ಮಲೇಷ್ಯಾ ವಿಮಾನ ಮೂಲಕ 9/11 ಮಾದರಿ ದಾಳಿ ಅಸಾಧ್ಯ
ಹದಿಮೂರು ವರ್ಷಗಳ ಹಿಂದೆ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದಿದ್ದ ದಾಳಿ ಮಾದರಿಯಲ್ಲೇ ಮಲೇಷ್ಯಾದ..
ಪಿಟಿಐ, ಕೌಲಾಲಂಪುರ/ನವದೆಹಲಿ: ಹದಿಮೂರು ವರ್ಷಗಳ ಹಿಂದೆ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದಿದ್ದ ದಾಳಿ ಮಾದರಿಯಲ್ಲೇ ಮಲೇಷ್ಯಾದ ವಿಮಾನ ಬಳಸಿಕೊಂಡು ಭಾರತದ ಪ್ರಮುಖ ನಗರವೊಂದಕ್ಕೆ ದಾಳಿ ನಡೆಸಲು ಯೋಜನೆ ರೂಪುಗೊಂಡಿತ್ತು ಎಂಬ ಅಂಶವನ್ನು ಭಾರತೀಯ ವಾಯುಪಡೆ (ಐಎಎಫ್) ಹಾಗೂ ರಕ್ಷಣಾ ತಜ್ಞರು ಸರಾಸಗಟಾಗಿ ತಿರಸ್ಕರಿಸಿದ್ದಾರೆ.
ಒಂದು ವೇಳೆ ಮಲೇಷ್ಯಾದ ವಿಮಾನ ಭಾರತದ ವಾಯು ಪ್ರದೇಶ ಪ್ರವೇಶಿಸಿರುತ್ತಿದ್ದರೆ ಅದು ದೇಶದ ರಾಡಾರ್ ವ್ಯವಸ್ಥೆಯಲ್ಲಿ ಕಂಡುಬರುತ್ತಿತ್ತು ಎಂದು ಐಎಎಫ್‌ನ ಹಿರಿಯ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಅಮೆರಿಕದ ವಿದೇಶಾಂಗ ಖಾತೆ ಮಾಜಿ ಸಚಿವ ಸ್ಟ್ರೋಬ್ ಟಾಲ್ಬೋಟ್ 'ಭಾರತದ ನಿಗದಿತ ನಗರವನ್ನು ಗುರಿಯಾಗಿರಿಸಿಕೊಂಡು ಮಲೇಷ್ಯಾದ ವಿಮಾನವನ್ನು ಬಳಸಿಕೊಂಡು ದಾಳಿ ಮಾಡಲು ಯೋಜನೆ ಸಿದ್ಧಪಡಿಸಿರಬಹುದು. ಈ ಮೂಲಕ ಭಾರತದಲ್ಲಿ 9/11 ಮಾದರಿ ದಾಳಿಗೆ ಚಿಂತನೆ ನಡೆಸಿರಬಹುದು' ಎಂದು ಟ್ವೀಟ್ ಮಾಡಿದ್ದರು.
ಇದು ಸಾಧ್ಯವೇ ಇಲ್ಲ: ಆದರೆ ಇಂಥ ಮಾದರಿ ದಾಳಿ ಸಾಧ್ಯವೇ ಇಲ್ಲ ಎಂದು ಐಎಎಫ್‌ನ ಹಿರಿಯ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಏಕೆಂದರೆ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ಬಳಿ ಸರಣಿಯಲ್ಲಿ ರಾಡಾರ್‌ಗಳನ್ನು ಅಳವಡಿಸಲಾಗಿದೆ. ಹೀಗಾಗಿ, ಈ ಪ್ರದೇಶದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಏನಾದರೂ ಗೊತ್ತಾಗುತ್ತದೆ ಎನ್ನುತ್ತಾರೆ ಅವರು. ಅದಕ್ಕೊಂದು ಉದಾಹರಣೆಯನ್ನೂ ಅವರು ನೀಡುತ್ತಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಹವಾಮಾನ ಬಲೂನ್‌ಗಳು ಪತ್ತೆಯಾಗಿದ್ದವು. ಅದನ್ನು ಗುರುತಿಸಲು ಪಂಜಾಬ್‌ನ ವಾಯು ನೆಲೆಯಿಂದ ಎಸ್‌ಯು-30ಎಂಕೆಐ ವಿಮಾನಗಳನ್ನು ಬಳಸಲಾಗಿತ್ತು. ಹೀಗಾಗಿ, ದೇಶದ ವಾಯು ಪ್ರದೇಶ ಪ್ರದೇಶ ಪ್ರವೇಶಿಸುವ ವಿಮಾನ ಪತ್ತೆ ಸಾಧ್ಯ ಎಂದಿದ್ದಾರೆ ಐಎಎಫ್‌ನ ನಿವೃತ್ತ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಪಿ.ವಿ.ನಾಯಕ್.
