ಕರುಣಾನಿಧಿ ಸುತ್ತ ಮುತ್ತಲೂ ವಂಚಕರು; ಅಳಗಿರಿ ಅಳಲು
ಲೋಕಸಭೆ ಚುನಾವಣೆಗಿನ್ನು ತಿಂಗಳಷ್ಟೇ ಬಾಕಿ ಇದೆ ಎನ್ನುವಾಗಲೇ ಕರುಣಾನಿಧಿ..
ಮಧುರೆ: ಲೋಕಸಭೆ ಚುನಾವಣೆಗಿನ್ನು ತಿಂಗಳಷ್ಟೇ ಬಾಕಿ ಇದೆ ಎನ್ನುವಾಗಲೇ ಕರುಣಾನಿಧಿ ನೇತೃತ್ವದ ಡಿಎಂಕೆ ಕಾರ್ಯಕರ್ತರು ಕೌಟುಂಬಿಕ ಜಗಳದಿಂದಾಗಿ ಗೊಂದಲಕ್ಕೆ ಸಿಲುಕಿದ್ದಾರೆ.
ಪಕ್ಷದಿಂದ ಉಚ್ಚಾಟಿತ ಕರುಣಾನಿಧಿ ಹಿರಿಯ ಪುತ್ರ ಎಂ.ಕೆ. ಅಳಗಿರಿ ಮಧುರೆಯಲ್ಲಿ ತಮ್ಮ ಬೆಂಬಲಿಗರ ಜತೆ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಪಕ್ಷದಲ್ಲಿರುವ ಕೆಲವು ಶಕ್ತಿಗಳು ಕರುಣಾನಿಧಿ ಅವರ ದಾರಿ ತಪ್ಪಿಸುತ್ತಿವೆ. ಅವರನ್ನು ಅಧ್ಯಕ್ಷರಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಮ್ಮ ಕಿರಿಯ ಸಹೋದರ ಸ್ಟಾಲಿನ್ ಹೆಸರೆತ್ತದೆ ಅಳಗಿರಿ ಟಾಂಗ್ ನೀಡಿದ್ದಾರೆ. ಜತೆಗೆ, ಅಂಥ ವಂಚಕರಿಂದ ಕರುಣಾನಿಧಿ ಅವರನ್ನು ರಕ್ಷಿಸುವುದಾಗಿ ಹೇಳಿದ್ದಾರೆ.
ಬೆಂಬಲಿಗರ ಕಡೆಗಣನೆ: ಚುನಾವಣೆ ಸ್ಪರ್ಧಿಸುವ ಆಸಕ್ತಿ ತೋರಿಸಿ ಬೆಂಬಲಿಗರು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆಯನ್ನೂ ನಡೆಸಿಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಪಕ್ಷದ ಅಧ್ಯಕ್ಷರನ್ನು ಪ್ರಶ್ನಿಸಿದ್ದೆ. ಆಗ ಪಕ್ಷದ ಅಧ್ಯಕ್ಷರು ನನ್ನ ಬೆಂಬಲಿಗರನ್ನು ಅಮಾನತು ಮಾಡುವ ಎಚ್ಚರಿಕೆ ನೀಡಿದ್ದರು. ಆಗ ನಾನು ಬೆಂಬಲಿಗರನ್ನು ಅಮಾನತು ಮಾಡಿದರೆ ನನ್ನನ್ನೇ ಅಮಾನತು ಮಾಡಿದಂತೆ ಎಂದಿದ್ದೆ. ಆ ಬಳಿಕ ಏನೆಲ್ಲಾ ಆಯಿತು ಎನ್ನುವುದು ಎಲ್ಲರಿಗೂ ಗೊತ್ತು. ನನ್ನನ್ನು ಅಮಾನತು ಮಾಡಲಾಯಿತು ಎಂದು ಅಳಗಿರಿ ಹೇಳಿಕೊಂಡಿದ್ದಾರೆ.
ಹೊಸ ಪಕ್ಷ ಕಟ್ಟಲ್ಲ
ಡಿಎಂಕೆಯಿಂದ ಹೊರಬಂದು ಹೊಸ ಪಕ್ಷ ಕಟ್ಟುವ ಊಹಾಪೋಹಗಳನ್ನು ಅಳಗಿರಿ ತಳ್ಳಿಹಾಕಿದ್ದಾರೆ. ಅಂತಹ ಯಾವುದೇ ಉದ್ದೇಶ ತಮ್ಮ ಮುಂದಿಲ್ಲ. ನಾನು ಡಿಎಂಕೆಯೊಂದಿಗೇ ಇದ್ದೇನೆ ಎಂದು ಅವರು ಹೇಳಿದ್ದಾರೆ.
ಸೋಲಿನತ್ತ ಡಿಎಂಕೆ
ಇತಿಹಾಸದಲ್ಲೇ ಅತಿ ಹೀನಾಯ ಸೋಲಿನತ್ತ ಡಿಎಂಕೆ ಹೆಜ್ಜೆ ಹಾಕಲಿದೆ ಎಂದು ಅಳಗಿರಿ ಹೇಳಿಕೊಂಡಿದ್ದಾರೆ. ಈ ಸೋಲಿಗೆ ಪಕ್ಷದೊಳಗಿನವರೇ ಕಾರಣರಾಗಲಿದ್ದಾರೆ ಎಂದು ಆರೋಪಿಸಿದ್ದಾರೆ.