'ಆಮ್ ಆದ್ಮಿ'ಗೆ ಬಂತು ಕಂಟಕ!
ನಮ್ಮ ಜೀವಕ್ಕೆ ಏನಾದರೂ ಅಪಾಯವಾದರೆ ಇರಲಿ ಅಂತ ಜೀವವಿಮೆ ಮಾಡಿಸಿಕೊಳ್ಳುತ್ತೇವೆ. ಆದರೆ ಅಭಯ ಕೊಡುವ ಎಲ್ಐಸಿ ಯೋಜನೆಗೇ...
ಕಾರವಾರ: ನಮ್ಮ ಜೀವಕ್ಕೆ ಏನಾದರೂ ಅಪಾಯವಾದರೆ ಇರಲಿ ಅಂತ ಜೀವವಿಮೆ ಮಾಡಿಸಿಕೊಳ್ಳುತ್ತೇವೆ. ಆದರೆ ಅಭಯ ಕೊಡುವ ಎಲ್ಐಸಿ ಯೋಜನೆಗೇ ಜೀವಭಯ ಬಂದರೆ?
ಅರೆ, ಅದ್ಯಾವ ಯೋಜನೆ ಕೊನೆಗೊಂಡಿತು ಎಂದು ಹೌಹಾರಬೇಡಿ. ಅಸಲಿ ವಿಷಯ ಇರುವುದೇ ಇಲ್ಲಿ. ಇದೀಗ ಲೋಕಸಭೆ ಚುನಾವಣೆ ಎದುರಾಗಿದೆ. ಎಲ್ಲ ಪಕ್ಷಗಳಂತೆ ಹೊಸತಾಗಿ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷವೂ ಸ್ಪರ್ಧೆಗಿಳಿದಿದೆ. ಇಲ್ಲೇ ಇದೆ ಅಸಲಿ ವಿಷಯ. ಭಾರತೀಯ ಜೀವ ವಿಮಾ ನಿಗಮದ 'ಆಮ್ ಆದ್ಮಿ' ಯೋಜನೆಯೇ ಈಗ ತೀವ್ರ ನಿಗಾ ಘಟಕದಲ್ಲಿದ್ದಂತಾಗಿದೆ.
ಇದಕ್ಕೆ ನೀತಿ ಸಂಹಿತೆಯೇ ಕಾರಣ. ಜೀವ ವಿಮಾ ನಿಗಮದ 'ಆಮ್ ಆದ್ಮಿ' ವಿಮಾ ಯೋಜನೆ ಹೋರ್ಡಿಂಗ್ಗಳು ರಾಜ್ಯದ ಎಲ್ಲ ನಗರಗಳಲ್ಲೂ ರಾರಾಜಿಸುತ್ತಿವೆ. ಅವು ಈಗ ಚುನಾವಣಾ ಆಯೋಗದ ಕೆಂಗಣ್ಣಿಗೆ ಬೀಳುವ ಸಾಧ್ಯತೆ ಇದೆ. ಅಸ್ತಿತ್ವಕ್ಕೆ ಬಂದ ಸೀಮಿತ ಅವಧಿಯಲ್ಲೇ ರಾಷ್ಟ್ರಾದ್ಯಂತ ಸುದ್ದಿ ಮಾಡಿದ ಆಮ್ ಆದ್ಮಿ ಪಕ್ಷ ದೆಹಲಿ ಅಧಿಕಾರದ ಗದ್ದುಗೆಯನ್ನೂ ಹಿಡಿಯಿತು. ಆನಂತರ ಅಧಿಕಾರ ಕಳೆದುಕೊಂಡರೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದೆ. ರಾಜ್ಯದಲ್ಲೂ ಆಮ್ ಆದ್ಮಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ವಿಮಾ ನಿಗಮದ 'ಆಮ್ ಆದ್ಮಿ' ವಿಮಾ ಯೋಜನೆ ಜಾಹಿರಾತು ಎಷ್ಟು ಸಮಂಜಸ ಎನ್ನವಂತಾಗಿದೆ. ಹಾಗಂತ ಯೋಜನೆ ಏನೂ ಕೊನೆಗೊಳ್ಳುವುದಿಲ್ಲ. ಪರ್ಯಾಯ ಮಾರ್ಗ ಹುಡಕಬೇಕಷ್ಟೆ.
ಈಗಾಗಲೇ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಜಾಹೀರಾತು ಫಲಕಗಳನ್ನೂ ಕಿತ್ತು ಹಾಕಲಾಗಿದೆ. ಇಲ್ಲವೇ, ಬಣ್ಣ ಬಳಿದು ಮುಚ್ಚಲಾಗಿದೆ. ಜತೆಗೆ ಮುಚ್ಚಲಾಗುತ್ತಿದೆ. ವಿಮಾ ನಿಗಮದ ಆಮ್ ಆದ್ಮಿ ಜಾಹಿರಾತು ಫಲಕ ಮಾತ್ರ ಹಾಗೆ ಜನರನ್ನು ಆಕರ್ಷಿಸುತ್ತಿದೆ.