ಶೋಧ ನಿಲ್ಲಿಸಿದ ಭಾರತ: ವಿಮಾನ ಶೋಧದಲ್ಲಿ ನಿರತವಾಗಿದ್ದ ಭಾರತ ಸದ್ಯಕ್ಕೆ ಅದನ್ನು ಸ್ಥಗಿತಗೊಳಿಸಿದೆ. ಈ ಬಗ್ಗೆ ಮಲೇಷ್ಯಾದಿಂದ ಹೊಸತಾಗಿ ಸೂಚನೆ ಬರುವ ವರೆಗೆ ಶೋಧ ಕಾರ್ಯ ಪುನರಾರಂಭಿಸದಿರಲು ಭಾರತದ ನೌಕಾಪಡೆ ನಿರ್ಧರಿಸಿದೆ. ಭಾರತದ ನೌಕಾಪಡೆ ಸುಮಾರು 2.5 ಲಕ್ಷ ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸಿದೆ.
ಸಿಮ್ಯುಲೇಟರ್ ಮಾಹಿತಿ ಪರಿಶೀಲನೆ: ನಾಪತ್ತೆಯಾಗಿರುವ ವಿಮಾನದ ಕಾಕ್‌ಪಿಟ್‌ನಲ್ಲಿ ಯಾರಿದ್ದರು ಎಂಬ ಬಗ್ಗೆ ಈಗ ತನಿಖೆ ಆರಂಭವಾಗಿದೆ. ವಿಮಾನ ಅಪಹರಿಸುವ ಬಗ್ಗೆ ಏನಾದರೂ ಯತ್ನ ನಡೆದಿತ್ತೇ ಎಂಬ ಬಗ್ಗೆ ತನಿಖೆ ಶುರುವಾಗಿದೆ ಎಂದು ಆಂಗ್ಲ ಸುದ್ದಿವಾಹಿನಿ ಸಿಎನ್‌ಎನ್ ವರದಿ ಮಾಡಿದೆ. ಅದಕ್ಕೆ ಪೂರಕವಾಗಿ ಶನಿವಾರ ಮಲೇಷ್ಯಾ ಅಧಿಕಾರಿಗಳು ಪೈಲಟ್ ಕ್ಯಾ. ಝಹೆರ್ ಅಹ್ಮದ್ ಶಾ ನಿವಾಸಕ್ಕೆ ತೆರಳಿ ಶೋಧ ಕಾರ್ಯ ನಡೆಸಿದ್ದರು.
ಈ ಸಂದರ್ಭದಲ್ಲಿ ಸಿಮ್ಯುಲೇಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿರುವ ಮಾಹಿತಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. 53 ವರ್ಷದ ಅವರಿಗೆ 18, 365 ಗಂಟೆಗಳ ಹಾರಾಟದ ಅನುಭವ ಇದೆ. ಅವರು ಮಲೇಷ್ಯದ ಮಾಜಿ ಅಧ್ಯಕ್ಷ ಅನ್ವರ್ ಇಬ್ರಾಹಿಂ ಅವರ ವಿಚಾರಣಾ ಪ್ರಕ್ರಿಯೆ ವೇಳೆ ಕೋರ್ಟ್‌ನಲ್ಲಿ ಹಾಜರಿದ್ದ.
25 ದೇಶಗಳಿಂದ
ಕಾರ್ಯಾಚರಣೆ
ಒಂಬತ್ತು ದಿನಗಳ ಹಿಂದೆ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವ ದೇಶಗಳ ಸಂಖ್ಯೆ 25ಕ್ಕೆ ಹೆಚ್ಚಿದೆ. ಮಲೇಷ್ಯಾ ಸಾರಿಗೆ ಮತ್ತು ರಕ್ಷಣಾ ಸಚಿವ ಹಶಿಮುದ್ದೀನ್ ಹುಸೇನ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ನಿಟ್ಟಿನಲ್ಲಿ ಮಲೇಷ್ಯಾ ಭಾರತ, ಬಾಂಗ್ಲಾದೇಶಗಳ ಜತೆ ನಿಕಟ ಸಂಪರ್ಕ ಇರಿಸಿಕೊಳ್ಳಲಾಗಿದೆ ಎಂದು ಹುಸೇನ್ ತಿಳಿಸಿದ್ದಾರೆ.