ನೇಗಿ ಮೇಷ್ಟ್ರು
ವೃತ್ತಿಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ
ಶಿಕ್ಷಕರಾಗಿದ್ದ ನೇಗಿ 1975ರಲ್ಲಿ ನಿವೃತ್ತರಾಗಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ 1951ರಲ್ಲಿ ಪ್ರಪ್ರಥಮ ಲೋಕಸಭಾ ಚುನಾವಣೆ ನಡೆಯಿತು. ಚಿನಿ ಕ್ಷೇತ್ರದಲ್ಲಿ ಮತ ಚಲಾಯಿಸಿದ ನೇಗಿ ಇಂದಿಗೂ ಚುನಾವಣೆಯೆಂದರೆ ಅಂದಿನ ಉತ್ಸಾಹ ತೋರುತ್ತಾರೆ. ಚಿನಿ ಕ್ಷೇತ್ರವನ್ನು ಈಗ ಕಿನ್ನೌರ್ ಎಂದು ಮರು ನಾಮಕರಣ ಮಾಡಲಾಗಿದೆ. ಹಿಮಚ್ಛಾದಿತ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕಿನ್ನೌರ್‌ನಲ್ಲಿ ಬೇರೆಡೆಗಿಂತ ಮೊದಲು ಮತದಾನ ನಡೆದಿತ್ತು. ಮೊಟ್ಟ ಮೊದಲ ಬಾರಿ ಜವಾಹರ್ ಲಾಲ್‌ರಿಗೆ ಮತ ಹಾಕಿದ ನೇಗಿ, ಎರಡನೇ ಬಾರಿ ಉತ್ತಮ ಆಡಳಿತದ ಭರವಸೆ ನೀಡಿದ ಮತ್ತೊಂದು ಪಕ್ಷಕ್ಕೆ ಮತ ಹಾಕ್ಕಿದ್ದಾಗಿ ತಿಳಿಸುತ್ತಾರೆ. ಆದ್ರೆ ಆ ಪಕ್ಷದ ಹೆಸರು ಬಿಟ್ಟುಕೊಡಲು ಮಾತ್ರ ಸಿದ್ಧರಿಲ್ಲ!
ನನಗೆ ಬೇಸರವಿದೆ
ಪ್ರಸ್ತುತ ರಾಜಕೀಯ ಸ್ಥಿತಿ ಬಗ್ಗೆ ನೇಗಿ ಅಜ್ಜನಿಗೆ ತೀರಾ ಬೇಸರವಿದೆ. ಇಂದಿನ ಭ್ರಷ್ಟ ರಾಜಕಾರಣಿಗಳು ಸಮಸ್ಯೆಗಳನ್ನು ಬಗೆಹರಿಸುವ ಬದಲು ಕೋಲಾಹಲ ಸೃಷ್ಟಿಸಿ ಸಂಸತ್ತಿನ ಸಮಯವನ್ನು ವ್ಯರ್ಥಮಾಡುತ್ತಿದ್ದಾರೆನ್ನುವುದು ಈ ಹಿರಿಯಜ್ಜನ ಬೇಸರಕ್ಕೆ ಕಾರಣ. ಯಾವ ಪಕ್ಷವೂ ಜನರ ಕಷ್ಟಕ್ಕೆ ಸ್ಪಂದಿಸುವುದಿಲ್ಲ ಎನ್ನುತ್ತಾರೆ ನೇಗಿ. ತಮ್ಮ ಮನೆಯಿಂದ 1ಕಿ.ಮೀ. ದೂರದಲ್ಲಿರುವ ಮತಗಟ್ಟೆಗೆ ನೇಗಿ ನಡೆದುಕೊಂಡೇ ಹೋಗುತ್ತಾರೆ. ತಮಗಿಂತ 10 ವರ್ಷ ಕಿರಿಯ ಪತ್ನಿ ಹೀರಾ ಮಣಿ ನೇಗಿ ಜೊತೆ ಮತಗಟ್ಟೆಗೆ ಹೋಗುತ್ತಾರೆ. ಕಣ್ಣು ಸರಿಯಾಗಿ ಕಾಣುವುದಿಲ್ಲ, ಕಿವಿ ಕೇಳುವುದಿಲ್ಲ, ಮೈ-ಕೈಯಲ್ಲಿ ಶಕ್ತಿಯಿಲ್ಲ. ಆದ್ರೂ ಮತದಾನಕ್ಕೆ ಯಾವತ್ತೂ ಸೈ! ಇವರಿಗೆ ವಿದ್ಯುನ್ಮಾನ ಮತಯಂತ್ರ (ಊಗಂ) ಉಪಯೋಗಿಸಲು ಗೊತ್ತಿದೆಯಂತೆ!
ಸನ್ಮಾನಗಳ ಮಹಾಪೂರ!
ನೋಟಾ (NOTA- None of the above) ಆಯ್ಕೆ ಬಗ್ಗೆ ತಿಳಿದಿರುವ ನೇಗಿ, ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಬೇಕು ಎನ್ನುತ್ತಾರೆ. ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ತಡೆಗಟ್ಟಬಲ್ಲ ಪ್ರಾಮಾಣಿಕ ನಾಯಕನನ್ನು ಗೆದ್ದುಬರಬೇಕು ಎನ್ನುವುದು ಅಜ್ಜನ ಆಶಯ. ಮೇ.7ರಂದು ಕಲ್ಪಾ ಗ್ರಾಮದಲ್ಲಿ ಮತ ಹಾಕಲಿರುವ ನೇಗಿಯವರನ್ನು 2010ರಲ್ಲಿ ಅಂದಿನ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲಾ, ಚುನಾವಣಾ ಆಯೋಗದ ವಜ್ರ ಮಹೋತ್ಸವದ ಪ್ರಯುಕ್ತ ಸನ್ಮಾನಿಸಿದ್ದರು. 2007, 2012ರ ವಿಧಾನಸಭಾ ಮತ್ತು 2009ರ ಸಂಸದೀಯ ಚುನಾವಣೆಯಲ್ಲಿ ಮತ ಹಾಕಿರುವ ನೇಗಿ ದೃಶ್ಯವನ್ನು ಕ್ಯಾಮೆರಾ ಮೂಲಕ ರೆಕಾರ್ಡ್ ಮಾಡಲಾಗಿದೆ. ಇತ್ತೀಚೆಗೆ ಚುನಾವಣಾ ಅಧಿಕಾರಿಗಳ ತಂಡವೊಂದು ಶಿಮ್ಲಾದಿಂದ 250 ಕಿ.ಮೀ. ದೂರದಲ್ಲಿರುವ ನೇಗಿಯವರ ಕ್ಷೇಮ ಸಮಾಚಾರ ತಿಳಿದುಕೊಂಡು ಬಂದಿದೆ. ಮುಂಬರುವ ಚುನಾವಣೆಯಲ್ಲಿ ಮತ ಹಾಕಲು ಕೇಳಿಕೊಂಡಿದೆ.