ನಿಮ್ಮ ಮುಖಾರವಿಂದವನ್ನು ಬೆಳಗಿಸುವ ವಿಮಾ ಯೋಜನೆ 'ಆಮ್ ಆದ್ಮಿ'ಯ ಜಾಹೀರಾತು ಫಲಕಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ನಗರದಲ್ಲಿ ಜನ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಈ ಹೋರ್ಡಿಂಗ್ಗಳನ್ನು ಹಾಕಲಾಗಿದೆ. ಇದೊಂದು ಗುಂಪು ವಿಮಾ ಯೋಜನೆಯ ಜಾಹಿರಾತು. ಅರ್ಹ 48 ಉದ್ಯೋಗಗಳಲ್ಲಿ ತೊಡಗಿಕೊಂಡವರಿಗಾಗಿ ಇದನ್ನು ಮಾಡಲಾಗಿದೆ. ಇದರಲ್ಲಿ ಕೃಷಿ ಕಾರ್ಮಿಕರು, ಹಾಲು ಉತ್ಪಾದಕರು, ಹಮಾಲಿಗಳು, ಆಟೋ ಚಾಲಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಸ್ವಸಹಾಯ ಗುಂಪುಗಳೂ ಬರಲಿವೆ. ಈ ಬರಹಗಳನ್ನು ಹೊತ್ತ ಬೃಹತ್ ಹೋರ್ಡಿಂಗ್ ಕಾರವಾರದ ಮಿತ್ರ ಸಮಾಜ ಮೈದಾನದ ಎದುರು ತಲೆ ಎತ್ತಿ ನಿಂತಿದೆ.
ಇನ್ನೂ ಕ್ರಮವಿಲ್ಲ: ಆಮ್ ಆದ್ಮಿ ಪಕ್ಷ ದೆಹಲಿ ಅಧಿಕಾರದ ಗದ್ದುಗೆ ಏರುವ ಮೂಲಕ ರಾಷ್ಟ್ರಾದ್ಯಂತ ಸಂಚಲನ ಉಂಟುಮಾಡಿದೆ. ಲೋಕಸಭಾ ಚುನಾವಣೆಗೂ ಇಳಿದಿರುವುದು ಭಾರತೀಯ ಜೀವ ವಿಮಾ ನಿಗಮಕ್ಕೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಹಾಗಿದ್ದರೂ ಆ ಯೋಜನೆಯ ಹೆಸರನ್ನು ಬದಲಿಸದೆ ಮುಂದುವರಿಸಿರುವುದು, ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೂ ಹೋರ್ಡಿಂಗ್ ಮುಚ್ಚಲು ಯಾವುದೆ ಕ್ರಮ ಕೈಗೊಂಡಿಲ್ಲ.
ದೂರಿಗೆ ನಿರ್ಧಾರ: ಆಮ್ ಆದ್ಮಿ ವಿಮಾ ಯೋಜನೆ ಜಾಹೀರಾತು ಫಲಕದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲು ಕೆಲವರು ನಿರ್ಧರಿಸಿದ್ದಾರೆ. ಈ ಫಲಕಗಳು ರಾಜ್ಯದಲ್ಲಷ್ಟೆ ಅಲ್ಲ, ಬೇರೆ ಬೇರೆ ರಾಜ್ಯಗಳಲ್ಲೂ ಇವೆ. ಚುನಾವಣಾ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇಂತಹ ಫಲಕಗಳನ್ನು ತೆಗೆದು ಹಾಕಬೇಕು ಹಾಗೂ ಭಾರತೀಯ ವಿಮಾ ನಿಗಮ ಈ ಯೋಜನೆಯ ಹೆಸರನ್ನು ಬದಲಿಸಬೇಕೆಂಬ ಕೂಗು ಕೇಳಿಬರುತ್ತಿದೆ.
ಪಕ್ಷದ ನಂತರ ಯೋಜನೆ
ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ಆಮ್ ಆದ್ಮಿ ರಾಜಕೀಯ ಪಕ್ಷವಾಗಿ 2012 ನವೆಂಬರ್ನಲ್ಲೇ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಭಾರತೀಯ ಜೀವ ವಿಮಾ ನಿಗಮ ಆಮ್ ಆದ್ಮಿ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು ಜನವರಿ 2013ರಿಂದ. ಅಂದರೆ, ರಾಜಕೀಯ ಪಕ್ಷವೊಂದು ಅಸ್ತಿತ್ವಕ್ಕೆ ಬಂದ ಮೇಲೆ ಅದೇ ಹೆಸರಿನಲ್ಲಿ ವಿಮಾ ನಿಗಮ ಯೋಜನೆ ಜಾರಿಗೊಳಿಸಿದ್ದು ಗಮನಾರ್ಹ ಸಂಗತಿ.
ವಸಂತಕುಮಾರ್ ಕತಗಾಲ