ ಅದು ರೈತರು ಬೆಳೆ ಪರಿಹಾರ ಪಡೆಯಲು ಅಡ್ಡಿಯಾದರೆ ಹೇಗೆ? ಇದು ರೈತರ ಬದುಕಿನ ಪ್ರಶ್ನೆ. ಆದ್ದರಿಂದ ಕೂಡಲೇ ಬೆಳೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗದ ಮುಂದೆಯೇ ಧರಣಿ ನಡೆಸುತ್ತೇವೆ.
- ಕುರುಬೂರು ಶಾಂತಕುಮಾರ್, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ
ಜನ, ಜಾನುವಾರ ಸಾವು, ನೋವಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಯಾವುದೇ ಅಭ್ಯಂತರ ಇಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಬೆಳೆ ಮತ್ತು ಇತರ ಹಾನಿಗೆ ಪರಿಹಾರ ನೀಡುವ ಬಗ್ಗೆ ಹೆಚ್ಚಿನ ವಿವರ ಕೇಳಿದೆಯೇ ವಿನ. ಇನ್ನೂ ಯಾವುದೇ ಸಲಹೆ ನೀಡಿಲ್ಲ.
- ಗೌರವ್‌ಗುಪ್ತಾ, ಕಂದಾಯ ಇಲಾಖೆ ಕಾರ್ಯದರ್ಶಿ


-ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement