ಮರಕಾಲು, ಬೆನ್ನಲ್ಲಿ 32 ಕೆ.ಜಿ. ಅಕ್ಕಿ ಮೂಟೆ ಹೊರಟರು 600 ಕಿಮೀ ದೂರದ ಶ್ರೀಶೈಲಕ್ಕೆ
ಮುಧೋಳ: ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ಕಾಲ್ನಡಿಗೆ ಮೂಲಕ ತೆರುಳುವುದು ಸರ್ವೇ ಸಾಮಾನ್ಯ. ಆದರೆ ತಾಲೂಕಿನ ಹಲಗಲಿ ಗ್ರಾಮದ ಯುವಕರಿಬ್ಬರು 32 ಕೆ.ಜಿ. ಅಕ್ಕಿ ಮೂಟೆ ಹೊತ್ತು ಮರಗಾಲಲ್ಲಿ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಹೊರಟಿದ್ದಾರೆ.
ಕೆಂಪಯ್ಯ ಹಿರಕಣ್ಣವರ್(28) ಹಾಗೂ ಹನುಮಂತ ಹೂವಣ್ಣವರ ಎಂಬ ಯುವಕರು ಈ ಸಾಹಸಕ್ಕೆ ಮುಂದಾಗಿದ್ದಾರೆ. ಕೆಂಪಯ್ಯ ಅವರು ಕಳೆದ ವರ್ಷ 25 ಕೆ.ಜಿ. ಅಕ್ಕಿ ಮೂಟೆ ಹೊತ್ತು ಮರಗಾಲಲ್ಲಿ ಪಾದಯಾತ್ರೆ ಮೂಲಕ ಪ್ರಥಮ ಬಾರಿಗೆ ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದು ಬಂದಿದ್ದರು. ಈ ಬಾರಿ ಕೆಂಪಯ್ಯನಿಗೆ ಸಾಥ ನೀಡಲು ಹನುಮಂತ ಹೂವಣ್ಣವರ ಎಂಬ ಇನ್ನೊಬ್ಬರು ಮರಗಾಲು ಕಟ್ಟಿಕೊಂಡು ತೆರಳುತ್ತಿದ್ದಾರೆ. ಇವರ ಜೊತೆ ಹಲಗಲಿ ಗ್ರಾಮದಿಂದ ನೂರಕ್ಕೂ ಅಧಿಕ ಭಕ್ತರು ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಹೊರಟಿದ್ದಾರೆ. ಮಾ.16ರಂದು ಹಲಗಲಿಯಿಂದ ಶ್ರೀಶೈಲಕ್ಕೆ ಹೊರಟಿರುವ ಭಕ್ತರು ದಿನಕ್ಕೆ ಕನಿಷ್ಠ 50 ಕಿ.ಮೀ. ಸಾಗುವರು. ಇಲ್ಲಿಂದ ಕನಿಷ್ಠ 600 ಕಿ.ಮೀ. ಅಂತರವಿರುವ ಶ್ರೀಶೈಲಕ್ಕೆ ತೆರಳಲು 14 ದಿನಗಳಾದರೂ ಬೇಕಾಗುತ್ತದೆ. ಮರಗಾಲು ಮತ್ತು ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ತೆರಳುವುದರಿಂದ ದೇಹಕ್ಕೆ ವ್ಯಾಯಾಮ ಆಗುವುದು. ಭಕ್ತಿಯಿಂದ ಕ್ಷೇತ್ರ ದರ್ಶನ ಮಾಡಿದರೆ ನಮ್ಮ ಎಲ್ಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಎಂತಹ ಕಷ್ಟಗಳು ಬಂದರೂ ಸರಳವಾಗಿ ದೂರ ಸರಿಯುತ್ತವೆ ಎಂಬ ವಿಶ್ವಾಸ ನಮಗಿದೆ ಎನ್ನುತ್ತಾರೆ ಭಕ್ತರು. ಇದೇ ತೆರನಾಗಿ ಜಿಲ್ಲೆಯ ಮುಧೋಳ, ಬೀಳಗಿ, ಜಮಖಂಡಿ, ಬಾಗಲಕೋಟೆ, ಹುನಗುಂದ, ಬಾದಾಮಿ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಕಾಲ್ನಡಿಗೆ ಮೂಲಕ ಶ್ರೀಶೈಲಕ್ಕೆ ತೆರಳುವ ಸನ್ನಿವೇಶ ಎಲ್ಲಡೆ ಕಂಡು ಬರುತ್ತದೆ.